– ಸುಳ್ಳುಕೋರರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಕೊಪ್ಪಳ: ಅಭಿನವ ಗವಿಸಿದ್ದೇಶ್ವರ ಶ್ರೀಗಳ (Gavisiddeshwara Sri) ಹೆಸರಿನಲ್ಲಿ ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿದಾಡುತ್ತಿದ್ದು, ಈ ಬಗ್ಗೆ ಗವಿಮಠ ಸ್ಪಷ್ಟನೆ ನೀಡಿದೆ.
ದಸರಾ ಉದ್ಘಾಟನೆಗೆ ಶ್ರೀಗಳು ತೆರಳುವುದಿಲ್ಲ, ದಸರಾ ಆಹ್ವಾನ ತಿರಸ್ಕರಿಸಿದ್ದಾರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಒಂದೂವರೆ ಗಂಟೆ ಮನವೊಲಿಸಿದರೂ ಶ್ರೀಗಳು ಒಪ್ಪಲಿಲ್ಲ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ವೈರಲ್ ಆಗಿವೆ. ಅಲ್ಲದೆ, ಕೊಪ್ಪಳವನ್ನ ಕಾರ್ಖಾನೆಗಳಿಂದ ಕಾಪಾಡಬೇಕು ಎಂಬ ಷರತ್ತು ಒಪ್ಪಿಕೊಂಡರೆ ಮಾತ್ರ ದಸರಾ ಉದ್ಘಾಟನೆಗೆ ಬರುವುದಾಗಿ ಶ್ರೀಗಳು ಹೇಳಿಕೆ ನೀಡಿದ್ದಾರೆ ಹಾಗೂ ಶ್ರೀಗಳ ನಿರ್ಧಾರಕ್ಕೆ ರಾಜ್ಯವ್ಯಾಪಿ ಪ್ರಶಂಸೆ ವ್ಯಕ್ತವಾಗಿದೆ ಎಂಬ ಹೇಳಿಕೆ ಕುರಿತ ಸುಳ್ಳು ಪೋಸ್ಟರ್ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಎಲ್ಲ ಮಾಹಿತಿಗಳು ಸಂಪೂರ್ಣ ಸುಳ್ಳಾಗಿದ್ದು, ಇಂತಹ ಯಾವುದೇ ಹೇಳಿಕೆಗಳನ್ನ ಗವಿಮಠದ ವತಿಯಿಂದ ನೀಡಲಾಗಿಲ್ಲ ಎಂದು ʻಪಬ್ಲಿಕ್ ಟಿವಿʼಗೆ ಗವಿಮಠದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಗವಿಮಠದಿಂದ ಅಧಿಕೃತವಾಗಿ ಪ್ರಕಟವಾಗುವ ಮಾಹಿತಿಯನ್ನ ಮಾತ್ರ ಪರಿಗಣಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನಧಿಕೃತ ಮಾಹಿತಿಗಳನ್ನ ನಂಬಬಾರದು ಎಂದು ಗವಿಮಠದ ಮೂಲಗಳು ಮನವಿ ಮಾಡಿವೆ.
ಕಾನೂನು ಕ್ರಮದ ಎಚ್ಚರಿಕೆ
ಇನ್ನೂ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ದಸರಾ ಉದ್ಘಾಟನೆಗೆ ಒಪ್ಪಿಲ್ಲ, ಸರ್ಕಾರದ ಆಹ್ವಾನ ತಿರಸ್ಕರಿಸಿದ್ದಾರೆ ಎಂಬುದು ಸುಳ್ಳು ಮತ್ತು ಆಧಾರರಹಿತ ಎಂದು ಸಚಿವ ಶಿವರಾಜ್ ಎಸ್. ತಂಗಡಗಿ (Shivaraj Tangadagi) ಹೇಳಿದ್ದಾರೆ. ಮೈಸೂರು ದಸರಾ ಕುರಿತು ಸುಳ್ಳು ಮತ್ತು ಆಧಾರರಹಿತ ಮಾಹಿತಿ ಹರಡುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಮೈಸೂರು ದಸರಾ ಉದ್ಘಾಟನೆ ವಿಚಾರದಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸರ್ಕಾರದ ಸ್ಪಷ್ಟನೆಯಿಂದ ತೆರೆ ಬಿದ್ದಿದೆ.

