Connect with us

Bengaluru City

ಕಾಶ್ಮೀರದಲ್ಲಿ ರಾಜ್ಯದ ಸಾಂಸ್ಕೃತಿಕ ಕೇಂದ್ರ, ಹೋಟೆಲ್ ತೆರೆಯಲು ಚಿಂತನೆ- ಸಿ.ಟಿ.ರವಿ

Published

on

ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಕಾಶ್ಮೀರದಲ್ಲಿ ಸಾಂಸ್ಕೃತಿಕ ಕೇಂದ್ರ ಹಾಗೂ ಹೋಟೆಲ್ ತೆರೆಯುವ ಯೋಚನೆ ಇದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ನಗರದ ಜಂಗಲ್ ಲಾಡ್ಜ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಂಸ್ಕೃತಿಕ ಕೇಂದ್ರ ಹಾಗೂ ಹೋಟೆಲ್ ತೆರೆಯಲು ಈಗಾಗಲೇ ಜಮ್ಮು ಕಾಶ್ಮೀರ ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ. ಈ ವರೆಗೆ ರಾಜ್ಯಪಾಲರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜಮ್ಮು ಕಾಶ್ಮೀರದ ರಾಜ್ಯಪಾಲು ಒಪ್ಪಿಗೆ ಸೂಚಿಸಿದ ಬಳಿಕ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ, ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ. ಪ್ರವಾಸೋದ್ಯಮ ಹಾಗೂ ಉದ್ಯೋಗ ಎಂಬ ಘೋಷ ವಾಕ್ಯದೊಂದಿದೆ ಈ ಬಾರಿ ಪ್ರವಾಸೋದ್ಯಮ ಆಚರಿಸಲಾಗುತ್ತಿದೆ. ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ತಲಾ 30 ಸಾವಿರ ರೂ. ಹಣ ಬಿಡುಗಡೆ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುವುದು. ರಾಮನಗರದಲ್ಲಿ ಸ್ಥಳೀಯ ಆಹಾರವನ್ನು ದಸರೆಯ ಪ್ರವಾಸಿಗರಿಗೆ ಪರಿಚಯಿಸಲು, ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಹೆದ್ದಾರಿ ಪಕ್ಕದಲ್ಲಿ ತಟ್ಟೆ ಇಡ್ಲಿಯಿಂದ ಹಿಡಿದು ನಾನ್ ವೆಜ್ ಆಹಾರದ ಪರಿಚಯ ಮಾಡಿಸುತ್ತೇವೆ ಎಂದು ತಿಳಿಸಿದರು.

ಮಂಡ್ಯದಲ್ಲಿ ಕೃಷಿ ಸಂಸ್ಕೃತಿಯನ್ನು ಪರಿಚಯಿಸಲು ಹಲವು ವ್ಯವಸ್ಥೆ ಮಾಡಲಾಗಿದೆ. ಕಬ್ಬು ಜಗಿದು ತಿನ್ನುವ, ಬೇಸಾಯದ ಅನುಭವ ಮಾಡಿಸುವುದು, ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟದಂತಹ ವಿನೂತನ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಇದಕ್ಕಾಗಿ ಮಂಡ್ಯ, ರಾಮನಗರ ಜಿಲ್ಲೆಗಳಿಗೆ ತಲಾ 15 ಲಕ್ಷ ರೂ. ಬಿಡುಗಡೆ ಮಾಡಿದ್ದೇವೆ. ಮೈಸೂರಿನಲ್ಲಿ ತ್ರೀಡಿ ಮ್ಯಾಪಿಂಗ್ ಶೋ, ಹಸಿರು ಸಂತೆ, ಪಾರಂಪರಿಕ ಕ್ರೀಡೆಗಳು, ಮಕ್ಕಳ ಸಾಹಸ ಕೇಂದ್ರ, ಲೇಸರ್ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಹೊರ ರಾಜ್ಯದ ವಾಹನಗಳಿಗೆ ಪ್ರವೇಶ ತೆರಿಗೆ ಇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ದಸರೆಗಾಗಿ ಮೈಸೂರು, ಮಂಡ್ಯಗಳಿಗೆ ಭೇಟಿ ನೀಡಲು ಪ್ರವಾಸಿ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಮುಂದೆ ಪ್ರವೇಶ ತೆರಿಗೆ ಕುರಿತು ಚರ್ಚಿಯಾಗಲಿ. ಒಂದು ದೇಶ, ಒಂದು ತೆರಿಗೆ ಪ್ರವಾಸಿ ವಾಹನಗಳ ಪ್ರವೇಶ ತೆರಿಗೆಗೂ ತರುವ ಬಗ್ಗೆ ಚರ್ಚೆ ಆಗಲಿ ಎಂದು ತಿಳಿಸಿದರು.

ಅನರ್ಹರು ರಾಜೀನಾಮೆ ನೀಡಿದ್ದರಿಂದಲೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು. ಅವರಿಗೆ ನಾವು ಕೃತಜ್ಞರಾಗಿರುತ್ತೇವೆ, ಅವರನ್ನು ಮರೆಯುವ ಕೃತಜ್ಞರು ನಾವಲ್ಲ ಎಂದರು. ಅನರ್ಹ ಶಾಸಕರ ಕುಟುಂಬ ರಾಜಕಾರಣ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲ ಸಂದರ್ಭಗಳಲ್ಲಿ ಕೆಲ ವಿಚಾರಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ರಾಜಕಾರಣವನ್ನು ಹಂಗೆ ಮಾಡಬೇಕು. ವಾತಾವರಣಕ್ಕೆ ತಕ್ಕಂತೆ ನಮ್ಮ ಪಕ್ಷದ ನಿಲುವು ಬದಲಾಗುತ್ತೆ ಎಂದರು.

Click to comment

Leave a Reply

Your email address will not be published. Required fields are marked *