ನವದೆಹಲಿ: ರಾಜ್ಯ ಬಿಜೆಪಿಯಲ್ಲಿನ ಅಡ್ಡಮತದಾನದ (Cross Vote) ವಿವಾದಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸಲು ಹೊರಟಿದ್ದ ನಿರ್ಧಾರದಿಂದ ಬಿಜೆಪಿ (BJP) ಅಧಿಕೃತವಾಗಿ ಹಿಂದೆ ಸರಿದಿದೆ.
ಪಕ್ಷದ ಹಿರಿಯ ಶಾಸಕರು ಹಾಗೂ ನಾಯಕರಿಂದ ವ್ಯಕ್ತವಾದ ತೀವ್ರ ವಿರೋಧದ ಬೆನ್ನಲ್ಲೇ ಆಣೆ ಪ್ರಮಾಣಕ್ಕೆ ಬ್ರೇಕ್ ಬಿದ್ದಿದ್ದು ಧರ್ಮಸ್ಥಳದಲ್ಲಿ(Dharmasthala) ನಡೆಸಲು ಉದ್ದೇಶಿಸಿದ್ದ ಶಾಸಕಾಂಗ ಪಕ್ಷದ ಸಭೆಯನ್ನೂ ರದ್ದುಗೊಳಿಸಲಾಗಿದೆ.
ಅಡ್ಡ ಮತದಾನ ನಡೆಸಿದ ಬಗ್ಗೆ ಇಂದು ಹೈಕಮಾಂಡ್ ನಾಯಕರ ಭೇಟಿಗೆ ಆಗಮಿಸಿದ ಅಶೋಕ್ ಅವರು ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಚರ್ಚಿಸಿದ್ದರು. ಆದರೆ, ನಾನು ಪಕ್ಷದ ಹಿರಿಯ ನಾಯಕರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದಾಗ, ಬಹುತೇಕ ಶಾಸಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇಂತಹ ರಾಜಕೀಯ ಬೆಳವಣಿಗೆಗಳು ಮೊದಲ ಬಾರಿಗೆ ಆಗುತ್ತಿಲ್ಲ. ಪವಿತ್ರ ಕ್ಷೇತ್ರವಾದ ಧರ್ಮಸ್ಥಳವನ್ನು ಇಂತಹ ರಾಜಕೀಯ ವಿಚಾರಗಳಿಗೆ ಎಳೆದು ತರುವುದು ಬೇಡ ಎಂದು ಒಮ್ಮತದಿಂದ ನಿರ್ಧರಿಸಲಾಗಿದೆ. ಹೀಗಾಗಿ ಅಲ್ಲಿ ಸಭೆ ನಡೆಸುತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಂಜುನಾಥನ ಮನೆಯಲ್ಲೂ ಸುಳ್ಳು ಪ್ರಮಾಣ ಮಾಡಿದರೆ ಹೇಗೆ: ಸುರೇಶ್ ಕುಮಾರ್ ಪ್ರಶ್ನೆ
ಆಣೆ-ಪ್ರಮಾಣದ ವಿಚಾರವಾಗಿ ಇದು ನನ್ನ ಅಭಿಪ್ರಾಯವಾಗಿದ್ದು ಉಳಿದ ನಾಯಕರ ಜೊತೆ ಚರ್ಚಿಸಿ ಅಂತಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: 19,020 ಫಲಾನುಭವಿಗಳಿಗೆ ಒಂದೇ ಖಾತೆ: ಗೃಹಲಕ್ಷ್ಮಿ ಯೋಜನೆ ಅನುಷ್ಠಾನದಲ್ಲಿ ಭಾರೀ ಲೋಪ
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ನೀಡಿರುವ ಇತ್ತೀಚಿನ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಅಶೋಕ್, ನಾನು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಬೆಂಗಳೂರಿಗೆ ಮರಳಿದ ನಂತರ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲಿದ್ದೇನೆ. ಅವರು ಯಾವ ಅರ್ಥದಲ್ಲಿ ಆ ಹೇಳಿಕೆ ನೀಡಿದ್ದಾರೋ ಎಂಬುದು ಭೇಟಿಯ ಬಳಿಕ ತಿಳಿಯಲಿದೆ ಎಂದರು.
