– ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿದ ಬಿಜೆಪಿ ಶಾಸಕ
ಮಂಗಳೂರು: ನಾನು ಅಡ್ಡ ಮತದಾನ (Cross Voting Row) ಮಾಡಿಲ್ಲ. ಇದಕ್ಕೆ ಮಂಜುನಾಥ ಸ್ವಾಮಿಯೇ ಸಾಕ್ಷಿ ಎಂದು ಬಿಜೆಪಿ ಶಾಸಕ ಹೆಚ್.ಕೆ.ಸುರೇಶ್ (H.K.Suresh) ಆಣೆ-ಪ್ರಮಾಣ ಮಾಡಿದ್ದಾರೆ.
ಅಡ್ಡ ಮತದಾನ ಆರೋಪ ಹಿನ್ನೆಲೆಯಲ್ಲಿ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಬೇಲೂರು ಶಾಸಕ ಸುರೇಶ್ ಅವರು ಧರ್ಮಸ್ಥಳಕ್ಕೆ (Dharmasthala) ತೆರಳಿ ಆಣೆ-ಪ್ರಮಾಣ ಮಾಡಿದರು. ಆಣೆ-ಪ್ರಮಾಣಕ್ಕೂ ಮುನ್ನ ಧರ್ಮಸ್ಥಳ ನೇತ್ರಾವತಿ ಸ್ನಾನ ತೀರ್ಥ ಸಂಪ್ರೋಕ್ಷಣೆ ಮಾಡಿದರು. ನಂತರ ನೇತ್ರಾವತಿ ಸ್ನಾನಘಟ್ಟದಿಂದ ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಇದನ್ನೂ ಓದಿ: ಅಡ್ಡ ಮತದಾನ ಆರೋಪ; ಆಣೆ-ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಹೊರಟ ಶಾಸಕ ಹೆಚ್.ಕೆ.ಸುರೇಶ್
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸುದ್ದಿ ಬಂದ ಕ್ಷಣ ನನಗೆ ಹಾಗೂ ನನ್ನ ಕ್ಷೇತ್ರದ ಜನತೆಗೆ ತೀವ್ರ ಬೇಸರವಾಗಿದೆ. ಭಗವಂತನನ್ನೇ ನಂಬಿ ಬದುಕುವ, ಸಂಘಟನೆಯೇ ಶಕ್ತಿ ಎಂದು ನಂಬಿರುವ ವ್ಯಕ್ತಿ ನಾನು. ನನಗೆ ತಾಯಿ ಬೇರೆಯಲ್ಲ, ಪಕ್ಷ ಬೇರೆಯಲ್ಲ. ನನ್ನಂಥವನ ಮೇಲೆ ಇಂತಹ ಆರೋಪ ಬಂದಿದ್ದು, ಸತ್ಯಕ್ಕೆ ದೂರವಾದದ್ದು. ಆ ದಿನವೇ ವಿಧಾನಸೌಧಕ್ಕೆ ಹೋಗಿ ನಾನು ಅಡ್ಡ ಮತದಾನ ಮಾಡಿಲ್ಲ, ಪಕ್ಷದ್ರೋಹ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಸಂಘ ಪರಿವಾರದಿಂದ ಬಂದು ಪ್ರಾಮಾಣಿಕವಾಗಿ ಹಿಂದುತ್ವಕ್ಕೆ ಒತ್ತು ಕೊಡುವವನು ನಾನು. ನನ್ನ ಮೇಲೆ ಕಳಂಕ ತರುವ ಯತ್ನ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಸಾಕ್ಷಾತ್ ಪುಣ್ಯಕ್ಷೇತ್ರ ಧರ್ಮಸ್ಥಳವೇ ಸಾಕ್ಷಿ. ಮೊದಲು ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದು ಸೇವೆಯನ್ನು ಸಲ್ಲಿಸಿದ್ದೇನೆ. ಬಳಿಕ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಸ್ವಾಮಿಯ ಮುಂದೆಯೇ ಆಣೆ-ಪ್ರಮಾಣ ಮಾಡುತ್ತಿದ್ದೇನೆ. ನಾನು ಬಿಜೆಪಿ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತ. ನಾನು ಅಡ್ಡ ಮತದಾನ ಮಾಡಿಲ್ಲ. ನಮ್ಮ ರಾಜ್ಯಾಧ್ಯಕ್ಷರು ಹಾಗೂ ವಿಪಕ್ಷ ನಾಯಕರು ಸೂಚಿಸಿದ ಅಭ್ಯರ್ಥಿಗಳಿಗೇ ನಾನು ಮತ ಹಾಕಿದ್ದೇನೆ. ಇದಕ್ಕೆ ಮಂಜುನಾಥ ಸ್ವಾಮಿಯೇ ಸಾಕ್ಷಿ, ಜೊತೆಗೆ ನನ್ನ ಕ್ಷೇತ್ರದ ಜನತೆಯೇ ಸಾಕ್ಷಿ. ನನ್ನ ಕ್ಷೇತ್ರದ ಎಲ್ಲಾ ಮುಖಂಡರೊAದಿಗೆ ಬಂದು ಮಂಜುನಾಥ ಸ್ವಾಮಿಗೆ ನನ್ನ ಭಕ್ತಿ ಹಾಗೂ ಭಾವನೆಯನ್ನು ಅರ್ಪಿಸಿದ್ದೇನೆ. ನನಗೇನು ಅದರಿಂದ ಭಯವಿಲ್ಲದೇ ಪರಮಾತ್ಮನ ಮುಂದೆ ಅಂಗಲಾಚಿ ಸತ್ಯ ಹೇಳುತ್ತಿದ್ದೇನೆ ಎಂದು ತಿಳಿಸಿದರು.
ಜೂನ್ 18ರಂದು ಚುನಾವಣೆ ಮುಗಿದ ಬಳಿಕ 19ರಂದು ಪ್ರಥಮವಾಗಿ ರಾಜ್ಯಾಧ್ಯಕ್ಷರನ್ನು ಹಾಗೂ ವಿಪಕ್ಷ ನಾಯಕರನ್ನು ಭೇಟಿಯಾಗಿ ಪತ್ರ ಕೊಟ್ಟಿದ್ದೇನೆ. ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರಿಗೂ ಪತ್ರ ಕಳುಹಿಸಿದ್ದೇನೆ. ರಾಷ್ಟ್ರೀಯ ನಾಯಕ ಬಿ.ಎಲ್.ಸಂತೋಷ್ ಅವರಿಗೂ ಪತ್ರ ಬರೆದಿದ್ದೇನೆ. ನಾನು ನಿಷ್ಠಾವಂತ, ನನ್ನ ಮೇಲೆ ಆರೋಪ ಬರುತ್ತಿದೆ. ಭಗವಂತ ಮಂಜುನಾಥನೇ ಸಾಕ್ಷಿ ಎಂದು ಅವರಿಗೆ ತಿಳಿಸಿದ್ದೇನೆ. ಧರ್ಮಸ್ಥಳಕ್ಕೆ 62 ಶಾಸಕರು ಹೋಗಿ ಪ್ರಮಾಣ ಮಾಡುವ ಹಾಗೂ ಅಲ್ಲೇ ಶಾಸಕಾಂಗ ಪಕ್ಷದ ಸಭೆ ಮಾಡುವ ನಿರ್ಧಾರವಿತ್ತು. ಆ ಸಭೆಗೆ ಏನು ತಡೆ ಬಂತೋ ಗೊತ್ತಿಲ್ಲ. ಆದರೆ, ನಾನು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿ ಪ್ರಮಾಣ ಮಾಡಿದ್ದೇನೆ. ನನ್ನ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಹಾಗಾಗಿ ಮುಖಂಡರ ಜೊತೆ ಬಂದು ದೇವರಿಗೆ ಹರಿಕೆ ಒಪ್ಪಿಸಿದ್ದೇನೆ. ಬಿಜೆಪಿ ಪಕ್ಷ ನನ್ನ ತಾಯಿ ಇದ್ದ ಹಾಗೆ. ವಿಶೇಷವಾಗಿ ನಾನು ಬೇಲೂರು ಚೆನ್ನಕೇಶವನ ಸನ್ನಿಧಾನದಿಂದ ಆಯ್ಕೆಯಾದವನು. ಚೆನ್ನಕೇಶವನ ಆಶೀರ್ವಾದದಿಂದ ಗೆದ್ದಿದ್ದೇನೆ. ಭಗವಂತನ ಶಕ್ತಿ ಇಲ್ಲದೆ ಏನೂ ಆಗುವುದಿಲ್ಲ ಎಂದರು. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಅಕ್ರಮ: ಸಿಎಂ ಯೋಗಿ ಯಾರನ್ನೂ ಬಿಡಲ್ಲ – ಸಿ.ಟಿ.ರವಿ
ನನ್ನ ವಿರುದ್ಧ ಅಪಪ್ರಚಾರ ಮಾಡಿದವರಿಗೆ ಆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡುತ್ತಾನೆ. ನನ್ನ ಕ್ಷೇತ್ರಕ್ಕೆ ವಿಶ್ವನಾಯಕರಾದ ಪ್ರಧಾನಿ ನರೇಂದ್ರ ಮೋದಿ ಬಂದು ಪ್ರಚಾರ ಮಾಡಿದ್ದಾರೆ. ತಾಯಿಗೆ ದ್ರೋಹ ಬಗೆಯುವ ಕೆಲಸವನ್ನು ನಾನು ಮಾಡಿಲ್ಲ. ಬಿ.ಎಸ್.ಯಡಿಯೂರಪ್ಪನಂತಹ ಮಹಾನ್ ನಾಯಕರಿದ್ದಾರೆ. ಪಕ್ಷದ ಒಳಗೆ ಅಥವಾ ಹೊರಗೆ ಯಾರು ಈ ಷಡ್ಯಂತ್ರ ಮಾಡಿದ್ದಾರೆ ಎಂಬುದು ಪರಮಾತ್ಮನಿಗೆ ಗೊತ್ತು. ನಾನು ಯಾರ ಮೇಲೂ ಆರೋಪ ಅಥವಾ ಪ್ರತ್ಯಾರೋಪ ಮಾಡುವುದಿಲ್ಲ. ಎಲ್ಲದಕ್ಕೂ ಭಗವಂತನೇ ಸಾಕ್ಷಿ. ಯಾವುದೇ ಪಕ್ಷ ಭೇದವಿಲ್ಲದೆ ಸಾಮಾನ್ಯನಾಗಿ ಕಾರ್ಯಕರ್ತರ ಜೊತೆ ಕೆಲಸ ಮಾಡುತ್ತಿದ್ದೇನೆ. ವಿಧಾನಸಭೆಯಲ್ಲಿ ರಾತ್ರಿ 2 ಗಂಟೆಯವರೆಗೂ ಕೂತು ರಾಜ್ಯ ಹಾಗೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ದನಿ ಎತ್ತುತ್ತಿದ್ದೇನೆ. ನನ್ನ ಭವಿಷ್ಯದ ರಾಜಕಾರಣಕ್ಕೆ ಕಪ್ಪುಚುಕ್ಕೆ ತರುವ ದುರಾಸೆಯಿಂದ ಈ ಸುಳ್ಳು ಆರೋಪ ಮಾಡಲಾಗಿದೆ. ನಾನು ಯಾರಿಗೂ ಹೆದರಿಲ್ಲ, ನಿರ್ಭಯವಾಗಿ ದೇವರ ಮುಂದೆ ಆಣೆ-ಪ್ರಮಾಣ ಮಾಡಿದ್ದೇನೆ ಎಂದು ತಿಳಿಸಿದರು.
ಹಾಸನದ ಮಾಜಿ ಶಾಸಕರೊಬ್ಬರು ಇದರ ಹಿಂದಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಶಾಸಕ ಸುರೇಶ್ ನಿರಾಕರಿಸಿದರು. ನಾನು ಯಾರ ಮೇಲೂ ಗೂಬೆ ಕೂರಿಸಲ್ಲ. ನನ್ನ ಪ್ರಾಮಾಣಿಕತೆಯನ್ನಷ್ಟೇ ದೇವರ ಮುಂದೆ ಪ್ರದರ್ಶನ ಮಾಡುತ್ತಿದ್ದೇನೆ ಎಂದು ಹೇಳಿದರು.
