ನವದೆಹಲಿ: ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ(Anti Sikh Riots Case) ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಕಾಂಗ್ರೆಸ್ (Congress) ಸಂಸದ ಸಜ್ಜನ್ ಕುಮಾರ್ (80) ಗುರುವಾರ ನಿಧನರಾಗಿದ್ದಾರೆ.
ದೆಹಲಿಯ ತಿಹಾರ್ ಜೈಲಿನಲ್ಲಿ (Jail) ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್ ಕುಮಾರ್(Sajjan Kumar) ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ಹತ್ಯೆಯ ನಂತರ ದೆಹಲಿ ಮತ್ತು ಉತ್ತರ ಭಾರತದ ಹಲವು ಭಾಗಗಳಲ್ಲಿ ಸಿಖ್ಖರ ವಿರುದ್ಧ ಭೀಕರ ಹಿಂಸಾಚಾರ ಭುಗಿಲೆದ್ದಿತ್ತು. ಈ ದಂಗೆಯಲ್ಲಿ ದೆಹಲಿಯೊಂದರಲ್ಲೇ ಸುಮಾರು 3,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ದೆಹಲಿ ಪೊಲೀಸರ ತನಿಖೆಯ ಪ್ರಕಾರ, ಈ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಪ್ರಮುಖರಲ್ಲಿ ಸಜ್ಜನ್ ಕುಮಾರ್ ಒಬ್ಬರಾಗಿದ್ದರು.
ಆರಂಭದ ಮೂರು ದಶಕಗಳ ಕಾಲ ಜಸ್ಟಿಸ್ ರಂಗನಾಥ್ ಮಿಶ್ರಾ ಆಯೋಗ ಸೇರಿದಂತೆ ಹಲವು ತನಿಖಾ ಸಮಿತಿಗಳ ವರದಿಗಳಲ್ಲಿ ಅವರ ಹೆಸರು ನೇರವಾಗಿ ಪ್ರಸ್ತಾಪವಾಗಿರಲಿಲ್ಲ. ಆದರೆ 2015ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ (SIT) ಮುಚ್ಚಿಹೋಗಿದ್ದ ಪ್ರಕರಣಗಳನ್ನು ಮರುಪರಿಶೀಲಿಸಿದ ಬಳಿಕ ಮಹತ್ವದ ತಿರುವು ಪಡೆಯಿತು. ಇದನ್ನೂ ಓದಿ: ಹನೂರು ಎನ್‌ಕೌಂಟರ್ ಪ್ರತಿಕಾರಕ್ಕೆ 10 ಎಕರೆ ಅರಣ್ಯ ಭಸ್ಮ
ಪಾಲಂ ಕಾಲೋನಿ ಪ್ರದೇಶದಲ್ಲಿ ಐವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ 2018 ರಲ್ಲಿ ಅವರಿಗೆ ಮೊದಲ ಬಾರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸರಸ್ವತಿ ವಿಹಾರ್‌ನಲ್ಲಿ ಇಬ್ಬರು ಸಿಖ್ ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲೂ 2025 ರಲ್ಲಿ ದೆಹಲಿ ಹೈಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿತು. ಜನಕಪುರಿ ಮತ್ತು ವಿಕಾಸಪುರಿ ಹಿಂಸಾಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಈ ವರ್ಷದ ಆರಂಭದಲ್ಲಿ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.
ದೆಹಲಿ ರಾಜಕಾರಣದಲ್ಲಿ ಪ್ರಭಾವಿ ಜಾಟ್ ನಾಯಕರಾಗಿದ್ದ ಸಜ್ಜನ್ ಕುಮಾರ್, 1977ರಲ್ಲಿ ಕೌನ್ಸಿಲರ್ ಆಗಿ ರಾಜಕೀಯ ಜೀವನ ಆರಂಭಿಸಿದರು. 1980ರಿಂದ ಮೂರು ಬಾರಿ ಹೊರ ದೆಹಲಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ 1984ರ ದಂಗೆಯ ಆರೋಪಗಳಿಂದಾಗಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2009ರಲ್ಲಿ ಕಾಂಗ್ರೆಸ್ ಪಕ್ಷ ಅವರಿಗೆ ಲೋಕಸಭಾ ಟಿಕೆಟ್ ನಿರಾಕರಿಸಿತು. ನಂತರದ ದಿನಗಳಲ್ಲಿ ಅವರು ಪಕ್ಷದಲ್ಲಿ ಮೂಲೆಗುಂಪಾಗಿದ್ದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಪ್ರತೀಕಾರವಾಗಿ ಸಿಖ್ಖರ ಮೇಲೆ ದೊಡ್ಡ ದಾಳಿ ನಡೆದಿತ್ತು. ಈ ವೇಳೆ ಲೂಟಿ, ಬೆಂಕಿ ಹಚ್ಚುವಿಕೆ ಮತ್ತು ಆಸ್ತಿಪಾಸ್ತಿಗಳ ನಾಶ ಮಾಡಲಾಗಿತ್ತು. ಇದೇ ವೇಳೆ ಜನ ಸಮೂಹ ಜಸ್ವಂತ್ ಅವರ ಮನೆಯ ಮೇಲೆ ದಾಳಿ ಮಾಡಿ, ಆವರನ್ನು ಮತ್ತು ಅವರ ಮಗನನ್ನು ಕೊಂದು, ವಸ್ತುಗಳನ್ನು ಲೂಟಿ ಮಾಡಿ ಅವರ ಮನೆಯನ್ನು ಸುಟ್ಟುಹಾಕಿತ್ತು. ಈ ಪ್ರಕರಣ ಪಂಜಾಬ್‌ನ ಬಾಗ್ ಪೊಲೀಸ್ ಠಾಣೆ ದಾಖಲಾಗಿತ್ತು. ನಂತರ ವಿಶೇಷ ತನಿಖಾ ತಂಡವು ತನಿಖೆಯನ್ನು ವಹಿಸಿಕೊಂಡಿತು. ಬಳಿಕ 2021ರ ಡಿ.16ರಂದು ಸಜ್ಜನ್ ಕುಮಾರ್ ವಿರುದ್ಧ ಆರೋಪಗಳನ್ನು ಹೊರಿಸಿತ್ತು. ಪ್ರಕರಣದಲ್ಲಿ ಸಜ್ಜನ್ ಕುಮಾರ್ ಗಲಭೆ ನಡೆಸಿದ ಗುಂಪಿನ ನೇತೃತ್ವ ವಹಿಸಿದ್ದರು ಎಂಬುದಕ್ಕೆ ತನಿಖಾ ತಂಡ ಸಾಕಷ್ಟು ಪುರಾವೆಗಳನ್ನು ಒದಗಿಸಿತ್ತು.

