ಮುಂಬೈ: ಬಿಜೆಪಿ ನೇತೃತ್ವದ ಎನ್‌ಡಿಎ (NDA) ಆಡಳಿತದಲ್ಲಿರುವ 21 ರಾಜ್ಯಗಳಲ್ಲೂ 2029ರೊಳಗೆ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ಮದುವೆ, ವಿಚ್ಛೇದನ, ಆಸ್ತಿ ಹಕ್ಕು, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರ ಸೇರಿದಂತೆ ವೈಯಕ್ತಿಕ ಕಾನೂನುಗಳಿಗೆ ಧರ್ಮಭೇದವಿಲ್ಲದೆ ಒಂದೇ ರೀತಿಯ ಕಾನೂನು ರೂಪಿಸುವ ಉದ್ದೇಶವನ್ನು ಏಕರೂಪ ನಾಗರಿಕ ಸಂಹಿತೆ ಹೊಂದಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗಿದೆ ಎಂದರು. ಇದನ್ನೂ ಓದಿ: ಟಿ.ನರಸೀಪುರದಲ್ಲಿ ಹೈಡ್ರಾಮಾ| ಅಶೋಕ್, ಯದುವೀರ್, ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ
ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ:
ಸರ್ಕಾರದ ಭದ್ರತಾ ನೀತಿಯನ್ನೂ ಅಮಿತ್ ಶಾ ಇದೇ ವೇಳೆ ಪ್ರಸ್ತಾಪಿಸಿದರು. ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್ ಮತ್ತು ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದನೆ ವಿರುದ್ಧ `ಶೂನ್ಯ ಸಹಿಷ್ಣುತೆ’ ನೀತಿಯನ್ನು ದೇಶ ತೋರಿಸಿದೆ ಎಂದು ಹೇಳಿದರು. 2014ಕ್ಕೂ ಮುನ್ನ ಭಾರತದಲ್ಲಿ ಭ್ರಷ್ಟಾಚಾರ, ಜಾತೀಯತೆ ಮತ್ತು ಕುಟುಂಬ ರಾಜಕಾರಣ ಪ್ರಮುಖವಾಗಿದ್ದವು ಎಂದು ಆರೋಪಿಸಿದ ಶಾ, ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ `ಕಾರ್ಯಕ್ಷಮತೆ ಆಧಾರಿತ ರಾಜಕಾರಣ’ಕ್ಕೆ ಆದ್ಯತೆ ನೀಡಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್‌ಗೆ ಶಾಕ್ – ಜಿಎಫ್‌ಪಿ ಜೊತೆ ಆಪ್ ಮೈತ್ರಿ
`ಭಾರತ ಫಸ್ಟ್’ ನೀತಿ:
ಭಾರತದ ವಿದೇಶಾಂಗ ಮತ್ತು ರಕ್ಷಣಾ ನೀತಿಗಳಿಗೆ ಈಗ ಬಲವಾದ ಬೆನ್ನೆಲುಬು ಸಿಕ್ಕಿದೆ. `ಭಾರತ ಫಸ್ಟ್’ ಎಂಬ ನೀತಿಯೇ ಸರ್ಕಾರದ ಕಾರ್ಯವೈಖರಿಗೆ ಮಾರ್ಗದರ್ಶಿಯಾಗಿದೆ. ದೇಶದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಒಂದು ಕಾಲದಲ್ಲಿ `ಫ್ರಾಜೈಲ್ ಫೈವ್’ ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ ಇದೀಗ ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದರು. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಜಿಡಿಪಿ ಬೆಳವಣಿಗೆ ದಾಖಲಾಗಿದ್ದು, ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದರು. ಇದನ್ನೂ ಓದಿ: ಭೂಮಿ ಸಮಸ್ಯೆ ಬಗೆಹರಿಸಿಕೊಡಿ: ಪ್ರಧಾನಿ ಮೋದಿಗೆ ಬಾಲ್ಯದ ಗೆಳೆಯ ಮನವಿ
ಆರ್ಟಿಕಲ್ 370, ನಕ್ಸಲಿಸಂ ಪ್ರಸ್ತಾಪ:
ಈ ವೇಳೆ ಆರ್ಟಿಕಲ್ 370, ನಕ್ಸಲಿಸಂ ಮತ್ತು ಈಶಾನ್ಯ ರಾಜ್ಯಗಳ ಪರಿಸ್ಥಿತಿಯನ್ನೂ ಅಮಿತ್ ಶಾ ಪ್ರಸ್ತಾಪಿಸಿದರು. ಹಲವು ದಶಕಗಳಿಂದ ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ ಸಮಸ್ಯೆಗಳನ್ನು ಸರ್ಕಾರ ಎದುರಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಟಿ ನರಸೀಪುರ ಇನ್ಸ್‌ಪೆಕ್ಟರ್ ಅಮಾನತಿಗೆ ಆಗ್ರಹಿಸಿ ಠಾಣೆಯ ಮುಂದೆ ಬಿಜೆಪಿ ಪ್ರತಿಭಟನೆ
ಮಣಿಪುರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ ಕುರಿತು ಚರ್ಚೆ:
ಮಣಿಪುರ ವಿಧಾನಸಭೆ ಚುನಾವಣೆಗೂ ಮುನ್ನ 1951ರ ಆಧಾರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ ಜಾರಿಯಾಗಲಿದೆಯೇ ಎಂಬ ಪ್ರಶ್ನೆಗೆ ಶಾ ಉತ್ತರಿಸಿದರು. ಮಣಿಪುರದಲ್ಲಿರುವ ಸಹೋದ್ಯೋಗಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಈ ಕುರಿತು ಚರ್ಚೆ ನಡೆಯುತ್ತಿದೆ. ಯಾವುದೇ ನಿರ್ಧಾರ ಕೈಗೊಂಡ ಕೂಡಲೇ ಅದರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಪೇದೆ ಹೃದಯಾಘಾತದಿಂದ ಸಾವು
ಅಕ್ರಮ ವಲಸಿಗರ ವಿಚಾರದಲ್ಲೂ ಸರ್ಕಾರದ ನಿಲುವನ್ನು ಪುನರುಚ್ಚರಿಸಿದ ಅವರು, ದೇಶದಲ್ಲಿರುವ ಅಕ್ರಮ ವಲಸಿಗರನ್ನು ಗುರುತಿಸಿ ಹೊರಹಾಕಲಾಗುವುದು. ಆದರೆ ಅದಕ್ಕಾಗಿ ಪರಿಗಣಿಸಲಾಗುತ್ತಿರುವ ವಿಧಾನಗಳ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಚಲೋ ವೇಳೆ ಪ್ರತಿಭಟನೆ – ಸೋಮಶೇಖರ ರೆಡ್ಡಿ ಸೇರಿದಂತೆ 22 ಮಂದಿ ವಿರುದ್ಧ ಕೇಸ್
ಪ್ರತಿಭಟನೆಗೆ ಹಕ್ಕಿದೆ:
ಸರ್ಕಾರದ ವಿರುದ್ಧ ನಡೆಯುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ಸೇರಿದಂತೆ ವಿವಿಧ ಪ್ರತಿಭಟನೆಗಳ ಕುರಿತು ಕೇಳಿದ ಪ್ರಶ್ನೆಗೆ, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಪ್ರತಿಭಟಿಸುವ ಹಕ್ಕನ್ನು ಗೌರವಿಸಲಾಗುತ್ತದೆ. `ತುರ್ತು ಪರಿಸ್ಥಿತಿ’ ಹೇರಲು ಸಾಧ್ಯವಿಲ್ಲ. ಅದು ಕಾಂಗ್ರೆಸ್‌ನ ಮನಸ್ಥಿತಿ ಎಂದು ಟೀಕಿಸಿದರು. ಇದನ್ನೂ ಓದಿ: ಈಜಲು ಹೋಗಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು
ಸೆಪ್ಟೆಂಬರ್ 17ರಿಂದ `ಸೇವಾ ಸಂಕಲ್ಪ ಅಭಿಯಾನ’:
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನವನ್ನು ಗುರುತಿಸಲು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ದೇಶಾದ್ಯಂತ ಒಂದು ತಿಂಗಳ `ಸೇವಾ ಸಂಕಲ್ಪ ಅಭಿಯಾನ’ ನಡೆಸಲಾಗುವುದು. ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿಯವರ ಜನ್ಮದಿನದಂದು ಅಭಿಯಾನ ಆರಂಭವಾಗಲಿದೆ. ಬಿಜೆಪಿ, ಎನ್‌ಡಿಎ ಮಿತ್ರಪಕ್ಷಗಳು, ಸ್ವಯಂಸೇವಾ ಸಂಘಟನೆಗಳು ಮತ್ತು ದೇಶದ ಜನರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಅಭಿಯಾನವನ್ನು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ, ಜಿಲ್ಲೆ, ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳಿಂದ ಹಿಡಿದು ಮತಗಟ್ಟೆ ಮಟ್ಟದವರೆಗೂ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: RSS ಆಕ್ಟೋಪಸ್ ಥರ, ಅದು ಎಲ್ಲೆಲ್ಲೂ ಇದೆ: ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ವಜನಿಕ ಜೀವನದ ಪಯಣ, ಸಾಧನೆಗಳು ಮತ್ತು 2047ರ ವೇಳೆಗೆ `ವಿಕಸಿತ ಭಾರತ’ ನಿರ್ಮಿಸುವ ಅವರ ದೃಷ್ಟಿಕೋನವನ್ನು ಅಭಿಯಾನದಲ್ಲಿ ಜನರಿಗೆ ತಲುಪಿಸಲಾಗುವುದು. 2014ರಲ್ಲಿ ಪ್ರಧಾನಿಯಾದ ನಂತರ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮೋದಿ ಅವರು `ಪ್ರಧಾನ ಸೇವಕ’ನಾಗಿ ಕೆಲಸ ಮಾಡಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವುದರಿಂದ ಪ್ರಧಾನಿಯಾಗುವವರೆಗೆ ಸತತ 25 ವರ್ಷಗಳ ಕಾಲ ಸರ್ಕಾರದ ಮುಖ್ಯಸ್ಥರಾಗಿರುವ ನಾಯಕರು ಬಹಳ ವಿರಳ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಪ್ರಿಯಾಂಕ್ ಜೈಲು ಸೇರುವ ಕಾಲ ಹತ್ತಿರ ಬಂದಿದೆ; ಗಣೇಶೋತ್ಸವಕ್ಕಾಗಿ ನಾನು ಜೈಲಿಗೆ ಹೋಗಲೂ ಸಿದ್ಧ: ಪ್ರತಾಪ್ ಸಿಂಹ ತಿರುಗೇಟು
ಅಭಿಯಾನದಲ್ಲಿ 12 ವಿಭಾಗಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಮತಗಟ್ಟೆ, ತಾಲೂಕು ಮತ್ತು ಜಿಲ್ಲಾಮಟ್ಟದಲ್ಲೂ ಹಲವು ಕಾರ್ಯಕ್ರಮಗಳು ನಡೆಯಲಿವೆ. `ಅನ್‌ಟೋಲ್ಡ್ ಸ್ಟೋರೀಸ್ ಆಫ್ ನಮೋ ಸೇವಾ’ ಹೆಸರಿನಲ್ಲಿ ಸ್ಥಳೀಯ ಭಾಷೆಗಳಲ್ಲಿ ಸಂಗೀತ ಮತ್ತು ನಾಟಕ ಪ್ರದರ್ಶನಗಳನ್ನು ಆಯೋಜಿಸಿ ಗ್ರಾಮಗಳಿಗೂ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ‘ಮುಂದಿನ ಜನ್ಮ ಇದ್ದರೆ ನಿನ್ನವನಾಗಿ ಹುಟ್ಟುವೆ’ – ಇನ್ಸ್ಟಾದಲ್ಲಿ ಪೋಸ್ಟ್ ಹಾಕಿ ಯುವಕ ಆತ್ಮಹತ್ಯೆ

