– ಗಣೇಶನ ಭಕ್ತರ ತಂಟೆಗೆ ಬರುವ ಪೊಲೀಸರ ಗ್ರಹಚಾರವನ್ನು ನಾವು ಬಿಡಿಸುತ್ತೇವೆ: ಆರ್.ಅಶೋಕ್
– ನಾಮ ಹಾಕಿಕೊಂಡು ಓಡಾಡುವ ಡಿಕೆಶಿ ಈಗ ಹಿಂದೂ ಪರ ಎಂದು ತೋರಿಸಲಿ
ಬೆಂಗಳೂರು: ರಾಜ್ಯದಲ್ಲಿ ಗಣೇಶನ ಭಕ್ತರ ತಂಟೆಗೆ ಬರುವ ಪೊಲೀಸರ ಗ್ರಹಚಾರವನ್ನು ನಾವು ಬಿಡಿಸುತ್ತೇವೆ. ಸದಾ ಹಿಂದೂ ಎಂದು ನಾಟಕವಾಡುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D K Shivakumar), ಈಗ ಭಕ್ತರಿಗೆ ಬೆದರಿಕೆ ಹಾಕಿದ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ವಹಿಸಲಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಆಗ್ರಹಿಸಿದರು
ಟಿ. ನರಸೀಪುರ ಪೊಲೀಸ್ ಠಾಣೆಯ ಮುಂದೆ ಇನ್ಸ್‌ಪೆಕ್ಟರ್ ಧನಂಜಯ ಅಮಾನತಿಗೆ ಆಗ್ರಹಿಸಿ ಮಾತನಾಡಿದ ಅವರು, ಮುಸ್ಲಿಮರ ಮಸೀದಿ ಮುಂದೆ ಹೋಗಬಾರದು, ಗ್ರಹಚಾರ ಬಿಡಿಸುತ್ತೇನೆ ಎಂದು ಆತ ಹೇಳಿದ್ದಾನೆ. ಗಣೇಶೋತ್ಸವ ಆಚರಣೆ ಮಾಡುವವರು ರೌಡಿಗಳಲ್ಲ. ಇವರಿಗೆ ಧಮ್ ಇದ್ದರೆ ಮಸೀದಿಯಿಂದ ಕಲ್ಲು ಹೊಡೆಯುವವರಿಗೆ, ಬಾಂಬ್ ಹಾಕುವವರಿಗೆ ಬೆದರಿಕೆ ಹಾಕಬೇಕಿತ್ತು. ಇಂತಹ ದುರಹಂಕಾರಿ ಪೊಲೀಸ್ ಅಧಿಕಾರಿಯನ್ನು ಇಟ್ಟುಕೊಂಡು ಇಲಾಖೆಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದರು.
ನೆಮ್ಮದಿಯಿಂದ ಗಣೇಶೋತ್ಸವ ಆಚರಿಸಲು ಕೂಡ ಕಾಂಗ್ರೆಸ್ ಸರ್ಕಾರ ಅವಕಾಶ ನೀಡುತ್ತಿಲ್ಲ. ಬಾಲ ಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಈ ಆಚರಣೆಯನ್ನು ತಂದರು. ಕೇವಲ ಕರ್ನಾಟಕ ಮಾತ್ರವಲ್ಲದೆ, ಜಗತ್ತಿನಾದ್ಯಂತ ಗಣೇಶೋತ್ಸವ ಆಚರಣೆ ನಡೆಯುತ್ತಿದೆ. ಆದರೆ ಮೈಸೂರಿನ ಟಿ. ನರಸೀಪುರದಲ್ಲಿ ಒಬ್ಬ ಅಹಂಕಾರಿ ಪೊಲೀಸ್ ಅಧಿಕಾರಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾನೆ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರಿಯಾಂಕ್ ಜೈಲು ಸೇರುವ ಕಾಲ ಹತ್ತಿರ ಬಂದಿದೆ; ಗಣೇಶೋತ್ಸವಕ್ಕಾಗಿ ನಾನು ಜೈಲಿಗೆ ಹೋಗಲೂ ಸಿದ್ಧ: ಪ್ರತಾಪ್ ಸಿಂಹ ತಿರುಗೇಟು
ನಾವು ಪಾಕಿಸ್ತಾನದಲ್ಲಿಲ್ಲ. ಗಣೇಶ ಮೊದಲು ಬಂದನೋ, ಮಸೀದಿ ಮೊದಲು ಬಂತೋ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಬೇಕು. ಗಣೇಶನ ಪ್ರತಿಷ್ಠಾಪನೆ ಮಾಡಲು ಗ್ರಾಮ ಪಂಚಾಯಿತಿ, ಪಾಲಿಕೆ, ಜಿಲ್ಲಾಧಿಕಾರಿ ಮೊದಲಾದ ಕಡೆ ಅಲೆಯಬೇಕು. ಮಸೀದಿ ಮುಂದೆ ಹೋದಾಗ ಮಾತ್ರ ಗಲಾಟೆಯಾಗುತ್ತದೆ. ಆದರೆ ಚರ್ಚ್ ಮುಂದೆ ಹೋದಾಗ, ಜೈನರ ಮಂದಿರ, ಸಿಖ್ಖರ ದೇವಾಲಯಗಳ ಮುಂದೆ ಮೆರವಣಿಗೆ ಹೋದಾಗ ಗಲಾಟೆಯಾಗುವುದಿಲ್ಲ ಎಂದು ಹೇಳಿದರು.
ಇಷ್ಟು ನಿರ್ದಿಷ್ಟ ರಸ್ತೆಗಳನ್ನು ಮುಸ್ಲಿಮರಿಗೆ ಬರೆದುಕೊಟ್ಟಿದ್ದೇವೆ ಎಂದು ತಿಳಿಸಲಿ. ಇಲ್ಲಿ ಭಾರತದ ಸಂವಿಧಾನ ಇದೆಯೇ ಹೊರತು, ಪಾಕಿಸ್ತಾನದ ಸಂವಿಧಾನವಲ್ಲ. ಮುಸ್ಲಿಮರು ಉರುಸ್ ಮಾಡುವಾಗ ದೇವಾಲಯಗಳ ಮುಂದೆಯೇ ಮೆರವಣಿಗೆ ಹೋಗುತ್ತಾರೆ. ಆದರೆ ಹಿಂದೂಗಳು ಎಂದಿಗೂ ದೇವಾಲಯದಲ್ಲಿ ಕುಳಿತು ಕಲ್ಲು ಹೊಡೆಯುವುದಿಲ್ಲ. ಇಲ್ಲಿ ತಾಲಿಬಾನ್ ಆಡಳಿತ ನಡೆಯುತ್ತಿದೆ ಎಂದರು.
ಒಬ್ಬ ಪೊಲೀಸ್ ಗಣೇಶ ಭಕ್ತರನ್ನು ಕರೆದು ಬೆದರಿಕೆ ಹಾಕುತ್ತಾನೆ ಎಂದರೆ, ಅದಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲವಿದೆ ಎಂದೇ ಅರ್ಥ. ಹಿಂದೂಗಳು ತಮ್ಮದೇ ದೇಶದಲ್ಲಿ ಸ್ವತಂತ್ರವಾಗಿ ಆಚರಣೆ ಮಾಡಲು ಆಗುತ್ತಿಲ್ಲ. ಸಿಎಂ ಡಿ.ಕೆ. ಶಿವಕುಮಾರ್ ಎಲ್ಲ ಕಡೆ ಓಡಾಡಿ ನಾಮ ಎಳೆದುಕೊಳ್ಳುತ್ತಾರೆ. ಆದರೆ ಹಿಂದೂಗಳಿಗೆ ಬೆಂಬಲ ನೀಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಂಗ್ಲಾ ನಿವಾಸಿಗಳು, ಬಾಂಬ್ ಹಾಕುವ ಉಗ್ರರನ್ನು ಪೊಲೀಸರು ಸೆರೆಹಿಡಿಯಬೇಕು. ಅದನ್ನು ಬಿಟ್ಟು ಭಕ್ತರಿಗೆ ಧಮಕಿ ಹಾಕಬಾರದು. ಮುಖ್ಯಮಂತ್ರಿಗೆ ಹಿಂದೂ ಧರ್ಮದ ಮೇಲೆ ಗೌರವವಿದ್ದರೆ ಆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಿ ಎಂದು ಆಗ್ರಹಿಸಿದರು.
ಪೊಲೀಸರು ಭಕ್ತರಿಗೆ ಕಿರುಕುಳ ಕೊಡಲು ಮುಂದಾದರೆ ಅವರ ಗ್ರಹಚಾರವನ್ನು ನಾವು ಬಿಡಿಸುತ್ತೇವೆ. ಇನ್ನು ಮುಂದೆ ರಸ್ತೆಗಳಲ್ಲಿ ಓಡಾಡುವವರಿಗೂ ಬೆದರಿಕೆ ಹಾಕುತ್ತಾರೆ. ಕಾಂಗ್ರೆಸ್‌ನವರು ಬ್ರಿಟಿಷರಿಗಿಂತಲೂ ಕೀಳಾಗಿದ್ದಾರೆ. ಮಸೀದಿಗಳಲ್ಲಿ ಮೈಕ್ ಬಳಸುತ್ತಾರೆ. ಧ್ವನಿವರ್ಧಕಗಳ ಬಳಕೆ ಬಗ್ಗೆ ಕೋರ್ಟ್ ಆದೇಶವಿದೆ. ಅದನ್ನು ಸರ್ಕಾರ ಪಾಲಿಸಬೇಕು ಎಂದು ಹೇಳಿದರು.
ಜನರು ಮೊದಲು ಎಚ್ಚರಗೊಳ್ಳಬೇಕು. ಇನ್ನು ಮುಂದೆ ಮನೆಯಲ್ಲಿ ಮಾಡುವ ಗಣೇಶೋತ್ಸವ ಆಚರಣೆಗೂ ಕಾಂಗ್ರೆಸ್ ನಿಯಮಗಳನ್ನು ಹೇರಲಿದೆ. ಚುನಾವಣೆ ಬಂದಾಗ ಹಿಂದೂ ಆಗುವ ಡಿ.ಕೆ. ಶಿವಕುಮಾರ್, ಉಳಿದ ಸಮಯದಲ್ಲಿ ಮುಸ್ಲಿಮರ ಬ್ರದರ್ ಆಗುತ್ತಾರೆ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರಿಯಾಂಕ್ ಜೈಲು ಸೇರುವ ಕಾಲ ಹತ್ತಿರ ಬಂದಿದೆ; ಗಣೇಶೋತ್ಸವಕ್ಕಾಗಿ ನಾನು ಜೈಲಿಗೆ ಹೋಗಲೂ ಸಿದ್ಧ: ಪ್ರತಾಪ್ ಸಿಂಹ ತಿರುಗೇಟು
ಬಿಜೆಪಿ ದಲಿತ ವಿರೋಧಿ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದರು. ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದಾಗಲೇ ಯಾರು ದಲಿತ ವಿರೋಧಿ ಎಂದು ಅರ್ಥವಾಗಬೇಕಿತ್ತು. ಈಗ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ನವರೇ ದಲಿತ ವಿರೋಧಿ ಎಂದು ಅರಿವಾಗಿದೆ ಎಂದು ಹೇಳಿದರು.
ಚಿನ್ನದ ಗಣಿಯಲ್ಲಿ ಶೇರ್ ಇಟ್ಟುಕೊಂಡಿರುವ ಬಗ್ಗೆ, 700 ಕೋಟಿ ರೂ. ಹೂಡಿಕೆ ಮಾಡಿರುವ ಬಗ್ಗೆ ಬೆಳಗಾವಿಯವರೇ ಇ.ಡಿಗೆ ದೂರು ನೀಡಿರಬಹುದು. ಮನೆಯಲ್ಲಿ ಹಣ ಇಟ್ಟರೆ ಅದಕ್ಕೆ ಸೂಕ್ತ ದಾಖಲೆ ಇರಬೇಕು. ಮನೆಯಲ್ಲಿ ಅಷ್ಟೊಂದು ಹಣವನ್ನು ಏಕೆ ಇಟ್ಟುಕೊಳ್ಳಬೇಕು? ಇದರ ಬ್ರೇಕಿಂಗ್ ಸುದ್ದಿ ಕೊಟ್ಟವರನ್ನು ಮೊದಲು ಅವರು ಪತ್ತೆ ಮಾಡಲಿ. ಅದನ್ನು ಬಿಟ್ಟು ಜಾತಿಯನ್ನು ನಡುವೆ ತರುವುದು ಬೇಡ ಎಂದರು. ಇದನ್ನೂ ಓದಿ: RSS ಆಕ್ಟೋಪಸ್ ಥರ, ಅದು ಎಲ್ಲೆಲ್ಲೂ ಇದೆ: ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

