ಮಹಾತ್ಮನಿಗೆ ಬೈದವರು ಬಿಜೆಪಿ ಅಧ್ಯಕ್ಷರಾದರು: ನಳಿನ್ ಕಿವಿ ಹಿಂಡಿದ ರೈ

2 Min Read

-ಭೂತಾನಿಗೆ ಹೋಗೋ ಪ್ರಧಾನಿಗೆ ಬೆಳಗಾವಿ ನೆರೆ ನೋಡೋಕೆ ಟೈಂ ಇಲ್ವಾ?
-ಬಿಜೆಪಿಯಿಂದ ಕರಾವಳಿಗೆ ಅನ್ಯಾಯ

ಉಡುಪಿ: ಸಂಸದ ನಳೀನ್ ಕುಮಾರ್ ಕಟೀಲ್‍ಗೆ ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಮಾಜಿ ಸಚಿವ ರಮನಾಥ್ ರೈ ವ್ಯಂಗ್ಯವಾಡಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ರಮನಾಥ್ ರೈ ನಳಿನ್ ಕುಮಾರ್ ಕಟೀಲ್ ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಈ ಸ್ಥಾನಮಾನ ಸಿಕ್ಕಿದೆ ಆಕ್ರೋಶ ಹೊರಹಾಕಿದರು.

ಮಹಾತ್ಮಾ ಗಾಂಧೀಜಿ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಕ್ಕೆ ಮೋದಿ, ಅಮಿತ್ ಶಾ ಇದನ್ನು ಸಹಿಸಲ್ಲ ಅಂತ ಅಂದು ಹೇಳಿದ್ದರು. ಆದ್ರೆ ಅಂತಹ ನಳಿನ್ ಕುಮಾರ್ ಕಟೀಲ್‍ಗೆ ಈಗ ಪ್ರಮೋಷನ್ ಆಗಿದೆ. ಮಹಾತ್ಮ ಗಾಂಧೀಜಿ ಅವರಿಗೆ ಅಪಮಾನ ಮಾಡಿದಕ್ಕೆ ಅಧ್ಯಕ್ಷಗಿರಿ ಸಿಕ್ಕಿದೆ. ಭಾರತೀಯ ಜೂಟ್ ಪಾರ್ಟಿಗೆ ಮಾತ್ರ ಇಂತಹ ಶಕ್ತಿ ಇರುವುದು ಎಂದು ವ್ಯಂಗ್ಯವಾಡಿದ್ರು.

ಜನ ನಳಿನ್ ಕುಮಾರ್ ಕಟೀಲ್ ಮುಖ ನೋಡಿ ವೋಟು ಕೊಟ್ಟಿಲ್ಲ. ಮೇಲಿನ ಮುಖ ನೋಡಿ ಮತ ಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನ ಮೇಲೆ ನೋಡುತ್ತಲೆ ನಿಂತಿದ್ದಾರೆ. ಇನ್ನು ಕೂಡಾ ಕೆಳಗೆ ನೋಡಿಲ್ಲ. ಆದ್ರೆ ಈಗ ಆಕಾಶ ನೋಡುವ ಪರಿಸ್ಥಿತಿ ಇಲ್ಲಿನ ಜನರಿಗಾಗಿದೆ ಎಂದ್ರು. ನಳಿನ್ ಕುಮಾರ್ ಕಟೀಲ್ ಯಾವುದೇ ಸಾಧನೆ ಮಾಡಿದ ಚರಿತ್ರೆ ಇತಿಹಾಸ ಇಲ್ಲ ಎಂದು ಟೀಕೆ ಮಾಡಿದ್ರು.

ಪ್ರಧಾನಿಗಳಿಗೆ ಟೈಮ್ ಇಲ್ವಾ?
ಕರ್ನಾಟಕದ ನೆರೆ ವೀಕ್ಷಣೆ ಮಾಡಲು ಪ್ರಧಾನಮಂತ್ರಿಗಳಿಗೆ ಟೈಮ್ ಇಲ್ಲ. ಭೂತಾನ್ ಗೆ ಹೋಗಿ ಅಲ್ಲಿನ ಮಕ್ಕಳ ಬೆನ್ನು ತಟ್ಟಲು ಟೈಂ ಇದೆ ಅಂತ ಕಾಂಗ್ರೆಸ್ ನಾಯಕ ರಮಾನಾಥ ರೈ ಚಾಟಿ ಬೀಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ನೆರೆ ಪರಿಸ್ಥಿತಿ ನಿಭಾಯಿಸೋದು ರಾಜ್ಯದ ಜೊತೆ ಕೇಂದ್ರದ ಹೊಣೆಗಾರಿಕೆ ಎಂದಿದ್ದಾರೆ.

ಪ್ರಧಾನಿ ಮೋದಿ ಭೂತಾನ್ ಗೆ ಹೋಗಿ ಮಕ್ಕಳ ಬೆನ್ನು ತಟ್ಟಿದ್ರೆ ದೊಡ್ಡ ಸುದ್ದಿಯಾಗುತ್ತದೆ ಎಂದು ಅಲ್ಲಿಗೆ ಹೋಗಿದ್ದಾರೆ. ಪ್ರವಾಹ ಪೀಡಿತ ಜನರ ಕಣ್ಣೀರು ಒರೆಸುವುದು ಅವರ ಆದ್ಯತೆಯಾಗಬೇಕಿತ್ತು ಎಂದು ಟೀಕಿಸಿದ್ರು. ಮೋದಿ ಸರ್ಕಾರ ಪ್ರಚಾರದಲ್ಲೇ ಮಗ್ನವಾಗಿದೆ. ಬಿಜೆಪಿ ಜನಹಿತದ ಕಡೆ ಗಮನ ಕೊಡುತ್ತಿಲ್ಲ. ಮೋದಿಯ ಮಾರ್ಕೆಟಿಂಗ್ ಮಾಡುವ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದೆ ಎಂದು ರೈ ಕಿಡಿಕಾರಿದ್ದಾರೆ.

ಕರಾವಳಿಗೆ ಅನ್ಯಾಯ:
ಬುದ್ಧಿವಂತರ ಜಿಲ್ಲೆಯಲ್ಲಿ ಯೋಗ್ಯ ಇಬ್ಬರನ್ನು ಮಂತ್ರಿ ಮಾಡುವುದಕ್ಕೆ ಬಿಜೆಪಿಗೆ ಸಾದ್ಯ ಆಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುದ್ಧಿವಂತರು ಯಾರು ಇಲ್ಲ ಎಂದು ಬಿಜೆಪಿ ತೀರ್ಮಾನಿಸಿದೆ. ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಲೆ ಬಂದಿದೆ. ಎರಡು ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಮುಂದಿನ ಚುನಾವಣೆ ಲೆಕ್ಕಚಾರದಲ್ಲಿ ಸಚಿವ ಸ್ಥಾನ ಹಂಚಿಕೆ ಮಾಡಿದ್ದಾರೆ. ಬಿಜೆಪಿಯ ಈ ಲೆಕ್ಕಾಚಾರ ಉಲ್ಟಾ ಆಗುತ್ತದೆ ಎಂದು ರಮನಾಥ್ ರೈ ಭವಿಷ್ಯ ನುಡಿದರು.

Share This Article
Leave a Comment

Leave a Reply

Your email address will not be published. Required fields are marked *