ರಾಮನಗರ: ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎಂದು ಟೀಕಿಸಿದ್ದ ಡಿ.ಕೆ. ಸುರೇಶ್ (D K Suresh) ಹಾಗೂ ಸಚಿವ ಹೆಚ್.ಸಿ. ಬಾಲಕೃಷ್ಣ ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ‘ನಮ್ಮದು ಸಂಸ್ಕೃತಿಯ ಬೃಂದಾವನ, ಕಾಂಗ್ರೆಸ್‌ನದ್ದು ಸೂಟ್‌ಕೇಸ್ ಬೃಂದಾವನ’ ಎಂದು ವ್ಯಂಗ್ಯವಾಡಿದ್ದಾರೆ.
ನೈಸ್ ರಸ್ತೆ ಟೋಲ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ಮತ್ತೆ ವಾಕ್ಸಮರ ಶುರುವಾಗಿದೆ. ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಬೇಡಿ ಎಂದು ಹೆಚ್‌ಡಿಕೆ ಹೇಳಿದ್ದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ರಾಮನಗರ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ನೈಸ್ ರಸ್ತೆ ಹೆಸರಿನಲ್ಲಿ ಕಳೆದ 20 ವರ್ಷಗಳಿಂದ ರೈತರ ಭೂಮಿಯನ್ನು ವಶಪಡಿಸಿಕೊಂಡು, ಸೂಕ್ತ ಪರಿಹಾರ ನೀಡದೆ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಹೆಚ್‌ಡಿಕೆ ಆರೋಪಿಸಿದ್ದಾರೆ. ನೈಸ್ ರಸ್ತೆ ರಾಜ್ಯ ಸರ್ಕಾರಕ್ಕೆ ಸೇರಿದ್ದು, ನ್ಯಾಷನಲ್ ಹೈವೇ ಅಲ್ಲ ಎಂದು ಅವರು ಹೇಳಿದ್ದಾರೆ.
ಸುಮಾರು 20 ವರ್ಷಗಳಿಂದ ರೈತರಿಗೆ ಹಣ ನೀಡಿಲ್ಲ. 4 ಸಾವಿರ ಕುಟುಂಬಗಳಿಗೆ ನಿವೇಶನ ನೀಡುವ ಭರವಸೆಯೂ ಈಡೇರಿಲ್ಲ. ಹೀಗಿರುವಾಗ ಟೋಲ್ ಸಂಗ್ರಹ ಮಾಡುತ್ತಿರುವುದೇ ದೊಡ್ಡ ಅಕ್ರಮ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕೋರಮಂಗಲದಲ್ಲಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು
ರಾಜ್ಯದ ಇತಿಹಾಸದಲ್ಲೇ ಇಂತಹ ದೊಡ್ಡ ಹಗರಣ ನೋಡಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ ಈ ಟೋಲ್ ಸಂಗ್ರಹ ನಿಲ್ಲಿಸಬೇಕು. ಅವರಿಗೆ ಓದಲು ಬರುತ್ತಾ? ಸಬ್ಜೆಕ್ಟ್ ಗೊತ್ತಿದೆಯಾ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ಸಚಿವ ಎಚ್.ಸಿ. ಬಾಲಕೃಷ್ಣ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಹಿಂದಿನ ಘಟನೆಯೊಂದನ್ನು ಪ್ರಸ್ತಾಪಿಸಿದ್ದಾರೆ. 600 ಕೋಟಿ ರೂ. ಕಾಮಗಾರಿಯ ಹಣದ ವಿಚಾರದಲ್ಲಿ ತಮ್ಮ ಬಳಿ ಬಂದಿದ್ದ ವ್ಯಕ್ತಿಯೊಬ್ಬರು ವಿಷಯವನ್ನು ಪ್ರಸ್ತಾಪಿಸದಂತೆ ಮನವಿ ಮಾಡಿದ್ದರು ಎಂದು ಹೇಳಿದ್ದಾರೆ. ಇವನಿಂದ ನಾನು ಕಲಿಯಬೇಕಾ ಎಂದು ಪ್ರಶ್ನಿಸಿದ್ದಾರೆ.
ಬೆಂ-ಮೈಸೂರು ರಸ್ತೆ ನಿರ್ಮಾಣದ ಹಿನ್ನೆಲೆಯನ್ನೂ ನೆನಪಿಸಿಕೊಂಡ ಹೆಚ್‌ಡಿಕೆ, ಮಾಯಗನಹಳ್ಳಿ ಬಳಿ ನಡೆದ ಬಸ್ ಅಪಘಾತದಲ್ಲಿ ಎಂಟು ಮಕ್ಕಳು ಮೃತಪಟ್ಟ ಬಳಿಕ ದೇವೇಗೌಡರು ಉತ್ತಮ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದ್ದರು ಎಂದು ಹೇಳಿದ್ದಾರೆ.
ಇನ್ನು ‘ಕುಮಾರಸ್ವಾಮಿ ಪಾಪದ ಕೊಳೆ ತೊಳೆಯುತ್ತಿದ್ದಾರೆ’ ಎಂಬ ಡಿ.ಕೆ. ಸುರೇಶ್ ಹೇಳಿಕೆಗೂ ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಹಾಗೂ ಕನಕಪುರದ ಹಿಂದಿನ ಪರಿಸ್ಥಿತಿಯನ್ನು ನೆನಪಿಸಿಕೊಂಡ ಅವರು, ದೇವೇಗೌಡರ ಕಾಲದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ಮಿನುಗಾರಿಕಾ ಬೋಟ್ ಮುಳುಗಡೆ – 6 ಮೀನುಗಾರರ ರಕ್ಷಣೆ

