– ಮೋದಿ ಮೋದಿ ಅಂತ ವೋಟ್ ಹಾಕಿದವರಿಗೆಲ್ಲ ಭ್ರಮನಿರಸನ ಆಗಿದೆ
– ಟ್ರಂಪ್ ಬಾಲ ಹಿಡ್ಕೊಂಡ್ ಸುತ್ತಾಡ್ತಿದ್ರು ಮೋದಿ ಅಂತ ಲೇವಡಿ
ತುಮಕೂರು: ಇಂದಿನ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ (PM Modi), ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಮೋದಿ ಸರ್ಕಾರ ನೇರ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗಂಭೀರ ಆರೋಪ ಮಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಂಡಿದ್ದರ ಅಂಗವಾಗಿ ತುಮಕೂರಿನಲ್ಲಿ ನಡೆದ ʻಸಾಧನಾ ಸಮಾವೇಶʼ ಉದ್ದೇಶಿಸಿ ಅವರು ಮಾತನಾಡಿದರು. ಇದನ್ನೂ ಓದಿ: ದೇವಾಲಯದ ಚಿನ್ನದಿಂದ ಹಣಗಳಿಸುವ ಯೋಜನೆಗಳಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ರಾಜ್ಯ ಸರ್ಕಾರಕ್ಕೆ ಮೂರು ವರ್ಷಗಳು ಪೂರೈಸುತ್ತಿರುವ ಸಂದರ್ಭದಲ್ಲಿ ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಯೋಜಿಸಿದ್ದ “ಮೂರು ವರ್ಷಗಳ ಸಾಧನಾ ಸಮರ್ಪಣಾ” ಸಮಾವೇಶವನ್ನು ಉದ್ಘಾಟಿಸಿ, “ನವ ಕರ್ನಾಟಕ” ಅಭಿವೃದ್ಧಿ ಮಾದರಿಯ ವಸ್ತು ಪ್ರದರ್ಶನ ಮತ್ತು ತುಮಕೂರು ಜಿಲ್ಲಾ ವ್ಯಾಪ್ತಿಯ ₹682 ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಕಾರ್ಯಗಳ… pic.twitter.com/zAnq8A1tI6
— Siddaramaiah (@siddaramaiah) May 19, 2026
ಟ್ರಂಪ್ ಬಾಲ ಹಿಡ್ಕೊಂಡ್ ಸುತ್ತಾಡ್ತಿದ್ರು
ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ಟ್ರಂಪ್ (Donald Trump) ಬಾಲ ಹಿಡಿದುಕೊಂಡು ಸುತ್ತಾಡುತ್ತಿದ್ದರು. ಅಲ್ಲಿ ಹೋದಾಗ ಟ್ರಂಪ್ ಸರ್ಕಾರ ಬರುತ್ತೆ ಅಂತ ಭಾಷಣ ಮಾಡಿದ್ರು. ಟ್ರಂಪ್ ಸರ್ಕಾರ ಬಂತು, ಇರಾನ್ ಮೇಲೆ ಯುದ್ಧವೂ ಆಯಿತು. ಇರಾನ್ ಮೇಲೆ ದಾಳಿ ಮಾಡಿದ್ದಕ್ಕೆ ಮೋದಿ ಒಮ್ಮೆಯೂ ವಿಷಾದಿಸಲಿಲ್ಲ. ಇಂದಿನ ಬೆಲೆ ಏರಿಕೆಗೂ ಕೂಡ ನರೇಂದ್ರ ಮೋದಿ ಅವ್ರೇ ನೇರ ಕಾರಣ ಎಂದು ವಾಗ್ದಾಳಿ ನಡೆಸಿದರು.
ಮೋದಿ ಕಾಲದಲ್ಲಿ ಲಾಭ ಮಾಡಿದ್ದು ಇಬ್ಬರೇ
ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಲಾಭ ಪಡೆದುಕೊಂಡದ್ದು ಅಂಬಾನಿ, ಅದಾನಿ ಇಬ್ಬರು ಮಾತ್ರ. 2014 ರಲ್ಲಿ ಗೌತಮ್ ಅದಾನಿ (Gautam Adani) ಅವರ ಆದಾಯ ಹದಿನಾರುವರೆ ಸಾವಿರ ಕೋಟಿ ಇತ್ತು, ಇಂದು 8 ಲಕ್ಷ ಕೋಟಿ ಆದಾಯ ಹೊಂದಿದ್ದಾರೆ. ಹಾಗೇ ಮುಕೇಶ್ ಅಂಬಾನಿ ಕೂಡ ಆರ್ಥಿಕವಾಗಿ ಬೆಳವಣಿಗೆ ಆಗಿದ್ದಾರೆ. ಆದ್ರೆ ಸಾಮಾನ್ಯ ಮತ್ತು ಮಧ್ಯಮ ವರ್ಗದವರಿಗೆ ಲಾಭ ಆಗಿಲ್ಲ ಎಂದು ಕುಟುಕಿದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ – ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಹೇಗಿದೆ ಇಂದಿನ ದರ?
ವೋಟ್ ಹಾಕಿದವರಿಗೆಲ್ಲ ಭ್ರಮನಿರಸನ
ಇಷ್ಟು ದಿನ ಮೋದಿ ಮೋದಿ ಅಂತ ಕೂಗಿ ವೋಟ್ ಹಾಕಿದವರಿಗೆಲ್ಲ ಇಂದು ಭ್ರಮನಿರಸನವಾಗಿದೆ. ಆದ್ರೆ ನಾವು ಅಧಿಕಾರಕ್ಕೆ ಬಂದ ಮೂರೇ ವರ್ಷದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದೇವೆ. ಇಂದು ಇಡೀ ದೇಶದ ಜಿಎಸ್‌ಟಿ ಬೆಳವಣಿಗೆ 7.4 ಇದೆ, ಆದ್ರೆ ಕರ್ನಾಟಕದ ಜಿಎಸ್‌ಟಿ ಬೆಳವಣಿಗೆ 8.1 ರಷ್ಟಿದೆ. ಅಂದ್ರೆ ದೇಶಕ್ಕೆ ನಾವು ಸಾಕಷ್ಟು ಕೊಡುಗೆ ಕೊಡುತ್ತಿದ್ದೇವೆ. ಇದು ನಾವು ಸಾಮಾಜಿಕ, ಆರ್ಥಿಕವಾಗಿ ಉತ್ತಮವಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಇನ್ನೂ 2 ಅಧಿಕಾರದಲ್ಲಿರುತ್ತೇವೆ. ಉಳಿದ ಎಲ್ಲಾ ಭರವಸೆಗಳನ್ನ ಈಡೇರಿಸುತ್ತೇವೆ, 2028ಕ್ಕೂ ನಾವೇ ಅಧಿಕಾರಕ್ಕೆ ಬರ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತ್ ಮಾದರಿಯಲ್ಲ
ಅಷ್ಟೇ ಅಲ್ಲ, ಎಲ್ಲದಕ್ಕೂ ಗುಜರಾತ್ ಮಾದರಿ ಅಂತ ಹೇಳುತ್ತಿದ್ದರು. ಆದ್ರೆ ಗುಜರಾತ್‌ನಲ್ಲಿ ಬಾಡಿಗೆ ಕಟ್ಟಲಾಗದ ಮಹಿಳೆ ಮತ್ತು ಮಗಳ ಮೇಲೆ ಅತ್ಯಾಚಾರ ನಡೆದಿದೆ. ಹಾಗಾಗಿ ದೇಶಕ್ಕೆ ಗುಜರಾತ್ ಅಲ್ಲ, ಕರ್ನಾಟಕ ಮಾದರಿ ಎಂದು ಹೇಳಿದರು. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಾಸಿಕ 3,000 ರೂ. ನೆರವು
ನೀಟ್ ಹಗರಣಕ್ಕೆ ಕೇಂದ್ರ ಸರ್ಕಾರವೇ ನೇರ ಕಾರಣ
ಇನ್ನೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಮೋದಿ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದ ಸಿಎಂ, ಮೋದಿ ಅವ್ರೇ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು, ಆದರೀಗ ಮರು ಪರೀಕ್ಷೆ ಮಾಡ್ತಿದ್ದಾರೆ. ಇದರಿಂದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು, ಮೋದಿ ಅವ್ರೇ ಹೊರಬೇಕು. ನಾವು ಹಿಂದೆ ಸಿಇಟಿ ತರಹ ಪರೀಕ್ಷೆ ಮಾಡಿ ಅಂತ ಹೇಳಿದ್ವಿ, ಆದ್ರೆ ನಮ್ಮ ಸಲಹೆಯನ್ನ ತಿರಸ್ಕರಿಸಿದ್ರು ಎಂದು ಆಕ್ಷೇಪ ವ್ಯಕ್ತಪಡಿಸಿದ್ರು.
ನಿರುದ್ಯೋಗ ಸಮಸ್ಯೆ ಹೆಚ್ಚಳ
ನಾವು ಅಧಿಕಾರಕ್ಕೆ ಬಂದ್ರೆ ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿವಿ ಅಂತ ಹೇಳಿದ್ರು. 12 ವರ್ಷಗಳಲ್ಲಿ 24 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದ್ರೆ ಮೋದಿ ಅವರು ಒಂದೇ ಒಂದು ಉದ್ಯೋಗವನ್ನೂ ಸೃಷ್ಟಿ ಮಾಡಿಲ್ಲ. ದೇಶದಲ್ಲಿಂದು ನಿರುದ್ಯೋಗ ಪ್ರಮಾಣ 67% ಗೆ ಏರಿಕೆಯಾಗಿದೆ. ಸ್ವಾತಂತ್ರ್ಯ ನಂತರದಿಂದ ಮನಮೋಹನ್ ಸಿಂಗ್ ಅಧಿಕಾರದಲ್ಲಿ ಇದ್ದವರೆಗೆ, ದೇಶದ ಸಾಲ 53 ಲಕ್ಷದ 11 ಸಾವಿರ ಕೋಟಿ ಮಾತ್ರ ಇತ್ತು. ಇಂದು 220 ಲಕ್ಷ ಕೋಟಿಗೆ ದೇಶದ ಸಾಲ ಏರಿಕೆಯಾಗಿದೆ ಇದೇನಾ ಅಚ್ಚೇ ದಿನ್? ಎಂದು ಲೇವಡಿ ಮಾಡಿದರು.
ಹಿಂದೂ – ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚಿದ್ದಾರೆ, ಇಡೀ ದೇಶವನ್ನ ಹಾಳುಗೆಡವಿದ್ದಾರೆ, ಸಮಾಜವನ್ನ ಇಬ್ಬಾಗ ಮಾಡುವ ಕೆಲಸ ಮಾಡ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದರೆ ದೇಶ ಏನಾಗುತೆ? ಎಂಬುದು ಗೊತ್ತಾಗಿದೆಯಲ್ಲ, ಮುಂದಿನ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು.

