DistrictsKarnatakaLatestMain PostShivamoggaUncategorized

ಹಸೆಮಣೆಯಿಂದ ಸೆರೆಮನೆಗೆ: ಬಾಲೆಗೆ ತಾಳಿ ಕಟ್ಟಿದ ಗಂಡ ಜೈಲು ಕಂಡ

ಶಿವಮೊಗ್ಗ: ಮಧು ಮಗಳಿಗೆ ತಾಳಿ ಕಟ್ಟಿದ ಗಂಡು ಹಸೆಮಣೆಯಿಂದ ಸೀದಾ ಸೆರೆಮನೆ ಸೇರಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಶರಾವತಿ ನಗರದ ಯೋಗೀಶ್ ಪಾಂಡಿಯನ್ ಹೀಗೆ ಹಸೆಮಣೆಯಿಂದ ಸೆರೆಮನೆ ಕಂಡ ಮಧುಮಗ. ಅಪ್ರಾಪ್ತೆಗೆ ತಾಳಿ ಕಟ್ಟಿದ್ದೇ ಇವನು ಮಾಡಿದ ಅಪರಾಧ.

ಶಿವಮೊಗ್ಗದ ಸೀತಮ್ಮ ಅನಂತಯ್ಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮದುವೆಯಲ್ಲಿ ವಧು ಇನ್ನೂ ಅಪ್ರಾಪ್ತೆ ಎಂಬ ಮಾಹಿತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯೂ ಆಗಿರುವ ನ್ಯಾಯಾಧೀಶ ಸೋಮಶೇಖರ ಬಾದಾಮಿ ಅವರಿಗೆ ಬಂದಿತ್ತು. ತಕ್ಷಣವೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಸಮೇತ ಕಲ್ಯಾಣ ಮಂಟಪಕ್ಕೆ ಧಾವಿಸಿದರು. ಇವರು ಹೋದಾಗ ಮುಹೂರ್ತಕ್ಕೆ ಇನ್ನೂ ಅರ್ಧಗಂಟೆ ಬಾಕಿ ಇತ್ತು.

ಹಸೆಮಣೆಯಿಂದ ಸೆರೆಮನೆಗೆ: ಬಾಲೆಗೆ ತಾಳಿ ಕಟ್ಟಿದ ಗಂಡ ಜೈಲು ಕಂಡ

ವಧೂ-ವರರ ಪೋಷಕರನ್ನು ಕರೆಸಿ ಅವರೊಂದಿಗೆ ಮಾತುಕತೆ ನಡೆಸಿದ ನ್ಯಾಯಾಧೀಶರು, ಈ ರೀತಿ ಬಾಲ್ಯ ವಿವಾಹ ಕಾನೂನು ಬಾಹಿರ ಎಂದು ತಿಳವಳಿಕೆ ಹೇಳಿದರು. ಇತ್ತ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲೇ ಅತ್ತ ಕೆಲ ಸಂಬಂಧಿಗಳು ವರನಿಗೆ ಉತ್ಸಾಹ ತುಂಬಿ, ತಾಳಿ ಕಟ್ಟು.. ಕಟ್ಟು ಎಂದರು. ಅವರ ಮಾತು ಕೇಳಿ ವರ ಮಹಾಶಯ ತಾಳಿ ಕಟ್ಟೇ ಬಿಟ್ಟ, ತಕ್ಷಣವೇ ಅಲ್ಲಿದ್ದವರು ಚಪ್ಪಾಳೆ ತಟ್ಟಿ, ಅಕ್ಷತೆ ಹಾಕಿದರು. ಈ ಎಲ್ಲಾ ಘಟನೆಗಳೂ ನ್ಯಾಯಾಧೀಶರ ಜೊತೆ ಹೋಗಿದ್ದ ತಂಡದಲ್ಲಿದ್ದ ಹಲವರ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದರು.

ನ್ಯಾಯಾಧೀಶರು ತಕ್ಷಣವೇ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ತಾವೇ ಸ್ಥಳದಲ್ಲಿ ಹಾಜರಿದ್ದು, ವರನನ್ನು ಬಂಧಿಸುವಂತೆ ಆದೇಶಿಸಿದರು. ವರನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಆತನಿಗೆ ಸೆರೆಮನೆ ದಾರಿ ತೋರಿದರು. ವಧುವನ್ನು ಸುರಭಿ ಮಹಿಳಾ ಸಂರಕ್ಷಣಾ ಕೇಂದ್ರಕ್ಕೆ ಸೇರಿಸಲಾಯಿತು. ಮದುವೆ ಮಾಡಿಸಿ, ಓಡಿ ಹೋಗಲು ಯತ್ನಿಸಿದ ಪುರೋಹಿತ, ಕಲ್ಯಾಣ ಮಂಟಪದ ವ್ಯವಸ್ಥಾಪಕ ಹಾಗೂ ಸಂಬಂಧಿಗಳು ಸೇರಿ ಒಟ್ಟು ಹದಿನೈದು ಜನರನ್ನು ಬಂಧಿಸಲಾಗಿದೆ.

ಹಸೆಮಣೆಯಿಂದ ಸೆರೆಮನೆಗೆ: ಬಾಲೆಗೆ ತಾಳಿ ಕಟ್ಟಿದ ಗಂಡ ಜೈಲು ಕಂಡ

ನಾಗರಿಕರ ಶ್ಲಾಘನೆ: ಬಾಲಕಿಯನ್ನು ಮದುವೆ ಆಗಲು ಹೋಗಿ ಜೈಲುಪಾಲಾದ ಈ ಘಟನೆ ಜಿಲ್ಲಾದ್ಯಂತ ತೀವ್ರ ಚರ್ಚಾಸ್ಪದ ವಿಷಯವಾಗಿದೆ. ನ್ಯಾಯಾಧೀಶರೊಬ್ಬರು ಬಾಲ್ಯ ವಿವಾಹ ತಡೆಗಟ್ಟಲು ತಾವೆ ಸ್ವತಃ ಕಲ್ಯಾಣ ಮಂಟಪಕ್ಕೆ ಹೋಗಿದ್ದು ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಹೀಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನ್ಯಾಯಾಧೀಶ ಸೋಮಶೇಖರ್ ಬಾದಾಮಿ ಅವರ ಕೆಲಸಕ್ಕೆ ನಾಗರಿಕರಿಂದ ಶ್ಲಾಘನೆ ದೊರಕಿದೆ.

ಈಗ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಆದರೆ, ನಮ್ಮ ಉದ್ದೇಶ ಇದು ಆಗಿರಲಿಲ್ಲ. ಅವರಲ್ಲಿ ತಿಳವಳಿಕೆ ಮೂಡಿಸಿ, ಮದುವೆ ಮುಂದೂಡಲು ಯತ್ನಿಸಿದೆವು. ಆದರೆ, ಕಣ್ಣೆದುರೇ ಕಾನೂನು ಭಂಗ ಆಗಿದ್ದು ಸಹಿಸಲಾಗಲಿಲ್ಲ. ಈ ಪ್ರಕರಣಕ್ಕೆ ನಾನೇ ಮುಖ್ಯ ಸಾಕ್ಷಿಯಾಗಿ ನಿಲ್ಲುವನಿದ್ದೇನೆ ಎಂದು ನ್ಯಾಯಾಧೀಶ ಸೋಮಶೇಖರ ಬಾದಾಮಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಹಸೆಮಣೆಯಿಂದ ಸೆರೆಮನೆಗೆ: ಬಾಲೆಗೆ ತಾಳಿ ಕಟ್ಟಿದ ಗಂಡ ಜೈಲು ಕಂಡ

ಗ್ರಾಮೀಣ ಪ್ರದೇಶದವರಿಗೆ ಕಾನೂನಿನ ಅರಿವು ಇರೊಲ್ಲ ಎಂದು ಸಾಮಾನ್ಯವಾಗಿ ಹೇಳುತ್ತೇವೆ. ಆದರೆ ನಗರ ಪ್ರದೇಶದಲ್ಲೇ ಬಾಲ್ಯ ವಿವಾಹ ನಡೆದಿರುವುದು ವಿಷಾಧನೀಯ. ಈ ನಿಟ್ಟಿನಲ್ಲಿ ಇನ್ನಷ್ಟು ಜನಜಾಗೃತಿ ಅಗತ್ಯ ಎಂದು ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶ ಶಿವನಗೌಡ ನಾಯಿಕ್ ಅವರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *