ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ 24 ಗಂಟೆ ಆಂಬುಲೆನ್ಸ್‌ನಲ್ಲೇ ಕಾಲ ಕಳೆದ ಕರುಣಾಜನಕ ಘಟನೆಗೆ ಕಾಫಿನಾಡು (Chikkamagaluru) ಸಾಕ್ಷಿಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಅರೆನೂರು ಬಳಿ ರವಿ ಎಂಬಾತ ಬೈಕ್‌ನಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಮಂಗಳೂರಿಗೆ ರೆಫರ್ ಮಾಡಿದ್ದರು. ಆಂಬುಲೆನ್ಸ್‌ನಲ್ಲಿ ಮಂಗಳೂರಿಗೆ ಹೋದ ಗಾಯಾಳು ಯುವಕನಿಗೆ ಸುಮಾರು 8 ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಅದೇ ಆಂಬುಲೆನ್ಸ್‌ನಲ್ಲೇ ವಾಪಸ್ ಆಲ್ದೂರು ಗ್ರಾಮಕ್ಕೆ ಬಂದಿದ್ದಾನೆ.
ಆತನ ಪೋಷಕರು ರಸ್ತೆ ಬದಿ ಆಂಬುಲೆನ್ಸ್‌ನಲ್ಲೇ ಅಸಹಾಯಕರಾಗಿ ನಿಂತಿದ್ದಾರೆ. ಮಂಗಳೂರಿಗೆ ಹೋದ ಗಾಯಾಳುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಸರ್ಜನ್ ಇಲ್ಲ ಎಂದು ವಾಪಸ್ ಕಳಿಸಿದ್ದಾರೆ. ಮತ್ತೊಂದು ಆಸ್ಪತ್ರೆಯಲ್ಲೂ ಬೆಡ್ ಇಲ್ಲದೆ ಚಿಕಿತ್ಸೆ ನೀಡಿಲ್ಲ. ಅಲ್ಲಿಂದ ಮುಕ್ಕಾದಲ್ಲಿರೋ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿ 80 ಸಾವಿರ ರೂ. ಕಟ್ಟಿದ್ರೆ ಚಿಕಿತ್ಸೆ ಸಿಗಲಿದೆ ಎಂದಿದ್ದಾರೆ. ಗಾರೆ ಕೆಲಸ ಮಾಡುವ ಕುಟುಂಬ ಆಂಬುಲೆನ್ಸ್‌ನಲ್ಲೇ ಮಗನನ್ನ ಕರೆತಂದು ರಸ್ತೆ ಬದಿ ನಿಲ್ಲಿಸಿಕೊಂಡಿದ್ದರು. ಬಳಿಕ ಆಲ್ದೂರು ಗ್ರಾಮಸ್ಥರು ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆದೊಯ್ಯುವಂತೆ ಸೂಚಿಸಿ ಕಳಿಸಿಕೊಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜ್ ಇದ್ದರೂ ರೋಗಿಗಳನ್ನ ಹೊರ ಜಿಲ್ಲೆಗೆ ಕಳಿಸೋದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

