ಚಿಕ್ಕಬಳ್ಳಾಪುರ: ದೇಶದಲ್ಲಿ ವಿಧ್ವಂಸಕ ಕೃತ್ಯ ಹಾಗೂ ಭಯೋತ್ಪಾದನೆಗೆ ಪಿತೂರಿ (Terror Plot Case) ನಡೆಸಿದ ಆರೋಪದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಶಬ್ಬೀರ್ ಹಾಗೂ ಸಲಾಮೀನ್ ಇಬ್ಬರನ್ನೂ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ತನಿಖೆಗಾಗಿ ಆರೋಪಿಗಳನ್ನು 5 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಸಿವಿಲ್ ಹಾಗೂ ಸಿಜೆಎಂ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭಯೋತ್ಪಾದನೆಗೆ ಪಿತೂರಿ – ಮಾಸ್ಟರ್ ಮೈಂಡ್ ಶಬ್ಬೀರ್ ಸಿಕ್ಕಿಬಿದ್ದಿದ್ದು ಹೇಗೆ?
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಶಬ್ಬೀರ್ ಹಾಗೂ ಸಲಾಮೀನ್ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಚಿಕ್ಕಬಳ್ಳಾಪುರ ಸಿಪಿಐ ರಂಜನ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ದೇಶದ ಮೂವರು ಪ್ರಭಾವಿ ನಾಯಕರನ್ನು ಟಾರ್ಗೆಟ್ ಮಾಡಿಕೊಂಡು ಬಂಧಿತರು ಪಿತೂರಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೇ, ದೇಶದಲ್ಲಿ ಭಯೋತ್ಪಾದಕ ಹಾಗೂ ವಿಧ್ವಂಸಕ ಕೃತ್ಯ ನಡೆಸುವ ಕುರಿತು ಟೆಲಿಗ್ರಾಂ ಗ್ರೂಪ್‌ನಲ್ಲಿ ಚರ್ಚೆ ನಡೆಸಿದ್ದರು ಎಂಬ ಆರೋಪವೂ ಇದೆ.
ಇದೀಗ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗಳ ವಿಚಾರಣೆ ನಡೆಯಲಿದ್ದು, ಪ್ರಕರಣದ ಹಿಂದೆ ಮತ್ತಷ್ಟು ವ್ಯಕ್ತಿಗಳ ಸಂಪರ್ಕವಿದೆಯೇ, ಟೆಲಿಗ್ರಾಂ ಗ್ರೂಪ್‌ನಲ್ಲಿ ನಡೆದ ಚರ್ಚೆಗಳೇನು ಹಾಗೂ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಿದ್ಧತೆ ನಡೆದಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಗೆ ಪಿತೂರಿ ಪ್ರಕರಣ – ಚಿಕ್ಕಬಳ್ಳಾಪುರ ಪೊಲೀಸರಿಂದ ಮತ್ತೋರ್ವನ ಬಂಧನ

