ರಾಯ್ಪುರ್: ಛತ್ತೀಸ್‌ಗಢದ ಸೂರಜ್‌ಪುರದ ಪಾರ್ಕ್‌ನಲ್ಲಿ 20 ವರ್ಷದ ಯುವತಿಯನ್ನು ಆಕೆಯ ಪ್ರಿಯಕರನೇ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಆಕೆ ಸಾವನ್ನಪ್ಪುವ ಮುನ್ನ ಮೊಬೈಲ್‌ನಲ್ಲಿ ಟೈಪ್ ಮಾಡಿ ಪೊಲೀಸರಿಗೆ ಹಂತಕನ ಸುಳಿವು ನೀಡಿದ್ದಾಳೆ. ಇದರಿಂದ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಲಟೋರಿ ಗ್ರಾಮದ ರಾಧಿಕಾ ರಾಜ್ವಾಡೆ (20) ಪ್ರಿಯಕರನಿಂದ ಹತ್ಯೆಯಾದ ದುರ್ದೈವಿ. ಈಕೆಯ ಪ್ರಿಯಕರ ರಿತೇಶ್ ರಾಜ್ವಾಡೆ (23) ಹತ್ಯೆಗೈದ ಆರೋಪಿಯಾಗಿದ್ದಾನೆ. ರಿತೇಶ್ ಭಾನುವಾರ (ಜು.26) ರಾಧಿಕಾಳನ್ನು ನೆಹರು ಪಾರ್ಕ್‌ಗೆ ಕರೆಸಿಕೊಂಡಿದ್ದ. ಅಲ್ಲಿ ಇಬ್ಬರ ನಡುವೆ ಸುಮಾರು ಒಂದು ಗಂಟೆಗಳ ಕಾಲ ಜಗಳ ನಡೆದಿತ್ತು. ಬಳಿಕ ಜಗಳ ವಿಕೋಪಕ್ಕೆ ತಿರುಗಿ ಆತ ಚಾಕು ತೆಗೆದು ಯುವತಿಯ ಕತ್ತು ಸೀಳಿ ಪರಾರಿಯಾಗಿದ್ದ. ಇದನ್ನೂ ಓದಿ: ಕ್ಯಾಬ್ ಕಾಯುತ್ತಿದ್ದ ಯುವತಿಗೆ ‘ನಿನ್ ರೇಟ್ ಎಷ್ಟು’ ಅಂತ ಕಿರುಕುಳ ನೀಡಿದ ಬೈಕ್ ಸವಾರ
ದಾಳಿಯಾದ ತಕ್ಷಣ ಜೀವ ಉಳಿಸಿಕೊಳ್ಳಲು ರಾಧಿಕಾ ಪಾರ್ಕ್‌ನಿಂದ ಹೊರಗೆ ಓಡಿದ್ದಳು. ಅಲ್ಲದೇ ಸಹಾಯಕ್ಕಾಗಿ ಕೂಗಿಕೊಳ್ಳಲು ಯತ್ನಿಸಿದ್ದಳು, ಆದರೆ ಗಂಟಲು ಸೀಳಿದ್ದರಿಂದ ಆಕೆಗೆ ಕೂಗಲು ಸಾಧ್ಯವಾಗಿಲ್ಲ. ತೀವ್ರ ರಕ್ತಸ್ರಾವದಿಂದ ಪ್ರಜ್ಞೆತಪ್ಪಿ ಬಿದ್ದ ಯುವತಿಯನ್ನು ಸ್ಥಳೀಯರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆಗೆ ತೆರಳಿದ್ದ ಪೊಲೀಸರು ಆಕೆಯನ್ನು ಮಾತನಾಡಿಸಲು ಯತ್ನಿಸಿದ್ದರು. ಈ ವೇಳೆ ಆಕೆ ಪದೇ ಪದೇ ಮೊಬೈಲ್ ಫೋನ್ ಬೇಕೆಂದು ಸನ್ನೆ ಮಾಡಿ ತೋರಿಸಿದ್ದಳು. ಇದನ್ನು ಅರಿತ ಪೊಲೀಸರು ಆಕೆಗೆ ಮೊಬೈಲ್ ನೀಡಿದ್ದರು. ಆಗ ತನ್ನ ಮೇಲಾದ ದಾಳಿಯ ಬಗ್ಗೆ ಟೈಪ್ ಮಾಡಿ ವಿವರವಾಗಿ ಪೊಲೀಸರಿಗೆ ಆಕೆ ತಿಳಿಸಿದ್ದಳು.
ರಾಧಿಕ ನೀಡಿದ ಸುಳಿವಿನಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಕಳೆದ ಆರು ವರ್ಷಗಳಿಂದ ತಾನು ಅವಳೊಂದಿಗೆ ಸಂಬಂಧ ಹೊಂದಿದ್ದೆ. ಇತ್ತೀಚೆಗೆ ತನ್ನನ್ನು ನಿರ್ಲಕ್ಷಿಸಿದ್ದರಿಂದ ಅಸಮಾಧಾನಗೊಂಡಿದ್ದೆ. ಅಲ್ಲದೇ ಆಕೆಗೆ ಬೇರೆಯವರ ಜೊತೆ ಸಂಬಂಧವಿದೆ ಎಂಬ ಶಂಕೆಯಿಂದ ಕೃತ್ಯ ಎಸಗಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಸೂರಜ್‌ಪುರ ಎಸ್‌ಪಿ ಯೋಗೇಶ್ ಪಟೇಲ್ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಮೂಲದ ಯುವತಿಗೆ ಗುಂಡಿಕ್ಕಿ ಹತ್ಯೆ
