– ನಗರದ ಎಲ್ಲಾ ಬೀದಿಗಳಲ್ಲೂ ಮೆರವಣಿಗೆ, ವಿವಿಧ ಕಲಾ ತಂಡಗಳು ಭಾಗಿ
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರತಿ ವರ್ಷ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿರುವ ವಿದ್ಯಾಗಣಪತಿಗೆ ತನ್ನದೇ ಆದ ಇತಿಹಾಸ ಇದೆ. ಈ ವರ್ಷವೂ ಅದ್ಧೂರಿಯಾಗಿ ಗಣೇಶನ ಶೋಭಾಯಾತ್ರೆ ನಡೆಸಲಾಯಿತು.
ಚಾಮರಾಜಗರದಲ್ಲಿ ವಿದ್ಯಾ ಗಣಪತಿ ಮಂಡಳಿಯಿಂದ ಪ್ರತಿ ವರ್ಷ ಗಣೇಶನನ್ನು ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದ್ದು, ಒಂದೂವರೆ ತಿಂಗಳ ಬಳಿಕ ಶೋಭಾ ಯಾತ್ರೆಯೊಂದಿಗೆ ವಿಸರ್ಜನಾ ಮಹೋತ್ಸವ ನಡೆಸುವುದು ವಾಡಿಕೆಯಾಗಿದೆ. 1962 ರಲ್ಲಿ ಮೊದಲ ಬಾರಿಗೆ ನಗರದ ಗುರುನಂಜಶೆಟ್ಟರ ಛತ್ರದ ಬಳಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಅಂದಿನಿಂದಲೂ ಪ್ರತಿ ವರ್ಷ ಗಣೇಶೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಇದನ್ನೂ ಓದಿ: ಉಡುಪಿ | ಮೆಸ್ಕಾಂ ಇಲಾಖೆ ವೈಫಲ್ಯ ಖಂಡಿಸಿ ಬಿಜೆಪಿಯಿಂದ ಪಂಜಿನ ಮೆರವಣಿಗೆ
ಈ ವಿದ್ಯಾಗಣಪತಿಯ ವಿಸರ್ಜನಾ ಮಹೋತ್ಸವ ಸಾಗುವ ಮಾರ್ಗದ ಬಗ್ಗೆ 1976 ರಲ್ಲಿ ಆಕ್ಷೇಪಣೆ ವ್ಯಕ್ತವಾಗಿ ಹೈಕೋರ್ಟ್ನಲ್ಲಿ ವಿಚಾರಣೆ ನಡೆದು ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಂದು ಅಟಲ್ ಬಿಹಾರಿ ವಾಜಪೇಯಿ ಅವರು ಈ ವಿವಾದದ ಬಗ್ಗೆ ಲೋಕಸಭೆಯಲ್ಲೂ ಪ್ರಸ್ತಾಪಿಸಿ ಚರ್ಚೆಗೆ ಗ್ರಾಸವಾಗಿತ್ತು. 1979 ರಲ್ಲಿ ಮಾರ್ಗದ ವಿವಾದ ಸುಪ್ರೀಂ ಕೋರ್ಟ್ನಲ್ಲಿ ಬಗೆಹರಿದಿತ್ತು. ಅಲ್ಲಿಯವರೆಗೂ ಗಣೇಶೋತ್ಸವ ಸ್ಥಗಿತಗೊಂಡಿತ್ತು. ಆದರೆ, 1979 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮತ್ತೆ ಈ ಗಣೇಶೋತ್ಸವದ ಮೆರವಣಿಗೆ ಸಾಗುವಾಗ ಕ್ಷುಲ್ಲಕ ವಿಚಾರಕ್ಕೆ ಎರಡು ಕೋಮುಗಳ ನಡುವೆ ಗಲಾಟೆ ನಡೆದು ಮೆರವಣಿಗೆ ನಿಂತುಹೋಗಿ ಬಳಿಕ ಪೊಲೀಸರೇ ಸೇರಿಕೊಂಡು ಗಣೇಶ ವಿಸರ್ಜನೆ ನೆರವೇರಿಸಿದ್ದರು.
ಪ್ರತಿ ವರ್ಷ ವಿಭಿನ್ನ ರೀತಿಯ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿಕೊಂಡು ಬರುವುದು ಇಲ್ಲಿನ ವಿಶೇಷವಾಗಿದೆ. ಈ ವರ್ಷ ಸಿಂಹಾರೂಢ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಈ ವರ್ಷದ ವಿದ್ಯಾಗಣಪತಿ ಮೆರವಣಿಗೆಗೆ 900 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸರ ಸರ್ಪಗಾವಲಿನಲ್ಲಿ ಸುಮಾರು 6 ಕಿಲೋಮೀಟರ್ ಉದ್ದ ವಿಸರ್ಜನಾ ಮಹೋತ್ಸವ ನಡೆದಿದೆ.
ಗಣೇಶೋತ್ಸವದ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ವೀರಗಾಸೆ, ಕಂಸಾಳೆ, ಚಂಡೆಮದ್ದಳೆ, ಪೂಜಾಕುಣಿತ, ಗೊರವರ ಕುಣಿತ ಮೊದಲಾದ ಜಾನಪದ ಕಲಾ ತಂಡಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು.
