ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಸಂಬಂಧ ಜಾಗೃತಿ ಮೂಡಿಸುವ 2026ನೇ ಸಾಲಿನ ಸಿಇಟಿ (CET) ಸೀಟು ಹಂಚಿಕೆ ಮಂಥನ ಕಾರ್ಯಕ್ರಮವನ್ನು ಇದೇ 25ರಿಂದ 30ರವರೆಗೆ ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪ್ರಕಟಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಲ್ಲಿನ ಕಚೇರಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಪ್ರತಿನಿಧಿಗಳಿಗೆ ಶನಿವಾರ ಆಯೋಜಿಸಿದ್ದ ಸೀಟು ಹಂಚಿಕೆ ಮಂಥನ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರತಿ ಕಾಲೇಜಿನಿಂದಲೂ ಮೂರು-ನಾಲ್ಕು ಮಂದಿ ಉಪನ್ಯಾಸಕರನ್ನು ಆಹ್ವಾನಿಸಿ, ಸೀಟು ಹಂಚಿಕೆ ಬಗ್ಗೆ ಇಡೀ ದಿನ ತರಬೇತಿ ನೀಡಲಾಯಿತು. 170ಕ್ಕೂ ಹೆಚ್ಚು ಉಪನ್ಯಾಸಕರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಮೇ 3 ರಂದು ನಡೆದ ನೀಟ್ ಪರೀಕ್ಷೆ ರದ್ದು
ತರಬೇತಿ ಪಡೆದ ಈ ಉಪನ್ಯಾಸಕರು ತಮ್ಮ ಕಾಲೇಜುಗಳಲ್ಲಿ ನಡೆಯುವ ಸೀಟು ಹಂಚಿಕೆ ಮಂಥನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು/ಪೋಷಕರಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಿದ್ದಾರೆ. ಕಳೆದ ಬಾರಿ ಕೇವಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆದ ಈ ಮಂಥನ ಕಾರ್ಯಾಗಾರ ಈ ವರ್ಷ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿಯೂ ನಡೆಯಲಿದೆ ಎಂದು ವಿವರಿಸಿದರು.
ಕಳೆದ ವರ್ಷ ಕಡಿಮೆ ಅವಧಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಕೆಲವು ಗೊಂದಲ ಆಗಿತ್ತು. ಆದರೆ, ಈ ಬಾರಿ ಮುಂಗಡವಾಗಿ ದಿನಾಂಕ ಮತ್ತು ಸಮಯ ಕಾಯ್ದಿರಿಸಿಕೊಂಡು ಬರುವ ಹಾಗೆ ಕೆಇಎ ವತಿಯಿಂದಲೇ ಆ್ಯಪ್ ಬಿಡುಗಡೆ ಮಾಡಲಿದ್ದು, ಕೊನೆ ಕ್ಷಣದ ಗೊಂದಲಗಳಿಗೆ ತೆರೆ ಬೀಳಲಿದೆ. ಸ್ಲಾಟ್ ಬುಕ್ ಮಾಡಿಕೊಂಡು ಬಂದವರಿಗೇ ಕಾಲೇಜುಗಳಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದೆ. ಆಪ್ಷನ್ಸ್ ದಾಖಲು, ಸೀಟು ಹಂಚಿಕೆ, ಚಾಯ್ಸ್ ದಾಖಲು, ಶುಲ್ಕ ಪಾವತಿ ಹಾಗೂ ಪ್ರವೇಶದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಹಂತಗಳ ಮಾಹಿತಿ ಇಲ್ಲದೆ ಅನೇಕರು ತೊಂದರೆಗೆ ಒಳಗಾಗುತ್ತಿದ್ದು, ಅದನ್ನು ತಪ್ಪಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಮಾತನಾಡಿ, ‘ಮಂಥನ ಕಾರ್ಯಕ್ರಮದ ಸಂದರ್ಭದಲ್ಲಿ ಬರುವ ವಿದ್ಯಾರ್ಥಿಗಳು/ಪೋಷಕರಿಗೆ ಕಾಲೇಜುಗಳಲ್ಲಿನ ಶೈಕ್ಷಣಿಕ ವಾತಾವರಣ ತೋರಿಸುವ ಕೆಲಸವೂ ಮಾಡಬೇಕು’ ಎಂದು ಸಲಹೆ ನೀಡಿದರು.
‘ಕಾಲೇಜುಗಳಲ್ಲಿನ ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್, ಕ್ಯಾಂಟೀನ್ ಇತ್ಯಾದಿ ಓಪನ್ ಡೇ ಘೋಷಿಸುವ ಮೂಲಕ ತೋರಿಸಬೇಕು. ಇದರಿಂದ ಪ್ರವೇಶ ಪಡೆದ ನಂತರ ಅದಿಲ್ಲ-ಇದಿಲ್ಲ ಎಂದು ದೂರುವುದು ತಪ್ಪುತ್ತದೆ. ಹಾಗೆಯೇ ಕಾಲೇಜುಗಳು ಇದೊಂದು ಅವಕಾಶವೆಂದು ತಿಳಿದು ಅದರ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ಕೊಡಲು ಕಾಂಗ್ರೆಸ್ ವಿಫಲ – ರಾಜ್ಯ ತಲೆ ತಗ್ಗಿಸುವ ವಿಷಯ: ಅರಗ ಜ್ಞಾನೇಂದ್ರ ಕಿಡಿ
ಸ್ವಾಗತಿಸಿದ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾತನಾಡಿದರು. ಬೆಳಗ್ಗೆ ಮತ್ತು ಮಧ್ಯಾಹ್ನ – ಎರಡು ಗೋಷ್ಠಿಗಳ ಮೂಲಕ ಆಹ್ವಾನಿತರಿಗೆ ತರಬೇತಿ ನೀಡಲಾಯಿತು. ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಮಂಜುನಾಥ ವಂದಿಸಿದರು.
ಕಲಬುರರ್ಗಿ ಇಎಸ್ಐ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು, ಶಿವಮೊಗ್ಗ ಮತ್ತು ಗದಗ ಸರ್ಕಾರಿ ಮೆಡಿಕಲ್ ಕಾಲೇಜು, ಕಲಬುರಗಿಯ ವಿಟಿಯು ಎಂಜಿನಿಯರಿಂಗ್ ಕಾಲೇಜು ಹೊರತುಪಡಿಸಿ ಇತರ ಎಲ್ಲ ಕಾಲೇಜುಗಳ ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

