-ಸೆ.5ರ ಸಿಜೆಪಿ ಮಾರ್ಚ್ ತಡೆ ನೀಡಲು ನಕಾರ
ನವದೆಹಲಿ: ಸೆ.5ರಂದು ದೆಹಲಿಯಲ್ಲಿ ನಡೆಯಲಿರುವ ಕಾಕ್ರೋಚ್ ಜನತಾ ಪಾರ್ಟಿಯ (Cockroach Janta Party) ಪ್ರತಿಭಟನಾ ಮೆರವಣಿಗೆಗೆ ತಡೆ ನೀಡಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿ.ಮೊಹನಾ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಸೆ.5ರಂದು ಸಿಜೆಪಿ ಕರೆ ನೀಡಿರುವ ಪ್ರತಿಭಟನಾ ಮೆರವಣಿಗೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಲಿದೆ ಎಂದು ಊಹಿಸೋಕಾಗಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: 15ನೇ ವಯಸ್ಸಿಗೆ ಸೂರ್ಯವಂಶಿ ಮತ್ತೊಂದು ರೆಕಾರ್ಡ್; 57 ವರ್ಷಗಳ ದಾಖಲೆ ಉಡೀಸ್
ಸಿಜೆಪಿ ಮೆರವಣಿಗೆಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿದಾರರಿಗೆ, ಈ ವಿಚಾರದಲ್ಲಿ ನೇರವಾಗಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವ ಬದಲು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುವಂತೆ ನ್ಯಾಯಾಲಯ ಸೂಚಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಎಂದು ಪೀಠ ಸ್ಪಷ್ಟಪಡಿಸಿದೆ.
ಈ ಪ್ರಕರಣವನ್ನು ವಿದ್ಯಾರ್ಥಿಗಳ ವಿರುದ್ಧ ನಡೆದ ಪೊಲೀಸ್ ಹಿಂಸಾಚಾರದ ಆರೋಪಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಮುಂದೆ ಸಲ್ಲಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಈ ಸಂಬಂಧದ ಇತರ ಬಾಕಿ ಅರ್ಜಿಗಳೊಂದಿಗೆ ಪ್ರಕರಣವನ್ನು ಸೆಪ್ಟೆಂಬರ್ 10ರಂದು ವಿಚಾರಣೆಗೆ ಪಟ್ಟಿ ಮಾಡುವಂತೆ ಪೀಠ ನಿರ್ದೇಶಿಸಿದೆ.ಇದನ್ನೂ ಓದಿ:ಪೊಲೀಸ್ ಶ್ವಾನಗಳ ಮಧ್ಯೆ ಸ್ಪರ್ಧೆ – ಬೆಳಗಾವಿ ಎಸ್‌ಪಿ ಮೈದಾನದಲ್ಲಿ ಮಿಂಚಿದ ಶ್ವಾನಪಡೆ
ಸಿಜೆಪಿ ಸೆಪ್ಟೆಂಬರ್ 5ರಂದು ದೆಹಲಿಯ ಇಂಡಿಯಾ ಗೇಟ್‌ನಿಂದ ನವದೆಹಲಿ ಪೊಲೀಸ್ ಪ್ರಧಾನ ಕಚೇರಿವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಯುವ ಪ್ರತಿಭಟನಾಕಾರರಿಗೆ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿ ಈ ಮೆರವಣಿಗೆಗೆ ಕರೆ ನೀಡಲಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಸಿಜೆಪಿ ಆರೋಪಿಸಿದೆ. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಯುವ ಸಂಘಟನೆಗಳು ಹಾಗೂ ಯುವಜನರು ಭಾಗವಹಿಸುವ ನಿರೀಕ್ಷೆಯಿದೆ.
