ಉದ್ಯೋಗ ಮತ್ತು ಶಿಕ್ಷಣದಲ್ಲಿ ಅವಕಾಶಗಳ ಕೊರತೆಯಿಂದಾಗಿ ಆಡಳಿತ ವ್ಯವಸ್ಥೆ ವಿರುದ್ಧ ಯುವಸಮುದಾಯ ತಿರುಗಿಬಿದ್ದಿದೆ. ನೀಟ್ ಪರೀಕ್ಷೆಯಲ್ಲಾದ ಅಕ್ರಮಗಳ ವಿರುದ್ಧ ಜಂತರ್ ಮಂತರ್‌ನಲ್ಲಿ ಯುವಜನರು, ಅದರಲ್ಲೂ ಝೆನ್-ಜಿಗಳು (Gen Z) ತಮ್ಮ ಶಕ್ತಿ ಪ್ರದರ್ಶಿಸಿ ಆಡಳಿತ ವರ್ಗಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಈ ಘಟನಾವಳಿ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ ಪರೀಕ್ಷೆಯಲ್ಲಿ ಸುಧಾರಣೆಯ ಭರವಸೆ ನೀಡಿತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ದೇಶದ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಯುವ ಮತದಾರರನ್ನು ಆಕರ್ಷಿಸಲು ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರುವ ಪ್ರಧಾನಿ, ಜೆನ್-ಜಿಗಳ ಜೊತೆ ರೀ-ಕನೆಕ್ಟ್ ಆಗುತ್ತಿದ್ದಾರೆ. ಬೈಕರ್ ಜಾಕೆಟ್ ಮತ್ತು ಸನ್ ಗ್ಲಾಸ್ ಧರಿಸಿ ರ‍್ಯಾಪ್ ಸೌಂಡ್‌ಟ್ರ‍್ಯಾಕ್‌ನಲ್ಲಿ ಕಾಣಿಸಿಕೊಳ್ಳುವ ಕ್ಲಿಪ್‌ಗಳಿಂದ ಹಿಡಿದು, ಅವರ ವಿಶ್ವಾಸಾರ್ಹತೆಯನ್ನು ಸೂಚಿಸಲು ಸಿಟ್‌ಕಾಮ್ ಫ್ರೆಂಡ್ಸ್ ಥೀಮ್ ಕ್ಲಿಪ್‌ಗಳವರೆಗೆ.. ಮೋದಿ ಯುವಜನರ ಕಡೆಗೆ ತಿರುಗಿರುವುದನ್ನು ಸಾಬೀತುಪಡಿಸಿವೆ.
ಪ್ರಧಾನಿ ಮೋದಿ (PM Modi) ಸಾಲು ಸಾಲು ಇನ್‌ಸ್ಟಾ ಪೋಸ್ಟ್‌ಗಳ ಹಿಂದಿನ ಉದ್ದೇಶ ಏನು? ಮಧ್ಯರಾತ್ರಿ 11 ಗಂಟೆಯ ನಂತರ ಸೋಷಿಯಲ್ ಮೀಡಿಯಾದಲ್ಲಿ ಮೋದಿ ಕಾಣಿಸಿಕೊಳ್ತಿರೋದ್ಯಾಕೆ? ಝೆನ್-ಜಿಗಳ ಜೊತೆ ಕನೆಕ್ಟ್ ಆಗ್ತಿದ್ದಾರಾ? ಇದರಿಂದ ಏನಾದರೂ ಪ್ರಯೋಜನ ಆಗಿದೆಯಾ? ಯುವಮತದಾರರನ್ನು ಸೆಳೆಯುವ ಪ್ರಧಾನಿಗಳ ಹೂಡಿರುವ ಮಾಸ್ಟರ್ ಪ್ಲ್ಯಾನ್ ವರ್ಕ್ ಆಗುತ್ತಿದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ವಿವರ. ಇದನ್ನೂ ಓದಿ: Gen Z ಪ್ರತಿಭಟನೆ ನಡುವೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ JPSC ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ


ಯುವ ದನಿ ಸೈಡ್‌ಲೈನ್
2024 ರಲ್ಲಿ ಭಾರತದ ಸಂಸತ್ತಿಗೆ ಆಯ್ಕೆಯಾದ ಸಂಸದರ ಸರಾಸರಿ ವಯಸ್ಸು ದಾಖಲೆಯ 56 ವರ್ಷಗಳನ್ನು ತಲುಪಿದೆ. ಕೇಂದ್ರ ಸರ್ಕಾರ ಯುವಸಮುದಾಯದ ಕಡೆ ಗಮನ ಹರಿಸದಿರುವುದಕ್ಕೆ ಇದು ಒಂದು ಕಾರಣ ಎನ್ನಲಾಗಿದೆ. ಶಾಸಕಾಂಗದಲ್ಲಿ ಹೆಚ್ಚಿನ ಯುವ ಪ್ರಾತಿನಿಧ್ಯವಿಲ್ಲ ಎಂದು ಯಂಗ್ ಲೀಡರ್ಸ್ ಫಾರ್ ಆಕ್ಟಿವ್ ಸಿಟಿಜನ್‌ಶಿಪ್‌ನ ಸಿಇಒ ಶಿಪ್ರಾ ಬದುನಿ ತಿಳಿಸಿದ್ದಾರೆ. ಭಾರತವು ವಿಶ್ವವಿದ್ಯಾಲಯ ಮಟ್ಟದಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಹೊಂದಿದೆ. ಅಲ್ಲಿ ವಿದ್ಯಾರ್ಥಿ ಪಕ್ಷಗಳು ಬಹಳ ಹಿಂದಿನಿಂದಲೂ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳೊಂದಿಗೆ ಸಂಬಂಧ ಹೊಂದಿವೆ. ಕಳೆದ ಒಂದು ದಶಕದಲ್ಲಿ ಈ ವ್ಯವಸ್ಥೆಯನ್ನು ನಿರ್ಲಕ್ಷಿಸಲಾಗಿದೆ. ವಿದ್ಯಾರ್ಥಿಗಳು ಕೇವಲ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ ಎಂಬಂತಹ ವಾತಾವರಣ ಸೃಷ್ಟಿಸಲಾಗಿದೆ. ಇದರಿಂದ ಯುವಜನರ ಕಷ್ಟ-ಸುಖ, ಬೇಕು-ಬೇಡಗಳನ್ನು ಅರಿಯುವುದು ಕಷ್ಟವಾಗಿದೆ. ಹೀಗಾಗಿ, ಯುವ ದನಿ ಸ್ಫೋಟಿಸಿದೆ ಎಂದಿದ್ದಾರೆ ಬದುನಿ.
‘ನೀಟ್’ ಪ್ರತಿಭಟನೆ ಕೋಲಾಹಲ
ಇತ್ತೀಚೆಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಯುವಜನತೆ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ಝೆನ್-ಜಿಗಳೇ ಪ್ರಧಾನವಾದ ಈ ಹೋರಾಟಕ್ಕೆ ದೇಶಾದ್ಯಂತ ಭರಪೂರ ಬೆಂಬಲ ವ್ಯಕ್ತವಾಯಿತು. ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಗಳು ಹೋರಾಟಗಾರರನ್ನು ಇನ್ನಷ್ಟು ಕೆರಳಿಸಿದವು. ಸರ್ಕಾರದಿಂದ ಉತ್ತರದಾಯಿತ್ವವನ್ನು ಒತ್ತಾಯಿಸಲು ವಿದ್ಯಾರ್ಥಿಗಳು ಭಾರತದ ಬೀದಿ ಬೀದಿಗಳಲ್ಲಿ ಸೇರುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಜನರೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಸಂಪರ್ಕ ಸಾಧಿಸುವ ಅಗತ್ಯವಿದೆ ಎಂಬುದನ್ನು ಅರಿತುಕೊಂಡಂತೆ ತೋರುತ್ತಿದೆ. ಇದೇ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಮೋದಿ ಒಂದು ಅಪರೂಪದ ಸೆಲ್ಫಿ ವೀಡಿಯೊ ಪೋಸ್ಟ್ ಮಾಡಿದರು. ಇದನ್ನೂ ಓದಿ: ನಮಗೆ ನಿಮ್ಮ ಮೇಲೆ ನಂಬಿಕೆ ಇದೆ, ದೇಶಕ್ಕೆ ನಿಮ್ಮ ಅಗತ್ಯವಿದೆ – ʻಕಾಕ್ರೋಚ್ʼ ಪ್ರತಿಭಟನೆ ಬಳಿಕ ಜೆನ್-ಝಿ ಉದ್ದೇಶಿಸಿ ಪ್ರಧಾನಿಯ ಮೊದಲ ಭಾಷಣ

40 ಕೋಟಿ ಝೆನ್-ಜಿಗಳ ಆಕರ್ಷಣೆ?
ಜುಲೈ 31 ರಂದು ಪೋಸ್ಟ್ ಆಗಿದ್ದ ಲಂಬವಾಗಿ ಚಿತ್ರೀಕರಿಸಲಾದ ಕ್ಲಿಪ್, ಮೋದಿ ‘ಹಾಯ್.. ಫ್ರೆಂಡ್ಸ್’ ಎಂಬ ಸಾಂದರ್ಭಿಕ ಶುಭಾಶಯವನ್ನು ಹೇಳುವುದನ್ನು ಒಳಗೊಂಡಿತ್ತು. ಇದು 2029 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ 40 ಕೋಟಿಗೂ ಹೆಚ್ಚು ಝೆನ್-ಜಿ ಮತದಾರರನ್ನು ಸೆಳೆಯುವ ಗುರಿಯನ್ನು ಹೊಂದಿರುವ ಅವರ ಡಿಜಿಟಲ್ ಮೋಡಿ ಎನ್ನಬಹುದು. ಇದರ ಬೆನ್ನಲ್ಲೇ ಒಂದಾದ ಮೇಲೊಂದರಂತೆ ಐದು ಝೆನ್-ಜಿ ಶೈಲಿಯ ಇನ್‌ಸ್ಟಾ ಪೋಸ್ಟ್‌ಗಳನ್ನು ಪ್ರಧಾನಿ ಹರಿಬಿಟ್ಟರು. ಇದು ಯುವಜನತೆ ಮತ್ತು ಆಡಳಿತ ಸರ್ಕಾರದ ನಡುವಿನ ಅಂತರವನ್ನು ತಗ್ಗಿಸಿದಂತೆ ಕಾಣುತ್ತಿದೆ. ದಾಖಲೆಯ ವೀವ್ಸ್ ಮತ್ತು ಕಾಮೆಂಟ್‌ಗಳನ್ನು ಗಮನಿಸಿದರೆ, ಪ್ರಧಾನಿಗಳ ಮಾಸ್ಟರ್ ಪ್ಲ್ಯಾನ್ ವರ್ಕ್ ಆದಂತೆ ಕಾಣುತ್ತಿದೆ. ಮೊದಲ ವೀಡಿಯೊ ಟ್ರೋಲಿಗರ ಬಾಯಿಗೆ ತುತ್ತಾಯಿತು. 2ನೇ ವೀಡಿಯೊದಿಂದ ಕ್ಯಾಮೆರಾ ಆ್ಯಂಗಲ್‌ಗಳು ಮತ್ತು ಬೆಳಕನ್ನು ಸುಧಾರಿಸಿದ್ದಾರೆ. ವೈವಿಧ್ಯಮಯ ರೀತಿಯ ಪ್ರಯತ್ನಗಳಿವೆ. ಝೆನ್-ಜಿಗಳು ಹೆಚ್ಚು ಸಕ್ರಿಯವಾಗುವ ಸಮಯದಲ್ಲೇ (ರಾತ್ರಿ 11ರ ನಂತರ) ಮೋದಿ ಅವರು ವಿಡಿಯೋಗಳನ್ನು ಮಾಡುತ್ತಿದ್ದಾರೆ.
ರಾಜಕೀಯ ಅಂತರ ಕಡಿಮೆ ಮಾಡೋದು ಹೇಗೆ?
ಯುವಜನತೆ ನಡುವಿನ ರಾಜಕೀಯ ಅಂತರವನ್ನು ಕಡಿಮೆ ಮಾಡಲು ಬಿಜೆಪಿ ಇನ್ನೂ ಅವಕಾಶಗಳಿವೆ. ದೆಹಲಿ ಪ್ರತಿಭಟನೆಯ ಕಾರ್ಯಸೂಚಿ ಭಾರತದ ಶಿಕ್ಷಣ ವ್ಯವಸ್ಥೆಯ ವ್ಯವಸ್ಥಿತ ವೈಫಲ್ಯವಾಗಿದೆ. ಅದರ ಬಗ್ಗೆ ಮಾತನಾಡಬೇಕಿದೆ. ಬಿಜೆಪಿ ಸರ್ಕಾರವು ವಿವಿಧ ನಾಗರಿಕ ಹಂತಗಳಲ್ಲಿ ಯುವಕರೊಂದಿಗೆ ಮಾತನಾಡಬೇಕು. ರಚನಾತ್ಮಕ ಬದಲಾವಣೆಗಳನ್ನು ಮಾಡಬೇಕು. ಈಗಾಗಲೇ ಆಗಿರುವ ದೋಷವನ್ನು ಇದು ಎಷ್ಟರ ಮಟ್ಟಿಗೆ ಸರಿಪಡಿಸುತ್ತದೆ ಎಂಬುದು ಖಚಿತವಿಲ್ಲ. ಆದರೆ, ಇದು ಯುವಜನರಿಗೆ ಮುಖ್ಯವಾದ ಸಮಸ್ಯೆಗಳ ಬಗ್ಗೆ ಬಿಜೆಪಿಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ. ಪಕ್ಷವು ಅವುಗಳನ್ನು ಪರಿಹರಿಸಲು ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂದು ಯಂಗ್ ಲೀಡರ್ಸ್ ಫಾರ್ ಆಕ್ಟಿವ್ ಸಿಟಿಜನ್‌ಶಿಪ್‌ನ ಸಿಇಒ ಶಿಪ್ರಾ ಬದುನಿ ತಿಳಿಸಿದ್ದಾರೆ. ಇದನ್ನೂ ಓದಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಬಂದ್ ಮಾಡಿ – ಕೇಂದ್ರಕ್ಕೆ ಹೈಕೋರ್ಟ್ ಸಲಹೆ
2029 ರ ಸಾರ್ವತ್ರಿಕ ಚುನಾವಣೆಯ ಮೇಲೆ ಕಣ್ಣು?
ಭಾರತದಲ್ಲಿ ಯುವಜನರ ಪ್ರಾಬಲ್ಯ ಹೆಚ್ಚಿದೆ. ದೇಶದ 1.4 ಶತಕೋಟಿ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 2029 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಹೊತ್ತಿಗೆ ಝೆನ್-ಜಿ ಅತಿದೊಡ್ಡ ವೋಟ್‌ಬ್ಯಾಂಕ್ ಆಗುವ ಸಾಧ್ಯತೆ ಇದೆ. ಇದು ಮೋದಿಯವರಿಗೆ ನಾಲ್ಕನೇ ಅವಧಿಗೆ ಅಧಿಕಾರವನ್ನು ನೀಡಬಹುದು. ಹೀಗಾಗಿ, ಭಿನ್ನ ಆಲೋಚನೆಯ ಯುವಸಮುದಾಯವನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದಂತೆ ಕಾಣುತ್ತಿದೆ. ಪಕ್ಷವು ಸಾಮಾಜಿಕ ಮಾಧ್ಯಮಗಳನ್ನು ಮೀರಿ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ದೆಹಲಿ ಪ್ರತಿಭಟನೆಗಳ ನಂತರ ನಡೆದ ಸಂಪುಟ ಸಭೆಯಲ್ಲಿ, ‘ಯುವಕರನ್ನು ತಲುಪಲು ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವಂತೆ’ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಿಗೆ ಕರೆ ನೀಡಿದ್ದರು. ಸಚಿವರು ರೀಲ್ಸ್ ಹಾಗೂ ಇತರೆ ಜಾಲತಾಣಗಳ ಮಾಧ್ಯಮಗಳ ಮೂಲಕ ಸರ್ಕಾರದ ಸಾಧನೆಗಳು ಮತ್ತು ಜನಪರ ಯೋಜನೆಗಳನ್ನು ಯುವಜನತೆಗೆ ತಲುಪಿಸಬೇಕು ಎಂದು ಸೂಚಿಸಿದ್ದರು. ಈ ಎಲ್ಲಾ ಕಾರ್ಯತಂತ್ರಗಳನ್ನು ಗಮನಿಸಿದರೆ, ಬಿಜೆಪಿ ಬರುವ ಲೋಕಸಭಾ ಚುನಾವಣೆಯ ಅತಿದೊಡ್ಡ ವೋಟ್‌ಬ್ಯಾಂಕ್ ವರ್ಗವನ್ನು ಆಕರ್ಷಿಸಲು ವೇದಿಕೆ ಸಜ್ಜುಗೊಳಿಸಿದಂತೆ ಕಾಣುತ್ತಿದೆ.

ಮೋದಿ ಇನ್‌ಸ್ಟಾ ಕಡೆ ವಾಲಿದ್ದು ಯಾಕೆ?
ಭಾರತದಲ್ಲಿ 55 ಕೋಟಿಗಿಂತಲೂ ಮಂದಿ ಹೆಚ್ಚು ಇನ್‌ಸ್ಟಾಗ್ರಾಮ್ ಬಳಕೆದಾರರಿದ್ದಾರೆ. ಝೆನ್-ಜಿ (18–24 ವರ್ಷ ವಯಸ್ಸಿನವರು) ಮತ್ತು ಮಿಲೇನಿಯಲ್ಸ್ (25–34 ವರ್ಷ ವಯಸ್ಸಿನವರು) ಇನ್‌ಸ್ಟಾದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಅವರು ಪ್ರತಿದಿನ 3 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಸಾಮಾಜಿಕ ವೇದಿಕೆಗಳಲ್ಲೇ ಕಳೆಯುತ್ತಿದ್ದಾರೆ. ಇನ್‌ಸ್ಟಾ ಒಟ್ಟು ಬಳಕೆದಾರರಲ್ಲಿ ಜೆನ್-ಜಿಗಳು ಸುಮಾರು 30% ರಷ್ಟಿದ್ದಾರೆ. ಸರಿಸುಮಾರು 33% ರಿಂದ 38.5% ರಷ್ಟು ಮಿಲೇನಿಯಲ್ಸ್, ಇನ್‌ಸ್ಟಾ ಬಳಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: Handloom Day | ʻನನ್ನೊಂದಿಗೆ ವಿಡಿಯೋ ಮಾಡಲು ಸಿದ್ಧರಾಗಿʼ – ಫ್ರೆಂಡ್ಸ್‌ಗೆ ನಮೋ ಮತ್ತೊಂದು ಸಂದೇಶ
‘ಗೆಟ್ ರೆಡಿ ವಿತ್ ಮೀ’
ದೇಶದ ಯುವಜನರನ್ನು ಸೆಳೆಯಲು ಮೋದಿ ಮತ್ತೊಮ್ಮೆ ಸೋಷಿಯಲ್ ಮೀಡಿಯಾಗಳ ಜನಪ್ರಿಯ ಟ್ರೆಂಡ್‌ಗಳತ್ತ ಮುಖ ಮಾಡಿದ್ದಾರೆ. ರಾಷ್ಟ್ರೀಯ ಕೈಮಗ್ಗ ದಿನ ಹಿನ್ನೆಲೆಯಲ್ಲಿ ಗುರುವಾರ (ಆ.7) ಪ್ರಧಾನಿಗಳು ಇನ್‌ಸ್ಟಾದಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದರು. ಕೈಮಗ್ಗದ ಉಡುಪುಗಳನ್ನು ಧರಿಸಿ ‘ಗೆಟ್ ರೆಡಿ ವಿತ್ ಮಿ’ (GRWM) ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಭಾರತದ ನೇಕಾರರ ಪರಿಶ್ರಮವನ್ನು ಜಗತ್ತಿಗೆ ಪರಿಚಯಿಸಬಹುದು ಎಂದು ಮೋದಿ ಕರೆ ನೀಡಿದ್ದರು. ಜಿಆರ್‌ಡಬ್ಲ್ಯೂಎಂ ಅನ್ನೋದು ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯವಾಗಿರುವ ಟ್ರೆಂಡ್ ಆಗಿದೆ.
ಝೆನ್-ಜಿಗಳಿಗೆ ಪ್ರಧಾನಿ ಸಂದೇಶ ಏನು?
‘ಪ್ರತಿಯೊಂದು ಪೀಳಿಗೆಯೂ ತನ್ನ ಕಾಲದ ನಿರ್ದಿಷ್ಟ ಸವಾಲುಗಳನ್ನು ಎದುರಿಸುತ್ತದೆ. ತನ್ನದೇ ಆದ ರಾಷ್ಟ್ರೀಯ ಜವಾಬ್ದಾರಿಯನ್ನು ಸಹ ಹೊಂದಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ನಿಮ್ಮ ಜೀವನದ ಮುಂದಿನ 30 ರಿಂದ 35 ವರ್ಷಗಳಲ್ಲಿ ನೀವು ಏನೇ ಮಾಡಿದರೂ ಅದು ‘ವಿಕಸಿತ ಭಾರತ’ದತ್ತ ನಮ್ಮ ಪ್ರಯಾಣದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ, ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಆಧಾರವೂ ಹೀಗಿರಬೇಕು: ಇದು ದೇಶಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತದೆ? ಇದು ದೇಶದ ಯಾವ ಅಗತ್ಯಗಳನ್ನು ಪೂರೈಸುತ್ತದೆ ಎಂದು. ನಮಗೆ ನಿಮ್ಮ ಮೇಲೆ ನಂಬಿಕೆ ಇದೆ. ದೇಶಕ್ಕೆ ನಿಮ್ಮ ಅಗತ್ಯವಿದೆ ಎಂದು ಝೆನ್-ಜಿಗಳಿಗೆ ಪ್ರಧಾನಿ ಮೋದಿ ಸಂದೇಶ ರವಾನಿಸಿದ್ದಾರೆ.

