– ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಸರ್ಕಾರ ಇದ್ದಾಗ ಮಾತ್ರ ಜನ ನೆಮ್ಮದಿಯಿಂದ ಇರ್ತಾರೆ
– ಬಸ್ ಡೀಸೆಲ್ಗೂ ಹಣ ಇಲ್ಲ ಅನ್ನೋ ಪರಿಸ್ಥಿತಿ ಕರ್ನಾಟಕ ಸರ್ಕಾರಕ್ಕೆ ಬಂದಿರಲಿಲ್ಲ
ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರಿಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Deve Gowda) ಅವರನ್ನ ಭೇಟಿಯಾಗಿದ್ದಾರೆ. ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಗೌಡರ ನಿವಾಸಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಇಂದು ಸಂಜೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.
ಪರಿಷತ್ ಭರ್ಜರಿ ಫಲಿತಾಂಶದ ಬೆನ್ನಲ್ಲೇ ದೋಸ್ತಿ ದಿಗ್ಗಜರ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮುಂಚಿನ ಚುನಾವಣೆಗಳಲ್ಲಿ ಮೈತ್ರಿ ಮುಂದುವರಿಸುವ ನಿಟ್ಟಿನಲ್ಲಿ ಉಭಯ ನಾಯಕರ ಮಾತುಕತೆ ಮಹತ್ವ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಶಾಸಕರಾದ ಸಿ.ಕೆ ರಾಮಮೂರ್ತಿ, ಎಂ ಕೃಷ್ಣಪ್ಪ, ನೂತನ ಎಮ್ಎಲ್ಸಿ ಎ.ಪಿ ರಂಗನಾಥ್ ಉಪಸ್ಥಿತರಿದ್ದರು.
ಇನ್ನೂ ದೊಡ್ಡಗೌಡರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ದೇವೇಗೌಡರ ಜೊತೆ ಪ್ರಚಲಿತ ರಾಜಕೀಯ ಚರ್ಚೆ ಮಾಡಿದ್ದೇವೆ. ಸಾಕಷ್ಟು ಸಲಹೆ ಕೊಟ್ಟಿದ್ದಾರೆ. ಅನಿವಾರ್ಯ ಕಾರಣದಿಂದ ಕುಮಾರಸ್ವಾಮಿ ಬರಲು ಆಗಿಲ್ಲ. ಬಿಜೆಪಿ- ಜೆಡಿಎಸ್ ಸರ್ಕಾರ ರಾಜ್ಯದಲ್ಲಿ ಇದ್ದಾಗ ಮಾತ್ರ ಜನ ನೆಮ್ಮದಿ ಇಂದ ಇರ್ತಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ದೇವೇಗೌಡರು ಸಲಹೆ ಕೊಟ್ಟಿದ್ದಾರೆ. ಪ್ರಸ್ತುತ ಸರ್ಕಾರದ ಬಗ್ಗೆ ದೇವೇಗೌಡರಿಗೆ ಸಮಾಧಾನವಿಲ್ಲ. ಮುಂದಿನ ಎಲ್ಲ ಎಲೆಕ್ಷನ್ ಗಳಲ್ಲೂ ಜೊತೆಯಾಗಿ ಹೋಗ್ತೇವೆ ಎಂದು ಹೇಳಿದ್ದಾರೆ.
ಅಲ್ಲದೇ, ಮೈತ್ರಿ ಮುಂದುವರಿಸುವ ಬಗ್ಗೆ ಅಮಿತ್ ಶಾ, ಮೋದಿ, ದೇವೇಗೌಡರೆಲ್ಲ ಸೇರಿ ತೀರ್ಮಾನ ತಗೋತಾರೆ. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿರ್ತೀವಿ. ಈಗ ಉತ್ತಮ ಮೈತ್ರಿ ಇದೆ, ಇದೇ ರೀತಿ ಮುಂದಿವರೆಯುತ್ತೀವಿ. ಡಿಕೆಶಿ ಅವ್ರು ದೆಹಲಿಗೆ ಹೋಗೋದು ಬರೋದು ಆಗಿದೆ. ಕಾಂಗ್ರೆಸ್ ಕಚ್ಚಾಟ ನೋಡಿದ್ರೆ, ಯಾವ ಸಮಯದಲ್ಲಿ ಏನ್ ಬೇಕಾದ್ರು ಆಗಬಹುದು. ಪರಿಸ್ತಿತಿ ಕೈ ಮೀರಿ ಹೋಗ್ತಿದೆ, ನೋಡೋಣ ಏನಾಗುತ್ತೆ ಅಂತ. ಜನ ಕೊಟ್ಟ ತೆರಿಗೆ ಹಣ ಎಲ್ಲೋಗ್ತಿದೆ? ಬಸ್ ಡಿಸೆಲ್ಗೂ ಹಣ ಇಲ್ಲ ಅಂತಿದ್ದಾರೆ. ಎಂದಿಗೂ ರಾಜ್ಯಕ್ಕೆ ಇಂತಹ ಸ್ಥಿತಿ ಬಂದಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


