ಲಂಡನ್: ನಿರೀಕ್ಷೆಯಂತೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್(Keir Starmer) ಅವರು ಇಂದು(ಜೂನ್ 22) ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ
ಆಡಳಿತಾರೂಢ ಲೇಬರ್ ಪಕ್ಷದೊಳಗೆ ಅವರ ನಾಯಕತ್ವದ ವಿರುದ್ಧ ದೊಡ್ಡ ಮಟ್ಟದ ಅಸಮಾಧಾನ ಸ್ಫೋಟಗೊಂಡಿತ್ತು. ಪಕ್ಷದ ಒಳಗಿನ ತೀವ್ರ ರಾಜಕೀಯ ಒತ್ತಡದಿಂದಾಗಿ ಅವರು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.
ರಾಜೀನಾಮೆ ಭಾಷಣದಲ್ಲಿ, ನನ್ನ ಸಂಸದೀಯ ಪಕ್ಷದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ನಾನೇ ಸರಿಯಾದ ವ್ಯಕ್ತಿಯೇ ಎಂಬುದು ಅವರ ಪ್ರಶ್ನೆಯಾಗಿತ್ತು. ನನ್ನ ಪಕ್ಷದ ನಿರ್ಧಾರವನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ.ನಾನು ಲೇಬರ್ ಪಕ್ಷದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪ್ರಕಟಿಸಿದರು.
ನಾನು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ನಾನು ಪ್ರೀತಿಸುವ ನನ್ನ ದೇಶವನ್ನು ಮೊದಲ ಸ್ಥಾನದಲ್ಲಿಟ್ಟು ಕೈಗೊಂಡ ನಿರ್ಧಾರಗಳಾಗಿದ್ದವು. ಇಂದಿನ ಬ್ರಿಟನ್ ದೇಶವು ಎರಡು ವರ್ಷಗಳ ಹಿಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ ಮತ್ತು ನ್ಯಾಯಯುತವಾಗಿದೆ. ನನ್ನ ನಂತರ ಬರುವ ಹೊಸ ಪ್ರಧಾನಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಮತ್ತು ಅಧಿಕಾರ ಹಸ್ತಾಂತರವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತೇನೆ ಎಂದರು.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲೇಬರ್ ಪಕ್ಷವು ಭಾರಿ ಸೋಲನ್ನು ಅನುಭವಿಸಿತ್ತು. ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಗಳಲ್ಲೇ ಮತದಾರರು ಲೇಬರ್ ಪಕ್ಷವನ್ನು ಕೈಬಿಟ್ಟಿದ್ದರಿಂದ, ಸ್ಟಾರ್ಮರ್ ನಾಯಕತ್ವದ ಮೇಲೆ ಸಂಸದರಿಗೆ ನಂಬಿಕೆ ಕಡಿಮೆಯಾಗಿತ್ತು.
ವಲಸೆ ನೀತಿ, ಇಂಧನ ಸಮಸ್ಯೆಗಳು ಮತ್ತು ಸರಣಿ ಹಗರಣಗಳಿಂದಾಗಿ ಸಾರ್ವಜನಿಕರಲ್ಲಿ ಇವರ ಮೇಲಿನ ವಿಶ್ವಾಸ ಸಂಪೂರ್ಣವಾಗಿ ಕಡಿಮೆಯಾಗಿತ್ತು. ಕೀರ್ ಸ್ಟಾರ್ಮರ್ ಅವರ ಪ್ರಮುಖ ರಾಜಕೀಯ ಎದುರಾಳಿ ಆಂಡಿ ಬರ್ನ್‌ಹ್ಯಾಮ್ (Andy Burnham) ಅವರು ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ್ದರು. ಇದು ಸ್ಟಾರ್ಮರ್ ನಾಯಕತ್ವಕ್ಕೆ ನೇರ ಸವಾಲಾಗಿ ಪರಿಣಮಿಸಿತ್ತು.
ಸರ್ಕಾರದ ರಕ್ಷಣಾ ವೆಚ್ಚದ ನಿರ್ಧಾರಗಳನ್ನು ವಿರೋಧಿಸಿ ರಕ್ಷಣಾ ಸಚಿವ ಜಾನ್ ಹೀಲಿ ಸೇರಿದಂತೆ ಹಲವು ಪ್ರಮುಖ ಸಚಿವರು ಮತ್ತು ಅಧಿಕಾರಿಗಳು ಈಗಾಗಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಪ್ರಮುಖ ಭರವಸೆಗಳಿಂದ ಸ್ಟಾರ್ಮರ್ ಸರ್ಕಾರ ಹಿಂದೆ ಸರಿದಿದೆ ಎಂಬ ಟೀಕೆಯೂ ಇವರ ಮೇಲಿತ್ತು.
🚨 BREAKING: Keir Starmer gets emotional as he resigns as Prime Minister
“I shall spend more time on the most important job. Being the best husband I can to my fantastic wife Vic… and being best dad I can to my beautiful children, who have been my pride and joy” pic.twitter.com/3OaOMTqPLQ
— Politics UK (@PolitlcsUK) June 22, 2026
ಅಮೆರಿಕಕ್ಕೆ ಬ್ರಿಟನ್ ರಾಯಭಾರಿಯಾಗಿ ಪೀಟರ್ ಮ್ಯಾಂಡೆಲ್ಸನ್ ಅವರನ್ನು ನೇಮಕ ಮಾಡಿದ ವಿಷಯದಲ್ಲಿ ಸ್ಟಾರ್ಮರ್ ಭಾರಿ ಟೀಕೆಗೆ ಒಳಗಾಗಿದ್ದರು. ವಿವಾದಿತ ವ್ಯಕ್ತಿ ಜೆಫ್ರಿ ಎಪ್ಸ್ಟೀನ್ ಜೊತೆ ಮ್ಯಾಂಡೆಲ್ಸನ್ ನಿಕಟ ಸಂಬಂಧ ಹೊಂದಿದ್ದರು. ಭದ್ರತಾ ಸಂಸ್ಥೆಗಳು ಇವರ ನೇಮಕಾತಿಗೆ ಒಪ್ಪಿಗೆ ನೀಡದಿದ್ದರೂ, ಸ್ಟಾರ್ಮರ್ ಸರ್ಕಾರ ಅದನ್ನು ನಿರ್ಲಕ್ಷಿಸಿ ನೇಮಕ ಮಾಡಿತ್ತು ಎಂಬ ವಿಷಯ ಬಯಲಿಗೆ ಬಂದಿತ್ತು.
ಕೀರ್ ಸ್ಟಾರ್ಮರ್ ಅವರು 2024 ರ ಜುಲೈನಲ್ಲಿ ಭಾರೀ ಬಹುಮತದೊಂದಿಗೆ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಕೇವಲ ಎರಡು ವರ್ಷಗಳಲ್ಲೇ ಅವರು ತಮ್ಮದೇ ಪಕ್ಷದ ನಾಯಕರ ಬೆಂಬಲ ಕಳೆದುಕೊಂಡು ಅಧಿಕಾರ ಬಿಡಬೇಕಾಗಿ ಬಂದಿದೆ.
2010 ರಿಂದ 6 ಮಂದಿ ಪ್ರಧಾನಿಗಳು ಬ್ರಿಟನ್ ಮುನ್ನಡೆಸಿದ್ದಾರೆ. ಡೇವಿಡ್ ಕ್ಯಾಮರೂನ್ (2010 – 2016), ಥೆರೆಸಾ ಮೇ (2016 – 2019),ಬೋರಿಸ್ ಜಾನ್ಸನ್ (2019 – 2022), ಲಿಜ್ ಟ್ರಸ್ (2022), ರಿಷಿ ಸುನಕ್ (2022 – 2024) ಪ್ರಧಾನಿ ಪಟ್ಟ ಅಲಂಕರಿಸಿದ್ದರು. 2024 ರಿಂದ ಕೀರ್ ಸ್ಟಾರ್ಮರ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಜುಲೈ 4, 2024 ರಂದು ನಡೆದ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು (Labour Party) ಭಾರಿ ಬಹುಮತದೊಂದಿಗೆ ಐತಿಹಾಸಿಕ ಜಯ ದಾಖಲಿಸಿತು. ಆ ಚುನಾವಣೆಯಲ್ಲಿ ಒಟ್ಟು 650 ಸೀಟುಗಳ ಪೈಕಿ ಲೇಬರ್ ಪಕ್ಷವು 410 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಚುನಾವಣಾ ಫಲಿತಾಂಶ ಬಂದ ಮರುದಿನ ಅಂದರೆ ಜುಲೈ 5 ರಂದು ಅಧಿಕಾರ ಸ್ವೀಕರಿಸಿದ್ದರು.
