ಮುಂಬೈ: ಐಪಿಎಲ್ (IPL) ಋತುವಿನಲ್ಲಿ ತನ್ನ ಬಿರುಗಾಳಿ ಬ್ಯಾಟಿಂಗ್ ಮೂಲಕ ಇಡೀ ವಿಶ್ವ ಕ್ರಿಕೆಟ್ ಗಮನ ಸೆಳೆದ ಯುವ ಆಟಗಾರ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ(Vaibhav Sooryavanshi) ಅವರ ಅದೃಷ್ಟದ ಬಾಗಿಲು ತೆರೆದಿದೆ. ಮೈದಾನದಲ್ಲಿ ರನ್ ಮಳೆ ಹರಿಸಿದ್ದ ಈ ಯುವ ಹೀರೋ ಹಿಂದೆ ಈಗ ದೇಶದ ದೈತ್ಯ ಜಾಹೀರಾತು ಕಂಪನಿಗಳು ದುಂಬಾಲು ಬಿದ್ದಿವೆ. ಸೂರ್ಯವಂಶಿ ಅವರ ಪ್ರದರ್ಶನದಿಂದಾಗಿ ಕಾರ್ಪೊರೇಟ್ ಜಗತ್ತಿನಲ್ಲಿ ಅವರ ಬ್ರಾಂಡ್ ಮೌಲ್ಯ ರಾಕೆಟ್ ವೇಗದಲ್ಲಿ ಹೆಚ್ಚಳವಾಗಿದೆ.
ಸ್ಪೋರ್ಟ್ಸ್ ಡ್ರಿಂಕ್ಸ್ (ಕ್ರೀಡಾ ಪಾನೀಯಗಳು), ಪೌಷ್ಠಿಕಾಂಶ ಉತ್ಪನ್ನಗಳು ಹಾಗೂ ಪ್ರಮುಖ ಫೂಟ್‌ವೇರ್ ಕಂಪನಿಗಳು ವೈಭವ್ ಅವರನ್ನು ತಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದು, ಈಗಾಗಲೇ ತೆರೆಮರೆಯಲ್ಲಿ ಮಾತುಕತೆಗಳು ಜರಗುತ್ತಿವೆ.
ಕೇವಲ 15 ವರ್ಷದ ಯುವ ಆಟಗಾರನಾಗಿರುವ ವೈಭವ್ ಸೂರ್ಯವಂಶಿಯವರಿಗೆ ಸುದೀರ್ಘ ವೃತ್ತಿಜೀವನವಿದೆ. ಈ ಕಾರಣಕ್ಕಾಗಿಯೇ ಜಾಹೀರಾತು ಮಾರುಕಟ್ಟೆಯಲ್ಲಿ ಅವರಿಗೆ ಸದ್ಯ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಕಂಪನಿಗಳು ಸದ್ಯಕ್ಕೆ ದೊಡ್ಡ ಮಟ್ಟದ ದೀರ್ಘಾವಧಿ ಒಪ್ಪಂದಗಳಿಗಿಂತಲೂ, ಎರಡರಿಂದ ಮೂರು ವರ್ಷಗಳ ಅವಧಿಯ ಒಪ್ಪಂದ ಮಾಡಿಕೊಳ್ಳಲು ಎದುರು ನೋಡುತ್ತಿವೆ. ಮುಂದಿನ ದಿನಗಳಲ್ಲಿ ಅವರ ಪ್ರದರ್ಶನದ ಸ್ಥಿರತೆ ಮತ್ತು ಜನಪ್ರಿಯತೆಯನ್ನು ನೋಡಿಕೊಂಡು ಈ ಒಪ್ಪಂದವನ್ನು ಮುಂದುವರೆಸಲು ಕಂಪನಿಗಳು ಆಸಕ್ತಿ ತೋರಿಸಿವೆ. ಇದನ್ನೂ ಓದಿ: 1.10 ಕೋಟಿ ಹೂಡಿಕೆಗೆ ಸಿಕ್ಕಿದ್ದು 34.97 ಕೋಟಿ – 3.10 ಕೋಟಿ ಬಾಚಿಕೊಂಡ ಸೂರ್ಯವಂಶಿ!

ವೈಭವ್ ಸೂರ್ಯವಂಶಿಗೆ ಇನ್ನು ಹದಿನೈದರ ಹರೆಯವಾಗಿದ್ದು ಕಾಯ್ದೆಯ ಪ್ರಕಾರ ಅವರು ಅಪ್ರಾಪ್ತರಾಗಿದ್ದಾರೆ. ಹೀಗಾಗಿ, ಜಾಹೀರಾತು ಕಂಪನಿಗಳೊಂದಿಗೆ ಅವರ ಕುಟುಂಬದವರು ಒಪ್ಪಂದ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ವಿಶೇಷವೆಂದರೆ, ಈ ಎಲ್ಲಾ ವ್ಯವಹಾರಿಕ ಒಪ್ಪಂದಗಳ ಮೇಲ್ವಿಚಾರಣೆಯಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ವೈಭವ್ ಕುಟುಂಬಕ್ಕೆ ಸಂಪೂರ್ಣ ಕಾನೂನಾತ್ಮಕ ನೆರವು ಹಾಗೂ ಮಾರ್ಗದರ್ಶನ ನೀಡುತ್ತಿದೆ.
ವೈಭವ್ ಸೂರ್ಯವಂಶಿ ಈಗಾಗಲೇ ಕಾಂಪ್ಲೇನ್, ರೆಡ್ ಬುಲ್ ಹಾಗೂ ಬಿಹಾರ ಸರ್ಕಾರದ ಆರೋಗ್ಯ ಜಾಗೃತಿಯ ಕುರಿತಾದ ಪ್ರಮುಖ ಜಾಹೀರಾತುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ ಪ್ರತಿ ಜಾಹೀರಾತಿಗೆ ಇವರು 1 ಕೋಟಿ ರೂ. ವಿಧಿಸುತ್ತಿದ್ದರು. ಜನಪ್ರಿಯತೆ ಹೆಚ್ಚುತ್ತಿದ್ದಂತೆ ಅದು 1.5 ಕೋಟಿ ರೂ.ಗೆ ಏರಿಕೆಯಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಬಳಿಕ ಅವರ ಬ್ರಾಂಡ್ ಮೌಲ್ಯ ಬರೋಬ್ಬರಿ 2 ಕೋಟಿ ರೂ.ಗೆ ತಲುಪಿದೆ! ಈ ಮೂಲಕ ಅವರ ಜಾಹೀರಾತು ಮೌಲ್ಯದಲ್ಲಿ ದಾಖಲೆಯ ಏರಿಕೆಯಾಗಿದೆ. ಇದನ್ನೂ ಓದಿ: 15 ವರ್ಷಕ್ಕೆ 5 ಪ್ರಶಸ್ತಿ – 45 ಲಕ್ಷ ಕ್ಯಾಶ್ ಜೊತೆ ಸೂರ್ಯವಂಶಿಗೆ ಸಿಕ್ತು ಸಿಯೆರಾ ಕಾರು!
ಮೈದಾನದ ಒಳಗೆ ರನ್‌ಗಳ ದಾಖಲೆ ಬರೆಯುತ್ತಿರುವ ವೈಭವ್ ಸೂರ್ಯವಂಶಿ, ಮೈದಾನದ ಹೊರಗೂ ಕೋಟಿ ಕೋಟಿ ಬ್ರಾಂಡ್ ಡೀಲ್‌ಗಳ ಮೂಲಕ ಸದ್ಯ ಭಾರತೀಯ ಕ್ರೀಡಾಲೋಕದ ಹೊಸ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಈ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. 16 ಪಂದ್ಯಗಳಲ್ಲಿ 237.37ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 776 ರನ್ ಕಲೆಹಾಕಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಕೇವಲ 15ನೇ ವಯಸ್ಸಿನಲ್ಲಿ 776 ರನ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ದಾಖಲೆ ಬರೆದ ಸೂರ್ಯವಂಶಿ ಪವರ್-ಪ್ಲೇ ಓವರ್‌ಗಳಲ್ಲೇ ಬರೋಬ್ಬರಿ 500ಕ್ಕೂ ಹೆಚ್ಚು ರನ್ ಚಚ್ಚಿದ ವಿಶ್ವದ ಮೊದಲ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ.
