Bengaluru CityDistrictsKarnatakaLatestLeading NewsMain Post

ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ : ಬಿಜೆಪಿ ವ್ಯಂಗ್ಯ

Advertisements

ಬೆಂಗಳೂರು: ಇದು ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ ಅಷ್ಟೇ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆ ಅವರ ಅಭಿಮಾನಿಗಳು, ಬೆಂಬಲಿಗರು ದಾವಣಗೆರೆಯಲ್ಲಿ ಬೃಹತ್ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ದೆಹಲಿಯಲ್ಲಿ ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಕಾಂಗ್ರೆಸ್ ನಾಯಕರು ಆಹ್ವಾನಿಸಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಕೂಡ ಒಪ್ಪಿಗೆ ಸೂಚಿಸಿರುವುದಾಗಿ ನಾಯಕರು ತಿಳಿಸಿದ್ದಾರೆ. ಅಲ್ಲದೇ ಆಗಸ್ಟ್ 3ರಂದು ಸಿದ್ದರಾಮೋತ್ಸವ ಕಾರ್ಯಕ್ರಮವಿದೆ.

ಈ ನಡುವೆ ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಮುಖ್ಯಮಂತ್ರಿ ಪದವಿಯ ಆಸೆಗಾಗಿ ಸಿದ್ದರಾಮಯ್ಯ ತಮ್ಮ ಹಳೆಯ ಅಹಿಂದ ಕಾರ್ಡ್ ಬಳಸುತ್ತಿದ್ದಾರೆ. ಅಹಿಂದ ಕಾರ್ಡ್ ಎಕ್ಸ್‍ಪೈರ್ ಆಗಿದೆ. ಕಳೆದ ಬಾರಿ ಇದೇ ಕಾರ್ಡ್ ತೋರಿಸಿ ಮೋಸ ಮಾಡಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಇದು ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ ಅಷ್ಟೇ ಎಂದು ಟೀಕಿಸಿದೆ. ಇದನ್ನೂ ಓದಿ: 130 ಸ್ಥಾನ ಗೆದ್ದು ಕಾಂಗ್ರೆಸ್ ಸರ್ಕಾರ ರಚಿಸೋದು ಗ್ಯಾರಂಟಿ: ಸಿದ್ದರಾಮಯ್ಯ ವಿಶ್ವಾಸ

ನಕಲಿ ಗಾಂಧಿ ಕುಟುಂಬಸ್ಥರು ಪ್ರತಿಬಾರಿಯೂ ರಾಜ್ಯ ಕಾಂಗ್ರೆಸ್ ನಾಯಕರಿಗೆ ಒಂದಾಗಿರಬೇಕೆಂದು ಸೂಚನೆ ನೀಡುತ್ತಾರೆ. ದೆಹಲಿಯಲ್ಲಿ ಹೂಂಗುಟ್ಟಿ ಬರುವ ಕಾಂಗ್ರೆಸ್ಸಿಗರು ಬೆಂಗಳೂರಿಗೆ ಬಂದ ಕೂಡಲೇ ಒಬ್ಬರ ವಿರುದ್ಧ ಇನ್ನೊಬ್ಬರು ಕತ್ತಿ ಮಸೆಯುತ್ತಾರೆ. ತಾಳಮೇಳ ಇಲ್ಲದ ಕೈ ನಾಯಕರಿಂದಾಗಿಯೇ ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಕಾಂಗ್ರೆಸ್ ನಾಯಕರ ಕಾಲೆಳೆದಿದೆ.

ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲೆತ್ತಲು ಸಿದ್ದರಾಮೊತ್ಸವ ಮೂಲಕ ವೇದಿಕೆ ಸಜ್ಜುಗೊಳಿಸುತ್ತಿರುವ ಸಿದ್ದರಾಮಯ್ಯ ಬಣದ ನಾಯಕರು ಒಂದೆಡೆಯಾದರೆ, ಇದೇ ಸಿದ್ದರಾಮಯ್ಯರನ್ನು ಕೆಡವಲು ಖೆಡ್ಡಾ ತೋಡುತ್ತಿರುವ ಡಿ.ಕೆ. ಶಿವಕುಮಾರ್ ಬಣದ ನಾಯಕರು ಮತ್ತೊಂದೆಡೆ. ಈ 2 ಬಣಗಳ ನಡುವೆ ದೆಹಲಿಯ ನಕಲಿ ಗಾಂಧಿಗಳ ಬಣ ಮೂಕ ಪ್ರೇಕ್ಷಕರಷ್ಟೇ ಎಂದು ಟೀಕಿಸಿದೆ.

ಕಾಂಗ್ರೆಸ್ಸಿಗರು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುತ್ತಿದ್ದಾರೆ. ಮತವೇ ಇಲ್ಲದವರು ಬಹುಮತ ಗಳಿಸಲು ಹೇಗೆ ಸಾಧ್ಯ? 2023 ರಲ್ಲಿ ಕಾಂಗ್ರೆಸ್ ಸೋಲು ಖಚಿತ. ಟವಲ್ ಈಗಲೇ ಹಾಕಬೇಡಿ, ನಾಳೆಯ ದಿನ ಮುಖಭಂಗವಾದಾಗ ಒರೆಸಿಕೊಳ್ಳಲು ತುಂಡು ಬಟ್ಟೆಯೂ ಲಭಿಸದು ವ್ಯಂಗ್ಯವಾಡಿದೆ.  ಇದನ್ನೂ ಓದಿ: ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧಿಸಲಾಗುತ್ತಿದೆ – ಆರಿಫ್ ಖಾನ್ ಕಿಡಿ

2013ರ ಸೋಲನ್ನು ಪರಮೇಶ್ವರ್ ಮರೆತಿಲ್ಲ ಎನ್ನುವುದಕ್ಕೆ ಈ ವೀಡಿಯೋ ಸಾಕ್ಷಿ. ಸಿದ್ದರಾಮಯ್ಯ ಅವರೇ ನೀವು ಯಾರನ್ನೂ ಓವರ್ ಟೇಕ್ ಮಾಡಿದರೂ ಕಾಂಗ್ರೆಸ್ ಒಳಜಗಳ ನಿಮ್ಮನ್ನು ಓವರ್ ಟೇಕ್ ಮಾಡದೇ ಬಿಡದು. 2018 ರಲ್ಲಿ ಅನುಭವಿಸಿದ್ದೀರಿ, 2023 ರಲ್ಲಿ ಡಿಕೆಶಿ, ಖರ್ಗೆ, ಪರಮೇಶ್ವರ್ ಸೇರಿಕೊಂಡು ನಿಮ್ಮನ್ನು ಓವರ್ ಟೇಕ್ ಮಾಡಲಿದ್ದಾರೆ ಎಂದಿದೆ.

ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು ಒಟ್ಟಾಗಿ ಚುನಾವಣೆ ಎದುರಿಸುವುದು ಎಂದರೆ ಕಪ್ಪೆಯನ್ನು ಹಿಡಿದು ತಕ್ಕಡಿಯಲ್ಲಿ ತೂಕ ಮಾಡಿದಂತೆ, ಇವರು ಒಟ್ಟಾಗುವುದಿಲ್ಲ, ಹೈಕಮಾಂಡ್ ಒಗ್ಗಟ್ಟಿನ ಜಪ ಬಿಡುವುದಿಲ್ಲ. ಕಾಂಗ್ರೆಸ್ ವರಿಷ್ಠರೀಗ ನೀರಲ್ಲಿ ಮುಳುಗಿ ಬಂದ ಬೆಕ್ಕಿನಂತಾಗಿದ್ದಾರೆ ಎಂದು ಹೇಳಿದೆ.

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಸಮಾವೇಶ ಆಯೋಜಿಸಿದ್ದಾರೆ ಎಂದರೆ ಬಂಡಾಯದ ಬಾವುಟ ಹಾರಿಸಿದ್ದಾರೆಂದೇ ಅರ್ಥ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೂ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಸಮಾವೇಶ ನಡೆಸಿ ವರಿಷ್ಠರಿಗೆ ಭರತನಾಟ್ಯ ಮಾಡಿಸಿದ್ದರು. ಸಿದ್ದರಾಮಯ್ಯನವರೇ, ಇದೆಲ್ಲವೂ ಸ್ವಾರ್ಥಕ್ಕಾಗಿ ಅಲ್ವೇ ಎಂದು ಪ್ರಶ್ನಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ನಿಮಗಿದು ಎಚ್ಚರಿಕೆ. ಸಿದ್ದರಾಮೋತ್ಸವದ ಬಳಿಕ ನಿಮ್ಮ ಪರಿಸ್ಥಿತಿ ಇದೇ ರೀತಿ ಆಗಲಿದೆ ಎಂದು ತಿಳಿಸಿದೆ.

Live Tv

Leave a Reply

Your email address will not be published.

Back to top button