ಮುಂಬೈ: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಮತ್ತೊಂದು ಆರ್ಥಿಕ ಹೊರೆ ಬಿದ್ದಿದೆ. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಕುಚಿತ ನೈಸರ್ಗಿಕ ಅನಿಲ (CNG) ಬೆಲೆಯನ್ನು ಪ್ರತಿ ಕೆಜಿಗೆ 1.50 ರೂ. ರಷ್ಟು ಹೆಚ್ಚಿಸಲಾಗಿದೆ.
ಮಹಾನಗರ ಗ್ಯಾಸ್ ಲಿಮಿಟೆಡ್ (MGL) ಪರಿಷ್ಕೃತ ದರಗಳನ್ನು ನವೆಂಬರ್14 ರ ಜಾರಿಗೆ ತಂದಿದ್ದು, ಇಂದಿನಿಂದ ಮುಂಬೈನಲ್ಲಿ ಸಿಎನ್ಜಿ ದರ ಪ್ರತಿ ಕೆಜಿಗೆ 91.50 ರೂ.ಗೆ ತಲುಪಿದೆ.
ಕಳೆದ ಎರಡೂವರೆ ತಿಂಗಳಲ್ಲಿ ಸಿಎನ್ಜಿ ಬೆಲೆ ಪ್ರತಿ ಕೆಜಿಗೆ ಒಟ್ಟು 5.50 ರೂ.ರಷ್ಟು ಏರಿಕೆಯಾದಂತಾಗಿದೆ. ಈ ವರ್ಷ (2026) ಮುಂಬೈನಲ್ಲಿ ಸಿಎನ್ಜಿ ದರ ಏರಿಕೆಯಾಗುತ್ತಿರುವುದು ಇದು ಎಂಟನೇ ಬಾರಿಯಾಗಿದೆ. ಜನವರಿಯಲ್ಲಿ 80.50 ರೂ. ಇದ್ದ ದರವು ಈಗ 91.50 ರೂ.ಗೆ ತಲುಪಿದ್ದು, ವರ್ಷದ ಆರಂಭದಿಂದ ಇಲ್ಲಿಯವರೆಗೆ ಸುಮಾರು ಶೇ. 14 ರಷ್ಟು (11 ರೂ.) ಹೆಚ್ಚಳವಾಗಿದೆ.
ಬೆಲೆ ಏರಿಕೆಗೆ ಕಾರಣವೇನು?
ದೇಶೀಯ ನೈಸರ್ಗಿಕ ಅನಿಲದ ಪೂರೈಕೆಯಲ್ಲಿನ ಕೊರತೆ ಮತ್ತು ಅನಿಲ ಖರೀದಿ ವೆಚ್ಚದಲ್ಲಿನ ಹೆಚ್ಚಳವೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ಎಂಜಿಎಲ್ ಸ್ಪಷ್ಟಪಡಿಸಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲದ ಬೆಲೆ ಹೆಚ್ಚಾಗಿರುವುದು ಕೂಡ ದರ ಪರಿಷ್ಕರಣೆಗೆ ಕಾರಣವಾಗಿದೆ.ಇದನ್ನೂ ಓದಿ: ಬಲೀಂದ್ರನನ್ನು ಬೀಳ್ಕೊಡಲು ಆರದ ದೀಪ ಹೊತ್ತಿಸುವ ಕರಿ ಹಾಲಕ್ಕಿ ಜನಾಂಗ
ಈ ದರ ಏರಿಕೆಯು ಮುಂಬೈ ಮಹಾನಗರ ಪ್ರದೇಶದಲ್ಲಿ (MMR) ಸಂಚರಿಸುವ ಸುಮಾರು 12.93 ಲಕ್ಷ ಸಿಎನ್ಜಿ ವಾಹನಗಳ ಮೇಲೆ ನೇರ ಪರಿಣಾಮ ಬೀರಲಿದೆ. ಆಟೋರಿಕ್ಷಾ, ಟ್ಯಾಕ್ಸಿ ಚಾಲಕರು ಹಾಗೂ ಖಾಸಗಿ ವಾಹನ ಮಾಲೀಕರ ದೈನಂದಿನ ನಿರ್ವಹಣಾ ವೆಚ್ಚ ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ಆಟೋ ಮತ್ತು ಟ್ಯಾಕ್ಸಿ ಪ್ರಯಾಣ ದರಗಳೂ ಏರಿಕೆಯಾಗುವ ಸಾಧ್ಯತೆಯಿದೆ.ಇದನ್ನೂ ಓದಿ: ಕೆಎಎಸ್ ಪರೀಕ್ಷೆಗೆ ಬಿಗಿ ಭದ್ರತೆ; ತಾಳಿ, ಕಾಲುಂಗುರಕ್ಕೆ ಅವಕಾಶ – ಫುಲ್ ಶರ್ಟ್ ಹಾಕಿದ ಅಭ್ಯರ್ಥಿಗಳಿಗೆ ನೋ ಎಂಟ್ರಿ
