– ದೀಪ ಹಿಡಿದು 9 ಊರುಗಳನ್ನ ಸುತ್ತಿ ಮನೆ ಮನೆಯಲ್ಲಿ ಜನಪದ ನೃತ್ಯ ಮಾಡುವ ಕರಿ ಗೌಡ ಜನಾಂಗ
ಕಾರವಾರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಹಲವು ಪ್ರಚಲಿತ ಸಂಪ್ರದಾಯಗಳಿವೆ. ಈ ಪ್ರಚಲಿತ ಸಂಪ್ರದಾಯದಲ್ಲಿ ದೀಪಾವಳಿ ನಂತರ ಕರಿ ವಕ್ಕಲಿಗರಲ್ಲಿ ಬಲೀಂದ್ರನನ್ನು ಆರದ ದೀಪದ ಮೂಲಕ ಬಿಂಗಿ ಕುಣಿತದಿಂದ ಬೀಳ್ಕೊಡಲಾಗುತ್ತದೆ.
ಶಿರಸಿ ತಾಲೂಕಿನ ಗೆಜ್ಜೆಮನೆ ಕರೂರಿನಲ್ಲಿ ದೀಪಾವಳಿ ಪ್ರಾರಂಭವಾಗುತ್ತಿದ್ದಂತೆ ಕಾಡಿನ ವಿವಿಧ ಭಾಗದಲ್ಲಿ ವಾಸ ಮಾಡುವ ಕರಿಗೌಡ ಜನಾಂಗದ ಯುವಕರು ಗ್ರಾಮದ ಹಿರಿಯರ ಮನೆಯಲ್ಲಿ ಸೇರುತ್ತಾರೆ. ಹೀಗೆ, ಸೇರುವವರು ಮನೆಯ ಮುಂದಿರುವ ತುಳಸಿ ಕಟ್ಟೆಯ ಮುಂದೆ ದೀಪ ಹಚ್ಚಿ ತಮ್ಮ ಬಳಿ ಇರುವ ಸನ್ನೆಕೋಲು ವಾದ್ಯ, ಕೋಲಾಟಕ್ಕೆ ಬಳಸುವ ಕೋಲುಗಳು, ತಾಳವನ್ನು ಒಟ್ಟಾಗಿ ಇಟ್ಟು ಪೂಜೆ ಗೈಯುತ್ತಾರೆ.
ಪೂಜೆ ನಡೆಸಿದ ನಂತರ ಗ್ರಾಮದ ಹಿರಿಯರ ಅನುಮತಿ ಪಡೆದು ತಾವು ಹಚ್ಚಿದ ಹಣತೆಯನ್ನು ಆರದಂತೆ ಜೋಪಾನ ಮಾಡಿ ಬಿಂಗಿ ಕುಣಿತಕ್ಕೆ ಸಿದ್ಧರಾಗುತ್ತಾರೆ. ಮೊದಲು ತಮ್ಮೂರಿನ ಕರಿ ಗೌಡರ ಮನೆಗೆ ದೀಪ ಹಿಡಿದು ತೆರಳುವ ಬಿಂಗಿ ಕುಣಿತದ ಗುಂಪು ಮನೆಯ ಮುಂದೆ ನಿಂತು ಸನ್ನೆಕೋಲಿನ ಸದ್ದು ಮಾಡುತ್ತಾರೆ. ನಂತರ ಜನಪದ ಹಾಡುಗಳನ್ನ ಹಾಡುವ ಮೂಲಕ ಮನೆಯವರನ್ನು ಕರೆಯುತ್ತಾರೆ. ಇಲ್ಲಿ ಕೋಲಾಟ, ಜನಪದ ಹಾಡುಗಳು, ಬಲೀಂದ್ರ ಹಾಡುಗಳನ್ನ ಹಾಡುತ್ತಾರೆ. ಮನೆಯವರು ಸಹ ಮನೆಯ ಮುಂದೆ ಚಪ್ಪರ ಹಾಕಿ, ರಂಗೋಲಿ ಬೀರಿ ಆರದ ದೀವಿಗೆಯನ್ನು ಬರಮಾಡಿಕೊಂಡು ಮನೆಗೆ ಬಂದ ಬಿಂಗಿ ತಂಡಕ್ಕೆ ವಿಶೇಷ ಆತಿಥ್ಯ ನೀಡಿ ಗೌರವ ನೀಡುತ್ತಾರೆ.
ಹಲವು ತಲೆಮಾರಿನಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಲ್ಲಿ ಮಕ್ಕಳು, ಪುರುಷರು ತಂಡೋಪ ತಂಡವಾಗಿ ಭಾಗಿಯಾಗುತ್ತಾರೆ. ಕೇವಲ ಕರಿ ಒಕ್ಕಲಿಗರ ಮನೆಗಲ್ಲದೇ ಮೂರು ದಿನದಲ್ಲಿ ಒಂಬತ್ತು ಊರು ಸುತ್ತಿ ಇತರೆ ಜನಾಂಗದ ಪ್ರತಿ ಮನೆಯಲ್ಲೂ ಆರದ ದೀವಿಗೆ ಇಟ್ಟು ದೀಪಾವಳಿಯ ಶುಭ ಕೋರಿ, ಜನಪದ ಹಾಡಿನ ಮೂಲಕ ಮನೆಯವರನ್ನ ಹಾರೈಸುತ್ತಾರೆ. ಜನಪದ ಹಾಡು ಹಾಡುವವರ ಒಂದು ತಂಡವಾದರೇ ವಾದ್ಯ, ತಾಳ ಹಿಡಿದವರ ಒಂದು ತಂಡ ಹಾಗೂ ನೃತ್ಯ ಮಾಡುವವರ ಒಂದು ತಂಡ ಹೀಗೆ ಗುಂಪಾಗಿ ಪ್ರತಿ ಮನೆಗೆ ತೆರಳಿ ಅಕ್ಕಿ, ಎಣ್ಣೆ, ಅಡಿಕೆ, ಕಡುಬು ಗೌರವ ಸ್ವೀಕರಿಸುವ ಕರಿಗೌಡರು ಈ ಆಚರಣೆಯನ್ನು ತಮ್ಮೂರಿನ ಹಾಗೂ ತಮ್ಮ ಜನಾಂಗದ ಒಗ್ಗಟ್ಟು ,ಶಾಂತಿಗಾಗಿ ನಡೆಸಿಕೊಂಡು ಬಂದಿದ್ದಾರೆ.
