ರಾಮನಗರ: ಬಿಡದಿ ಟೌನ್‌ಶಿಪ್ (Bidadi Township) ಯೋಜನೆ ವಿರುದ್ಧ ಜೆಡಿಎಸ್ (JDS Padayatra) ನೇತೃತ್ವದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬೃಹತ್ ಪಾದಯಾತ್ರೆ ನಡೆಯಲಿದೆ.
ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರು, ರೈತರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ಆಯೋಜಿಸಲಾಗಿದೆ. ಇಂದು ಬೆಳಗ್ಗೆ 9 ಗಂಟೆಗೆ ಪಾದಯಾತ್ರೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಪಾದಯಾತ್ರೆ ಅಲ್ಲ, ಅದು ಪ್ರಾಯಶ್ಚಿತ ಯಾತ್ರೆ : ಬಾಲಕೃಷ್ಣ ತಿರುಗೇಟು
ಭೈರಮಂಗಲ ಗ್ರಾಮದಿಂದ ಆರಂಭವಾಗುವ ಪಾದಯಾತ್ರೆ ಮೊದಲ ದಿನ 9 ಕಿ.ಮೀ ನಡೆಯಲಿದೆ. ತಿಮ್ಮೇಗೌಡನದೊಡ್ಡಿ, ವೃಷಭಾವತಿಪುರ, ಅಬ್ಬನಕುಪ್ಪೆ, ಜೋಗರದೊಡ್ಡಿ (ಮಧ್ಯಾಹ್ನದ ಊಟ ಹಾಗೂ ವಿಶ್ರಾಂತಿ), ಮೇಡನಹಳ್ಳಿ, ಭೈರಮಂಗಲ ಕ್ರಾಸ್ (ರಂಗೇಗೌಡನದೊಡ್ಡಿ), ಬಿಜಿಎಸ್ ವೃತ್ತದ ಮೂಲಕ ಬಿಡದಿಯಲ್ಲಿ ಪಾದಯಾತ್ರೆ ಅಂತ್ಯಗೊಳ್ಳಲಿದೆ. ಬಳಿಕ ಹೋರಾಟಗಾರರು ಬಿಡದಿಯ ಮಂಜುನಾಥ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಜೆಡಿಎಸ್‌ನ ಹಾಲಿ, ಮಾಜಿ ಶಾಸಕರು, ಎಂಎಲ್ಸಿಗಳು ಸೇರಿ ಸಾವಿರಾರು ಕಾರ್ಯಕರ್ತರು ಮತ್ತು ರೈತರು ಪಾದಯಾತ್ರೆಯಲ್ಲಿ ಹೆಜ್ಜೆಹಾಕಲಿದ್ದಾರೆ. ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿ ಬಿಜೆಪಿ ನಾಯಕರು ಕೂಡ ಭಾಗಿಯಾಗಲಿದ್ದಾರೆ. ರೈತರ ಕೃಷಿ ಭೂಮಿಯಲ್ಲಿ ಟೌನ್‌ಶಿಪ್ ಯೋಜನೆ ಬೇಡ ಎಂಬ ಆಗ್ರಹ ಕೇಳಿಬಂದಿದೆ. ಸಂಪೂರ್ಣ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಈ ಬೃಹತ್ ಪಾದಯಾತ್ರೆ ನಡೆಸಲಾಗುತ್ತಿದೆ. ಇದನ್ನೂ ಓದಿ: ತಾರಕಕ್ಕೇರಿದ ಬಿಡದಿ ಭೂಯುದ್ಧ – ಬಿಜೆಪಿ ಬಿಟ್ಟು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ




