– ಬಾಲಕೃಷ್ಣ ವಿರುದ್ಧ ಎ ಮಂಜು ಕೆಂಡ
ಬೆಂಗಳೂರು: ಬಿಡದಿ ಟೌನ್‌ಶಿಪ್ (Bidadi Township) ಡಿಬೇಟ್ ಬಗ್ಗೆ ಜೂನ್ 26 ಹಾಗೂ ಜೂನ್ 27 ಎರಡು ದಿನವೂ ಡಿಕೆ-ಹೆಚ್ಡಿಕೆ ಮಧ್ಯೆ ಏಟು-ಎದುರೇಟಿನ ಮೆಗಾ ಶೋ ನಡೆಯುವ ಸಾಧ್ಯತೆ ಇದೆ. ಕೊಟ್ಟ ಮಾತಿನಂತೆ ಜೂನ್ 26 ಕ್ಕೆ ವಿಧಾನಸೌಧದ 3ನೇ ಮಹಡಿಯಲ್ಲಿ ಕುಮಾರಸ್ವಾಮಿಗಾಗಿ ಕಾಯಲು ಸಿಎಂ ಡಿಕೆಶಿ ಸಿದ್ಧತೆ ನಡೆಸುತ್ತಿದ್ದಾರೆ. ಅದೇ ರೀತಿ, ಜೂನ್ 27 ರಂದು ಭೈರಮಂಗಲ ಗ್ರಾಮದಲ್ಲಿ ಬಹಿರಂಗವಾಗಿ ಸಿಎಂಗಾಗಿ ಕುಮಾರಸ್ವಾಮಿ ಕಾಯುವುದು ಕೂಡ ಫಿಕ್ಸ್ ಎನ್ನಲಾಗುತ್ತಿದೆ.
ಕಾಂಗ್ರೆಸಿಗರ ಆರೋಪಕ್ಕೆ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿ, ಮುಕ್ತ ಚರ್ಚೆಗೆ ಕುಮಾರಣ್ಣ ಸಿದ್ಧರಿದ್ದಾರೆ. ಧೈರ್ಯವಿದ್ದರೆ ರೈತರ ಸಮ್ಮುಖಕ್ಕೆ ಬಂದು ಅವರ ಅನುಮತಿ ಪಡೆಯಲಿ. ಚರ್ಚೆಗೆ ಕುಮಾರಸ್ವಾಮಿ ಒಬ್ಬರೇ ಬರುತ್ತಾರೆ. ದೇವೇಗೌಡರ ಕುಟುಂಬಕ್ಕೆ ಹೆಚ್ಚಾಗಿ ಬೈಯ್ದವರಿಗೆ ಸಚಿವ ಸ್ಥಾನ ಕೊಡೋದಾಗಿ ಹೇಳಿರಬೇಕು. 100 ಎಕರೆ ಬೇನಾಮಿ ಆಸ್ತಿ ಇರೋದನ್ನು ಎಂಬಿ ಪಾಟೀಲ್ ಸಾಬೀತು ಪಡಿಸಬೇಕು. ಇಲ್ಲವಾದಲ್ಲಿ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೂಡ್ತೇವೆ ಅಂತ ನಿಖಿಲ್ ಗುಡುಗಿದ್ದಾರೆ.
ಅನಿತಾ ಕುಮಾರಸ್ವಾಮಿ ಕೂಡ, ನನ್ನ ಹೆಸರಲ್ಲಿರೋದು 32 ಎಕರೆ ಜಮೀನು. ಇಲ್ಲಸಲ್ಲದ ಆರೋಪ ಮಾಡಿದರೆ ಕಾನೂನು ಮೂಲಕ ಉತ್ತರ ಕೊಡ್ತೇವೆ ಅಂತ ಎಕ್ಸ್ನಲ್ಲಿ ವಾರ್ನಿಂಗ್ ಕೊಟ್ಟಿದ್ದಾರೆ.
ಭೈರಮಂಗಲಕ್ಕೆ ಬರಲು ಸಿಎಂಗೆ ಧಮ್ ಇಲ್ಲ. ಈ ಎಲ್ಲಾ ಗೊಂದಲಕ್ಕೆ ಮಾಗಡಿ ಬಾಲಕೃಷ್ಣನೇ ಕಾರಣ ಅಂತ ಮಾಜಿ ಶಾಸಕ ಎ. ಮಂಜುನಾಥ್ ಕೆಂಡಕಾರಿದ್ದಾರೆ. ಈ ಮಧ್ಯೆ, ಎಲ್ಲದಕ್ಕೂ ವಿರೋಧ ಮಾಡಿದರೆ ಹೇಗೆ? ಜಮೀನು ಕಸೀತಿಲ್ಲ. ಒಪ್ಪಿಗೆ ಪಡೆದಿದ್ದೇವೆ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಹೆಚ್‌ಡಿಕೆ ಜೈಲಿಗೆ ಹೋಗ್ತಾರೆ ಅಂತ ಕುಂಬಳಗೋಡು ಫ್ಲೈಓವರ್ ಹಾಗೂ ಅಂಡರ್‌ಪಾಸ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ.
