ಬೆಂಗಳೂರು: ಬಿಡದಿ ಟೌನ್‌ಶಿಪ್ ಜಟಾಪಟಿ ತಾರಕಕ್ಕೇರಿದೆ. ಸಿಎಂ ಡಿಕೆ ಶಿವಕುಮಾರ್‌ಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪಂಥಾಹ್ವಾನ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್ಡಿಕೆ, ದಾಖಲಾತಿ ಸಮೇತ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. 2006ರಲ್ಲಿ ನಾನು ಸಿಎಂ ಆಗಿದ್ದಾಗ 5 ಕಡೆ ಟೌನ್‌ಶಿಪ್ ಯೋಜನೆ ಘೋಷಿಸಿದ್ದು ನಿಜ. ಆದರೆ, ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ 2007ರ ಆಗಸ್ಟ್ 1 ರಂದು ನಾನು ಬಿಡದಿ ಟೌನ್‌ಶಿಪ್ ಮಾಡುವುದಿಲ್ಲ ಎಂದು ಸದನದಲ್ಲೇ ಘೋಷಿಸಿ ಯೋಜನೆ ಕೈಬಿಟ್ಟಿದ್ದೆ ಅಂತ ಸ್ಪಷ್ಟಪಡಿಸಿದರು. ಭೂಮಿ ಕೊಡಲ್ಲ ಅನ್ನೋ ರೈತರನ್ನು ಡಿಸಿ ಕಚೇರಿಗೆ ಕರೆಸಿ ರೌಡಿಗಳ ಕೈಯಲ್ಲಿ ಧಮ್ಕಿ ಹಾಕಿಸ್ತಿದ್ದಾರೆ. ಭೈರಮಂಗಲಕ್ಕೆ ಬನ್ನಿ.. ರೈತರು ಭೂಮಿ ಕೊಡ್ತಾರೋ.. ಇಲ್ವೋ..? ಅಂತ ಸಾರ್ವಜನಿಕವಾಗಿಯೇ ಕೇಳೋಣ ಅಂದಿದ್ದಾರೆ.
ಹೆಚ್‌ಡಿಕೆ ಸವಾಲ್‌ಗೆ ಸಿಎಂ ಪ್ರತಿಕ್ರಿಯಿಸಿ, ನಾನು ಚರ್ಚೆಗೆ ಕರೆದಾಗ ಬರಲಿಲ್ಲ. ಈಗ ಬೇಕಿದ್ದರೆ ವಿಧಾನಸೌಧದಲ್ಲಿ ಮಾತಾಡಿಸಲಿ ಅಂತ ಸಿಎಂ ಪ್ರತಿಕ್ರಿಯಿಸಿದ್ದರು. ಆದರೆ, ಸಂಜೆ ವೇಳೆಗೆ ಕುಮಾರಸ್ವಾಮಿಗೆ ಪತ್ರ ಬರೆದ ಡಿಕೆಶಿ, ಜೂನ್ 26ರ ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ನಿಮ್ಮ ತಂಡದೊAದಿಗೆ ಬರುವಂತೆ ರಣವೀಳ್ಯ ಕೊಟ್ಟಿದ್ದಾರೆ.
ಇದಕ್ಕೆ ಪತ್ರದಲ್ಲೇ ಕೌಂಟರ್ ಕೊಟ್ಟಿರುವ ಹೆಚ್ಡಿಕೆ, ನಿಮ್ಮ ಪತ್ರಕ್ಕೆ ಧನ್ಯವಾದಗಳು. ಬಾಧಿತ ಪ್ರದೇಶದ ರೈತರನ್ನು ವಿಧಾನಸೌಧದಿಂದ ಹೊರಗಿಟ್ಟು ಚರ್ಚೆ ನಡೆಸಿದರೆ ಫಲಪ್ರದವಾಗಲ್ಲ. ಹಾಗಾಗಿ, ಬಿಡದಿ ಅಥವಾ ಭೈರಮಂಗಲ ಗ್ರಾಮದಲ್ಲಿ ನಡೆಸುವುದು ಸಮಂಜಸ. ಜೂನ್ 26ಕ್ಕೆ ಪೂರ್ವನಿಗದಿತ ಕಾರ್ಯಕ್ರಮ ಇರುವ ಕಾರಣ ಜೂನ್ 27ಕ್ಕೆ ಚರ್ಚೆಗೆ ನಿಗದಿ ಮಾಡಿ. ಬಾಧಿತ ಜನರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಚರ್ಚೆ ಆಗಲಿ ಅಂತ ಹೆಚ್‌ಡಿಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಟೌನ್‌ಶಿಪ್‌ಗೆ ಕಾಂಗ್ರೆಸ್ ಬೆಂಬಲಿತ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಯೋಜನೆಯಿಂದ ಸಾವಿರಾರು ರೈತರು ಬೀದಿಗೆ ಬರಲಿದ್ದಾರೆ. ಸರ್ಕಾರ ಪುನರ್ ಪರಿಶೀಲಿಸಬೇಕು. ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು ಅಂತ ಆಗ್ರಹಿಸಿದ್ದಾರೆ. ಈ ಮಧ್ಯೆ, ಟೌನ್‌ಶಿಪ್ ವಿರುದ್ಧ ಬೃಹತ್ ರ‍್ಯಾಲಿ ನಡೆಸಿದ ರೈತ ಸಂಘ, ಶೇ.90ರಷ್ಟು ರೈತರು ಒಪ್ಪಿಗೆ ನೀಡಿದ್ದರೆ ಅನ್ನೋದಕ್ಕೆ ದಾಖಲೆ ತೆಗೆದುಕೊಂಡು ಫ್ರೀಡಂ ಪಾರ್ಕಿಗೆ ಬನ್ನಿ. ಚರ್ಚೆ ನಡೆಸೋಣ ಅಂದಿದೆ.
