ಭೋಪಾಲ್: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ದಶಕಗಳಿಂದ ವಿವಾದದ ಕೇಂದ್ರವಾಗಿದ್ದ ಭೋಜಶಾಲಾ-ಕಮಲ್ ಮೌಲಾ ಮಸೀದಿ (Bhojshala Kamal Maula Mosque) ಸಂಕೀರ್ಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ (Madhya Pradesh) ಐತಿಹಾಸಿಕ ತೀರ್ಪು ನೀಡಿದ್ದು, ಭೋಜಶಾಲಾ ಆವರಣವನ್ನು ದೇವಸ್ಥಾನ ಎಂದು ಘೋಷಿಸಿದೆ.
ಹೈಕೋರ್ಟ್‌ನ ಇಂದೋರ್ ಪೀಠವು ಈ ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಸಂಪೂರ್ಣ ಹಕ್ಕಿದೆ ಎಂದು ಎತ್ತಿಹಿಡಿದಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಆಧರಿಸಿ ನ್ಯಾಯಾಲಯವು ಈ ನಿರ್ಧಾರಕ್ಕೆ ಬಂದಿದೆ. ಸಮೀಕ್ಷೆಯ ವರದಿಯು ಈ ಸ್ಥಳವು ಮೂಲತಃ ದೇವಸ್ಥಾನವಾಗಿತ್ತು ಎಂಬುದನ್ನು ಸಾಕ್ಷ್ಯಾಧಾರಗಳೊಂದಿಗೆ ದೃಢಪಡಿಸಿತ್ತು. ಇದನ್ನೂ ಓದಿ: ವಿವಾದಿತ ಭೋಜಶಾಲಾ ಮಸೀದಿಯಲ್ಲಿ ಮಂದಿರದ ಕುರುಹು – ಪುರಾತತ್ವ ಇಲಾಖೆಯ 2,000 ಪುಟಗಳ ವರದಿಯಲ್ಲಿ ಏನಿದೆ?
ಪ್ರಸ್ತುತ ಇರುವ ಮಸೀದಿ ರಚನೆಯನ್ನು ಹಳೆಯ ದೇವಸ್ಥಾನದ ಅವಶೇಷಗಳು ಮತ್ತು ಸ್ತಂಭಗಳನ್ನು ಬಳಸಿ ಮರುನಿರ್ಮಾಣ ಮಾಡಲಾಗಿದೆ. ಸಮೀಕ್ಷೆಯಲ್ಲಿ ಪತ್ತೆಯಾದ ಪರಮಾರ ರಾಜರ ಕಾಲದ ಸಂಸ್ಕೃತ ಮತ್ತು ಪ್ರಾಕೃತ ಶಾಸನಗಳು, ಕೆತ್ತನೆಗಳು, ಹಾಗೂ ಬ್ರಹ್ಮ, ಗಣೇಶ ಸೇರಿದಂತೆ 94ಕ್ಕೂ ಹೆಚ್ಚು ಹಿಂದೂ ದೇವತೆಗಳ ಭಿನ್ನವಾಗಿರುವ ವಿಗ್ರಹಗಳು ಈ ಸ್ಥಳವು ದೇವಸ್ಥಾನವಾಗಿತ್ತು ಎಂಬುದನ್ನು ದೃಢಪಡಿಸುತ್ತದೆ ಎಂದು ತಿಳಿಸಿದೆ.

ಪ್ರಸ್ತುತ ಇರುವ ಕಮಲ್ ಮೌಲಾ ಮಸೀದಿಯನ್ನು ಮುಸ್ಲಿಂ ಆಡಳಿತಗಾರರ ಕಾಲದಲ್ಲಿ ಪೂರ್ವ ಅಸ್ತಿತ್ವದಲ್ಲಿದ್ದ ಹಿಂದೂ ದೇವಸ್ಥಾನದ ಸ್ತಂಭಗಳು, ಕಲ್ಲುಗಳು ಮತ್ತು ಅವಶೇಷಗಳನ್ನು ಬಳಸಿ ನಿರ್ಮಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ
ASI ಸಮೀಕ್ಷೆಯು ಏಕಪಕ್ಷೀಯವಾಗಿದೆ ಮತ್ತು ಮುಸ್ಲಿಂ ಅರ್ಜಿದಾರರ ಹಕ್ಕನ್ನು ಕಡೆಗಣಿಸಲಾಗಿದೆ ಎಂಬ ಕಮಲ್ ಮೌಲಾ ಮಸೀದಿ ಸಮಿತಿಯ ವಾದಗಳನ್ನು ಹೈಕೋರ್ಟ್ ತಿರಸ್ಕರಿಸಿದೆ.
ಧಾರ್ಮಿಕ ಸ್ಥಳಗಳ ಸಂರಕ್ಷಣೆ ಮತ್ತು ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಭೋಜಶಾಲಾ ಸಂಕೀರ್ಣವು 11ನೇ ಶತಮಾನದಲ್ಲಿ ಸರಸ್ವತಿ ದೇವಿಯ ದೇವಾಲಯವಾಗಿತ್ತು ಎಂದು ಹಿಂದೂಗಳು ಹೇಳಿದರೆ ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಿದ್ದರು. ಕಳೆದ 21 ವರ್ಷಗಳಿಂದ ಭೋಜಶಾಲೆಯಲ್ಲಿ ಪ್ರತಿ ಮಂಗಳವಾರ ಹಿಂದೂಗಳು ಪೂಜೆ ಸಲ್ಲಿಸಿದರೆ, ಶುಕ್ರವಾರದಂದು ಮುಸ್ಲಿಮರು ನಮಾಜ್ ಆಚರಿಸುತ್ತಿದ್ದರು. ಈ ಸಂಬಂಧ ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಸಂಘಟನೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಿತ್ತು. ಅದರಂತೆ ಹೈಕೋರ್ಟ್ ಎಎಸ್‌ಐಗೆ ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು. ಸಮೀಕ್ಷೆಯ ವರದಿ ಸಲ್ಲಿಕೆಯಾದ ಬಳಿಕ ಕೋರ್ಟ್ ಈ ಪ್ರಕರಣದ ವಿಚಾರಣೆ ಆರಂಭಿಸಿತ್ತು.
ಮಾಳವ ಪ್ರದೇಶವನ್ನು ಆಳುತ್ತಿದ್ದ ರಾಜ ಭೋಜನು 1034 ರಲ್ಲಿ ಇಲ್ಲಿ ಸಂಸ್ಕೃತ ಅಧ್ಯಯನ ಕೇಂದ್ರ ಮತ್ತು ಸರಸ್ವತಿ ದೇವಸ್ಥಾನವನ್ನು ನಿರ್ಮಿಸಿದ್ದ. ಆದರೆ ನಂತರದ ಮುಸ್ಲಿಂ ರಾಜರು ಇದನ್ನು ಮಸೀದಿಯಾಗಿ ಪರಿವರ್ತಿಸಿದ್ದರು ಎಂದು ಹಿಂದೂಗಳು ವಾದಿಸಿದ್ದರು.

