– ನಂದಿಬೆಟ್ಟಕ್ಕೆ ಹಂತಕನನ್ನ ಕರೆದೊಯ್ದು ಸ್ಥಳ ಮಹಜರು
– ತಮಿಳುನಾಡಿನ ಸೇಲಂಗೆ ವಿಶೇಷ ತಂಡ
ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ (Bengaluru) ಏಳು ಜನರ ನರಮೇಧ ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ ನಂದಿಬೆಟ್ಟದ ರಂಗಪ್ಪ ಸರ್ಕಲ್ನ ರಸ್ತೆಯ ಎಡ ಭಾಗದ ಕಾಡಿನಲ್ಲಿ ಶವ ಪತ್ತೆಯಾಗಿದೆ.
ನಂದಿಬೆಟ್ಟದ ರಂಗಪ್ಪ ಸರ್ಕಲ್ ರಸ್ತೆಯ ಎಡಭಾಗದಲ್ಲಿರುವ ಕಾಡಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನೂ ಆರೋಪಿಯನ್ನ ನಂದಿಬೆಟ್ಟಕ್ಕೆ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಬಳಿಕ ಮೃತದೇಹವನ್ನ ಅಂಬುಲೆನ್ಸ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇನ್ನೂ 6 ಮೃತದೇಹಗಳಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಇಂದುಶೇಖರ್ ನೀಡಿರುವ ಹೇಳಿಕೆಯ ಆಧಾರದ ಮೇಲೆ ವಿವಿಧ ಪ್ರದೇಶಗಳಲ್ಲಿ ಹುಡುಕಾಟ ಮುಂದುವರಿದಿದೆ. ನಂದಿ ಬೆಟ್ಟದ ಸ್ಕಂದಗಿರಿ ಪ್ರದೇಶದಲ್ಲಿ ಮೃತದೇಹಗಳಿಗಾಗಿ ಶೋಧ ನಡೆಸಲಾಗುತ್ತಿದೆ. ತಮಿಳುನಾಡಿನ ಸೇಲಂ ಪ್ರದೇಶಕ್ಕೂ ವಿಶೇಷ ಪೊಲೀಸ್ ತಂಡವನ್ನ ಕಳುಹಿಸಲಾಗಿದೆ.

