ಬೆಂಗಳೂರು: ವಿವಾದಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ವಿವಾದಕ್ಕೆ ಕೊನೆಗೂ ತೆರೆ ಬೀಳಲಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಯೋಜನೆ ಜಾರಿಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ವಿಧಾನಸೌಧಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಮಧ್ಯಾಹ್ನ ನಡೆದ 14ನೇ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಈ ಯೋಜನೆಗೆ ಪರಿಸರವಾದಿಗಳು, ಕೆಲ ಮಂಡಳಿಗಳ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ಯೋಜನೆಗೆ ವನ್ಯಜೀವಿ ಮಂಡಳಿ ಸಭೆಯಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಸದ್ಯದಲ್ಲೇ ಮುಂದಿನ ಪ್ರಕ್ರಿಯೆಗಳ ಆರಂಭಿಸಲಾಗುತ್ತದೆ. ಯೋಜನೆ ಬೆಂಬಲಿಸಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
Advertisement
Advertisement
ಇಂದು ನಡೆದ ಸಭೆಯಲ್ಲೂ ಮಂಡಳಿ ಸದಸ್ಯರು ಯೋಜನೆಗೆ ತಮ್ಮ ಆಕ್ಷೇಪ ವ್ಯಕ್ತಡಿಸಿದರು. ಸಭೆಯಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಶಿವರಾಂ ಹೆಬ್ಬಾರ್, ಮಾಜಿ ಸಚಿವ ಆರ್.ವಿ ದೇಶಪಾಂಡೆ, ಶಾಸಕಿ ಸೌಮ್ಯ ರಾಮಲಿಂಗಾ ರೆಡ್ಡಿ ಮತ್ತು ವನ್ಯಜೀವಿ ಮಂಡಳಿಯ ಸದಸ್ಯರು ಭಾಗಿಯಾಗಿದ್ದರು. ಈ ಯೋಜನೆ ಅನುಷ್ಠಾನಕ್ಕೆ ಉತ್ತರ ಕರ್ನಾಟಕ ಭಾಗದ ಶಾಸಕರು, ಜನ ಪ್ರತಿನಿಧಿಗಳಿಂದ ಸಾಕಷ್ಟು ರಾಜಕೀಯ ಒತ್ತಡ ಇತ್ತು ಎನ್ನಲಾಗಿದೆ.
Advertisement
ಹುಬ್ಬಳ್ಳಿ-ಯಲ್ಲಾಪುರವರೆಗಿನ 75 ಕಿ.ಮೀ ಮಾರ್ಗ ಸಮತಟ್ಟಾದ ಪ್ರದೇಶವಾಗಿದ್ದು, ಯಲ್ಲಾಪುರದಿಂದ ಸುನ್ ಕ್ಸಲ್ ವರೆಗಿನ 56 ಕಿ.ಮೀ ಉದ್ದದ ಪ್ರದೇಶ ಗುಡ್ಡಪ್ರದೇಶದಿಂದ ಕೂಡಿದೆ. ರೈಲು ಮಾರ್ಗ ಸುಮಾರು ಶೆ.70 ಗೂ ಹೆಚ್ಚು ಪ್ರದೇಶ ದಟ್ಟ ಅರಣ್ಯ ಪ್ರದೇಶದಲ್ಲೇ ಹಾದು ಹೋಗುತ್ತದೆ. ಈ ಯೋಜನೆಗೆ ಸುಮಾರು 995.64 ಹೆಕ್ಟೇರ್ ಜಮೀನಿನ ಅಗತ್ಯ ಇದೆ. ಈ ಪೈಕಿ 595.64 ಹೆಕ್ಟೇರ್ ಭೂಮಿ ಅರಣ್ಯ ಭೂಮಿಯಾಗಿದ್ದರೆ, 184.6 ಹೆಕ್ಟೇರ್ ನೀರಾವರಿ ಭೂಮಿ ಮತ್ತು 190 ಹೆಕ್ಟೇರ್ ಒಣ ಭೂಮಿ ಇದೆ.
Advertisement
ಸುಮಾರು ಎರಡು ಲಕ್ಷ ಮರಗಳು ಈ ಯೋಜನೆಗೆ ಧರೆಗುರುಳಲಿವೆ. ಹೀಗಾಗಿ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. 164.44 ಕಿ.ಮೀ ಉದ್ದದ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯನ್ನು 1997ರಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಪರಿಸರವಾದಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನ ವಿಳಂಬವಾಗಿತ್ತು. ಈ ಯೋಜನೆ ಎರಡು ಪ್ರಮುಖ ಸಂರಕ್ಷಿತ ಅರಣ್ಯ ವಲಯಗಳಾದ ಕಾಳಿ ಹುಲಿ ರಕ್ಷಿತಾರಣ್ಯ ಮತ್ತು ಬೆಡ್ತಿ ಮೀಸಲು ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುತ್ತದೆ.