ಬಳ್ಳಾರಿ: ಕೊರೊನಾ ವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಬಾಲಕಿಯೊಬ್ಬಳು ಕೊನೆಯುಸಿರೆಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಾಂಡ್ರಿ ಗ್ರಾಮದ ನಿವಾಸಿಗಳಾದ ರವಿಕುಮಾರ್ ಹಾಗೂ ಶಕುಂತಲಾ ದಂಪತಿ ಮಗಳು ಸ್ನೇಹ (13) ಮೃತ ದುರ್ದೈವಿ. ಸ್ನೇಹಾಗೆ ಮಾರ್ಚ್ 28ರಂದು ಮನೆಯಲ್ಲಿ ಇರುವ ವೇಳೆ ಜ್ವರ ಕಾಣಿಸಿಕೊಂಡಿತ್ತು. ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಆದರೆ ಬಾಲಕಿಗೆ ಮಾರ್ಚ್ 29ರಂದು ಪುನಃ ಜ್ವರ ಮತ್ತು ವಾಂತಿ ಕಾಣಿಸಿಕೊಂಡಿತ್ತು.
Advertisement
Advertisement
ಇದರಿಂದ ಭಯಗೊಂಡ ಪೋಷಕರು ಸಂಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ಹೊಸಪೇಟೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ತಂದೆ ರವಿ, ತನ್ನ ಪುತ್ರಿಯನ್ನು ಕರೆತಂದು ಹೊಸಪೇಟೆಗೆ ಬಂದು ಆಸ್ಪತ್ರೆಗಳನ್ನೆಲ್ಲ ಸುತ್ತಾಡಿದ್ದಾರೆ. ಎರಡು ತಾಸು ಅಲೆದಾಡಿದರೂ ಖಾಸಗಿ ಕ್ಲಿನಿಕ್ ಸಿಬ್ಬಂದಿ, ಜ್ವರವು ಕೊರೊನಾ ಲಕ್ಷಣವಾಗಿರುವ ಹಿನ್ನೆಲೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ.
Advertisement
Advertisement
ಕೊನೆಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿನವರು ವಿಮ್ಸ್‍ನ ದಾರಿ ತೋರಿಸಿದ್ದಾರೆ. ಅಂಬ್ಯುಲೆನ್ಸ್‍ನಲ್ಲಿ ಅಲ್ಲಿಂದ ಬಳ್ಳಾರಿಗೆ ಕರೆತಂದು ಚಿಕಿತ್ಸೆಗೆ ದಾಖಲಿಸುತ್ತಿದ್ದಂತೆ ಬಾಲಕಿ ಕೊನೆಯುಸಿರು ಎಳೆದಿದ್ದಾಳೆ. ಒಂದು ವೇಳೆ ಸರಿಯಾದ ಸಮಯಕ್ಕೆ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಸಿಕ್ಕಿದ್ದರೆ ಮಗಳು ಬದುಕುಳಿಯುವ ಸಾಧ್ಯತೆಗಳಿದ್ದವು ಎಂದು ಮೃತ ಬಾಲಕಿಯ ತಂದೆ ರವಿಕುಮಾರ್ ಆರೋಪಿಸಿದ್ದಾರೆ.