ತುಮಕೂರು: ಕೆಪಿಎಸ್‌ಸಿ ಹಗರಣದ (KPSC Scam) ಪ್ರಮುಖ ಆರೋಪಿ ಬಸವರಾಜ ಕನ್ನಾಳೆಯಿಂದ (Basavaraj Kannale) ತುಮಕೂರು ವಿವಿಯಲ್ಲೂ (Tumakur University) ಹಲವು ಅವ್ಯವಹಾರ ನಡೆಸಿದ ಅನುಮಾನ ವ್ಯಕ್ತವಾಗಿದೆ. ಆ ದಿಕ್ಕಿನಲ್ಲೂ ಸಿಐಡಿ ಪೊಲೀಸರು ಮಾಹಿತಿ ಕಲೆಹಾಕುತಿದ್ದಾರೆ.
ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಕೆಪಿಎಸ್‌ಸಿ ಹಗರಣದ ಬೇರು ತುಮಕೂರಿಗೂ ವ್ಯಾಪಿಸಿದೆ. ಮಧ್ಯವರ್ತಿ ಬಂಧಿತ ಬಸವರಾಜ ಕನ್ನಾಳೆ ಅಕ್ರಮ ತುಮಕೂರು ವಿಶ್ವವಿದ್ಯಾಲಯಕ್ಕೂ ವ್ಯಾಪಿಸಿದೆ. ವಿವಿಯ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಹಲವು ಭ್ರಷ್ಟಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: KPSC Scam: ಕನ್ನಾಳೆ ಮನೆಯಲ್ಲಿ 15 ಗ್ರೂಪ್ ಬಿ ಹಾಲ್ ಟಿಕೆಟ್ ಪತ್ತೆ
ಬಸವರಾಜ ಕನ್ನಾಳೆ 2025 ಆಗಸ್ಟ್‌ನಲ್ಲಿ ತುಮಕೂರು ವಿವಿ ಸಿಂಡಿಕೇಟ್ ಸದಸ್ಯನಾಗಿ ನೇಮಕವಾಗಿದ್ದ. ಖರೀದಿ ಮತ್ತು ಕಾಮಗಾರಿ ನಿರ್ಧಾರದ ಉಪಸಮಿತಿಯಲ್ಲಿ ಸದಸ್ಯನಾಗಿ ನೇಮಕವಾಗಿದ್ದ. ಜೊತೆಗೆ ವಾರ್ಷಿಕ ಬಜೆಟ್ ಜಾರಿಯಲ್ಲಿಯೂ ಪ್ರಭಾವ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿರುವ ಶಂಕೆಯಿದೆ. ಈ ನಿಟ್ಟಿನಲ್ಲಿ ಸಿಐಡಿ ತನಿಖೆ ನಡೆಸಲಾಗುತ್ತಿದೆ.
ವಿವಿ ಸಿಂಡಿಕೇಟ್ ಸದಸ್ಯನಾಗಿ ನೇಮಕವಾದ 1 ವರ್ಷದಲ್ಲಿಯೇ ಬಸವರಾಜ ಕನ್ನಾಳೆ ವ್ಯವಹಾರ ಚತುರ ಎನಿಸಿಕೊಂಡಿದ್ದಾನೆ. ವಿವಿಯಲ್ಲಿ ಖಾಲಿಯಾಗಿರುವ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಸಾಕಷ್ಟು ಹಿರಿಯ ಪ್ರಾಧ್ಯಾಪಕರ ಸಂಪರ್ಕ ಸಾಧಿಸಿದ್ದ. ಕುಲಪತಿ ಹುದ್ದೆ ಕೊಡಿಸುತ್ತೇನೆ ಎಂದು ಅವರೆಲ್ಲರೊಂದಿಗೆ ವ್ಯವಹಾರ ಕೂಡ ಆರಂಭಿಸಿದ್ದ ಎಂಬ ಮಾತು ವಿವಿ ಆವರಣದಲ್ಲಿದೆ. ಅನಂತಪುರಂ ಕೇಂದ್ರೀಯ ವಿವಿಯಲ್ಲಿ ಖಾಲಿರುವ ಕುಲಪತಿ ಹುದ್ದೆಗೆ ನೇಮಕ ಮಾಡಿಸುತ್ತೇನೆ ಎಂದು ತುಮಕೂರು ವಿವಿ ವಿಶ್ರಾಂತ ಕುಲಪತಿಯೊಬ್ಬರಿಂದ ಬಂಡವಾಳ ಕೂಡ ಹೂಡಿಸಿರುವ ವದಂತಿಯಿದೆ. ಈ ಬಗ್ಗೆಯೂ ಸಿಐಡಿ, ಸಿಬಿಐ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ಬಸವರಾಜ ಕನ್ನಾಳೆ ದೂರವಾಣಿ ಕರೆಗಳ ಮಾಹಿತಿ ಸಂಗ್ರಹಿಸಿರುವ ತನಿಖಾಧಿಕಾರಿಗಳು ಅಕ್ರಮದ ಜಾಡು ಜಾಲಾಡುತ್ತಿದ್ದಾರೆ. ಈ ನಡುವೆ ಬಸವರಾಜ ಕನ್ನಾಳೆಯನ್ನು ಸಿಂಡಿಕೇಟ್‌ನಿಂದ ವಜಾಗೊಳಿಸುವಂತೆ ಎಬಿವಿಪಿ ಆಗ್ರಹಿಸಿದೆ.
ವಿವಿಯ ಆಡಳಿತ ಮಂಡಳಿ ಬಸವರಾಜ್ ಕನ್ನಾಳೆಗೆ ಕ್ಲೀನ್ ಚಿಟ್ ನೀಡಿದೆ. ಸಿಬಿಐ, ಸಿಐಡಿ ಹಾಗೂ ರಾಜ್ಯ ಗೃಹ ಇಲಾಖೆಗೆ ಈ ಕುರಿತು ವಿವಿ ಪ್ರಮಾಣ ಪತ್ರ ನೀಡಿದೆ. ಕುಲಪತಿಗಳು ಸಿಐಡಿ, ಸಿಬಿಐ ಹಾಗೂ ರಾಜ್ಯ ಗೃಹ ಇಲಾಖೆಗೆ ಪ್ರಮಾಣ ಪತ್ರ ಕಳುಹಿಸಿದ್ದಾರೆ.
ತುಮಕೂರು ವಿವಿ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಸಾಕಷ್ಟು ಹಿರಿಯ ಪ್ರಾಧ್ಯಾಪಕರು ಬಸವರಾಜ ಕನ್ನಾಳೆ ಸಂಪರ್ಕದಲ್ಲಿದ್ದು, ನೇಮಕಾತಿಗೆ ಲಾಬಿ ನಡೆಸಲು ವ್ಯವಹಾರದ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಆತನೊಂದಿಗೆ ಸಂಪರ್ಕದಲ್ಲಿದ್ದ ಪ್ರಾಧ್ಯಾಪಕರ ಎದೆಬಡಿತ ಜೋರಾಗಿದೆ. ಇದನ್ನೂ ಓದಿ: ಡಿಗ್ರಿಯಲ್ಲಿ ಎರೆಡೆರಡು ಬಾರಿ ಫೇಲ್ – ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ರ‍್ಯಾಂಕ್!
