Connect with us

Bengaluru City

ಮೆಟ್ರೋ ಕಾಮಗಾರಿಗೆ ಆಂಜನೇಯ ದೇವಾಲಯ ಕೆಡವಲು ನಿರ್ಧಾರ – ಭಕ್ತರ ಆಕ್ರೋಶ

Published

on

ಬೆಂಗಳೂರು: ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ ಮೆಟ್ರೋ ಕಾಮಗಾರಿ ನಡೆಸಲು ಆಂಜನೇಯ ದೇವಸ್ಥಾನವನ್ನು ತೆರವುಗೊಳಿಸಲು ನಿರ್ಧರಿಸಿದ್ದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ.

ಸುಮಾರು 150 ವರ್ಷಗಳಿಂದ ಈ ಆಂಜನೇಯನನ್ನು ಭಕ್ತರು ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ಈಗ ಈ ಹನುಮಂತನಿಗೆ ಮೆಟ್ರೋ ಬೂತ ಎದುರಾಗಿದೆ. ಆರ್.ವಿ.ರಸ್ತೆ ಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ.

ಆದಷ್ಟು ಬೇಗ ಮೆಟ್ರೋ ರೈಲನ್ನು ಹಳಿ ಮೇಲೆ ಓಡಿಸುವ ಧಾವಂತದಲ್ಲಿ ನಮ್ಮ ಮೆಟ್ರೋ ನಿಗಮ ಇದ್ದು, ಆಂಜನೇಯನ ಗುಡಿಯನ್ನು ಒಡೆಯಲು ತಯಾರಿ ನಡೆಸಿದೆ. ಗಾರೆಬಾವಿ ಪಾಳ್ಯ, ಬೊಮ್ಮನಹಳ್ಳಿ ಹಾಗೂ ರೂಪೇನ ಅಗ್ರಹಾರದಲ್ಲಿ ಮೂರು ಆಂಜನೇಯನ ಸನ್ನಿಧಿಗಳಿದೆ. ಈ ಮೂರು ಆಂಜನೇಯನ ಗುಡಿಗಳನ್ನು ಕೆಡವಲು ಬಿಎಂಆರ್‍ಸಿಎಲ್ ಯೋಜನೆ ರೂಪಿಸಿದೆ.

ಈ ಮಾರ್ಗದಲ್ಲಿ ಈಗಾಗಲೇ ಮೆಟ್ರೋ ಪಿಲ್ಲರ್ ಸಿದ್ಧವಾಗಿದ್ದು ಗಾರ್ಡರ್ ಗಳನ್ನು ಮೇಲೇರಿಸಲಾಗಿದೆ. ಶೇ.50 ರಷ್ಟು ಕೆಲಸ ಮುಗಿದಿದೆ. ಆದರೆ ಮೆಟ್ರೋಗೆ ಸರ್ವಿಸ್ ರಸ್ತೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿಂದೆ ಮೆಟ್ರೋ ಕಾಮಗಾರಿಗಾಗಿ ಹೈವೇ ಪ್ರಾಧಿಕಾರದಿಂದ ಸರ್ವಿಸ್ ರಸ್ತೆ ಜಾಗವನ್ನು ಮೆಟ್ರೋ ಪಡೆದಿತ್ತು. ಕಾಮಗಾರಿ ಮುಗಿಯುತ್ತಿದ್ದಂತೆ ಬದಲಿ ಸರ್ವಿಸ್ ರಸ್ತೆಯನ್ನು ಹೈವೇ ಪ್ರಾಧಿಕಾರಕ್ಕೆ ಬಿಟ್ಟುಕೊಡಬೇಕಿದೆ. ಹೀಗಾಗಿ ಗಾರೆಬಾವಿ ಪಾಳ್ಯ, ಬೊಮ್ಮನಹಳ್ಳಿ, ಹಾಗೂ ರೂಪೇನ ಅಗ್ರಹಾರದ ಆಂಜನೇಯ ದೇವಸ್ಥಾನಗಳನ್ನು ತೆರವುಮಾಡಲು ಬಿಎಂಆರ್ ಸಿಎಲ್ ಮುಂದಾಗಿದೆ.

ಗಾರೆಬಾವಿ ಪಾಳ್ಯದಲ್ಲಿರುವ ಆಂಜನೇಯನ ಗುಡಿ ಅತ್ಯಂತ ಪುರಾತನವಾಗಿದ್ದು, ಸುಮಾರು 150 ವರ್ಷದಷ್ಟು ಹಳೆಯದು ಎನ್ನಲಾಗುತ್ತಿದೆ. ಅಲ್ಲದೆ ಈ ಹಿಂದಿನ ಪ್ಲಾನ್ ಪ್ರಕಾರ ಗುಡಿ ತೆರವು ಮಾಡುವುದಿಲ್ಲ ಎಂದು ಮೆಟ್ರೋ ಭರವಸೆ ನೀಡಿತ್ತು. ಆದರೆ ಈಗ ಏಕಾಏಕಿ ದೇವಸ್ಥಾನ ತೆರವಿಗೆ ಮುಂದಾಗಿರುವ ಮೆಟ್ರೋ ಕ್ರಮವನ್ನು ಭಕ್ತರು ಸೇರಿ ದೇವಸ್ಥಾನ ಆಡಳಿತ ಮಂಡಳಿ ಖಂಡಿಸಿದೆ. ಯಾವುದೇ ಕಾರಣಕ್ಕೂ ದೇವಸ್ಥಾನ ತೆರವಿಗೆ ಬಿಡುವುದಿಲ್ಲ ಎಂದು ಭಕ್ತರು ಪಟ್ಟು ಹಿಡಿದಿದ್ದಾರೆ. ಅದೇ ರೀತಿ ಬೊಮ್ಮನಹಳ್ಳಿ, ರೂಪೇನ ಅಗ್ರಹಾರದ ಆಂಜನೇಯ ಸನ್ನಿಧಿಯನ್ನೂ ತೆರವು ಮಾಡುವುದಕ್ಕೆ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಮಾರ್ಗದ ಟ್ರಾಫಿಕ್ ಹತೋಟಿಗೆ ಮೆಟ್ರೋ ಅನಿವಾರ್ಯ. ಆದರೆ ಈಗ ಅನಾದಿಕಾಲದಿಂದಲೂ ಜನರು ಪೂಜಿಸಿಕೊಂಡು ಬಂದ ಗುಡಿ ತೆರವು ಮಾಡಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.

Click to comment

Leave a Reply

Your email address will not be published. Required fields are marked *