ಬಾಗಲಕೋಟೆ: ನಗರದ ನವನಗರದಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ನಲ್ಲಿ (Hostel) ಮೂಲಸೌಕರ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿನಿಯರು ತೀವ್ರ ಪರದಾಟ ಅನುಭವಿಸುತ್ತಿದ್ದಾರೆ.
ಕೊಠಡಿಗಳಲ್ಲಿ ಫ್ಯಾನ್ಗಳು ಇಲ್ಲದಿರುವುದು, ಸೊಳ್ಳೆಗಳ ಕಾಟ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯದ ಕೊರತೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಹಾಸ್ಟೆಲ್ ವಾರ್ಡನ್(Warden) ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕೊಠಡಿಗಳಲ್ಲಿ ಫ್ಯಾನ್ಗಳ ವ್ಯವಸ್ಥೆ ಇಲ್ಲದ ಕಾರಣ ಉರಿ ಸೆಕೆ ಮತ್ತು ಸೊಳ್ಳೆಗಳ ಕಾಟಕ್ಕೆ ಬೆದರಿ, ವಿದ್ಯಾರ್ಥಿನಿಯರು ಮಧ್ಯರಾತ್ರಿ 2:30 ಕಳೆದರೂ ನಿದ್ದೆ ಬಾರದೆ ಪರದಾಡುವಂತಾಗಿದೆ. ಟವೆಲ್ ಹಾಗೂ ಕರವಸ್ತ್ರಗಳಿಂದ ಗಾಳಿ ಬೀಸಿಕೊಳ್ಳುತ್ತಾ ರಾತ್ರಿ ಕಳೆಯುತ್ತಿರುವ ದೃಶ್ಯಗಳನ್ನು ವಿದ್ಯಾರ್ಥಿನಿಯರೇ ಮೊಬೈಲ್ನಲ್ಲಿ ವಿಡಿಯೋ ಸೆರೆಹಿಡಿದು ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಷ್ಟೇ ಅಲ್ಲದೆ, ಹಾಸ್ಟೆಲ್ನ ಶೌಚಾಲಯಗಳ ಬಾಗಿಲುಗಳು ಮುರಿದುಬಿದ್ದಿದ್ದು, ಸ್ನಾನಗೃಹಗಳಿಗೆ ಸಮರ್ಪಕ ನೀರು ಸರಬರಾಜು ಇಲ್ಲದೆ ಹೆಣ್ಣುಮಕ್ಕಳು ನಿತ್ಯವೂ ಮುಜುಗರ ಮತ್ತು ಕಷ್ಟ ಅನುಭವಿಸುವಂತಾಗಿದೆ.
ವಿದ್ಯಾರ್ಥಿನಿಯರ ಸಂಕಷ್ಟವನ್ನು ಕಣ್ಣಾರೆ ಕಂಡರೂ ನಿರ್ಲಕ್ಷ್ಯ ವಹಿಸಿರುವ ಹಾಸ್ಟೆಲ್ ವಾರ್ಡನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನವೇ ಇದಕ್ಕೆ ಕಾರಣ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಸಂಬಂಧಪಟ್ಟ ಇಲಾಖೆಯ ಉನ್ನತಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಹಾಗೂ ತಕ್ಷಣವೇ ಫ್ಯಾನ್, ಸಮರ್ಪಕ ನೀರಿನ ಸೌಲಭ್ಯ ಒದಗಿಸಿ ಶೌಚಾಲಯಗಳನ್ನು ದುರಸ್ತಿಪಡಿಸಬೇಕು ಎಂದು ವಿದ್ಯಾರ್ಥಿನಿಯರು ಪಟ್ಟುಹಿಡಿದಿದ್ದಾರೆ.
