ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಅವರು ಪಕ್ಷದ ಪ್ರತಿಭಟನೆಗಳ ಕುರಿತು ನೀಡಿರುವ ಹೇಳಿಕೆಗೆ ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್(KC Venugopal) ಆಕ್ಷೇಪ ವ್ಯಕ್ತಪಡಿಸಿದ್ದು, ಪಕ್ಷದ ಮುಖಂಡರು ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಸಲಿ ಜೆನ್ ಝಿ (Gen Z) ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆದರೆ, ಶಶಿ ತರೂರ್ ಅವರು ಈ ಪ್ರತಿಭಟನೆಯನ್ನು ಬೇರೊಂದು ಪಕ್ಷದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಹೋಲಿಸಿ ಮಾತನಾಡಿದ್ದಕ್ಕೆ ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ
ತರೂರ್ ಅವರು ಉದ್ದೇಶಪೂರ್ವಕವಾಗಿ ಈ ರೀತಿ ಹೇಳಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಆದರೂ ಇಂತಹ ಹೇಳಿಕೆಗಳನ್ನು ನೀಡುವುದರಿಂದ ನಾವೆಲ್ಲರೂ ದೂರವಿರಬೇಕು. ಕಾಂಗ್ರೆಸ್‌ನ ಸದಸ್ಯರು ಯಾವಾಗಲೂ ಪಕ್ಷದ ಚೌಕಟ್ಟು ಅಥವಾ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೂ, ಕೇವಲ ಬಿಜೆಪಿಯನ್ನು ಮೆಚ್ಚಿಸುವ ಅಥವಾ ಅವರಿಗೆ ಅನುಕೂಲ ಮಾಡಿಕೊಡುವಂತಹ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಲು ನಾವು ಎಚ್ಚರ ವಹಿಸಬೇಕು ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ತರೂರ್ ಹೇಳಿದ್ದೇನು?
ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಶಿ ತರೂರ್, ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ಉಲ್ಲೇಖಿಸುತ್ತಾ, ಸಿಜೆಪಿ ಕೈಗೆತ್ತಿಕೊಂಡ ವಿಷಯಗಳನ್ನು ನನ್ನ ಪಕ್ಷ ಹಾಗೂ ರಾಹುಲ್ ಗಾಂಧಿ ಅವರು ‘ಛಾತ್ರೋಂ ಕಿ ಗೂಂಜ್’ ಮೂಲಕ ಮೊದಲೇ ಕೈಗೆತ್ತಿಕೊಂಡಿದ್ದರು. ಆದರೆ ಇದು ಜನರ ಬಳಿ ಯಾಕೆ ಅಷ್ಟಾಗಿ ತಲುಪಲಿಲ್ಲ ಅಥವಾ ಸದ್ದು ಮಾಡಲಿಲ್ಲ ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ. ನಾವು ಜನರ ನಾಡಿಮಿಡಿತವನ್ನು ಅರಿತುಕೊಳ್ಳಬೇಕಿದೆ ಎಂದಿದ್ದರು.
ರಾಹುಲ್ ಗಾಂಧಿ ಅವರು ಜೂನ್ 17 ರಂದು ರಾಜಸ್ಥಾನದ ಕೋಟಾದಿಂದ ‘ಛಾತ್ರೋಂ ಕಿ ಗೂಂಜ್(ವಿದ್ಯಾರ್ಥಿಗಳ ಘರ್ಜನೆ) ಅಭಿಯಾನವನ್ನು ಪ್ರಾರಂಭಿಸಿದ್ದರು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜೂನ್ 20 ರಂದು ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ನಡೆಸಿ ಮಾಧ್ಯಮಗಳ ಗಮನ ಸೆಳೆದಿತ್ತು. ಇದನ್ನೂ ಓದಿ: RG ಕರ್ ರೇಪ್ & ಮರ್ಡರ್ ಕೇಸ್ – ಮರು ತನಿಖೆಗೆ ಬಂಗಾಳ ಸಿಎಂ ಸುವೇಂದು ಅಧಿಕಾರಿ ಆದೇಶ
ದ್ರೋಹ ಬಗೆಯುತ್ತಿಲ್ಲ
ಯಾವಾಗಲೂ ಸ್ವತಂತ್ರ ಅಭಿಪ್ರಾಯಗಳಿಗೆ ಹೆಸರಾಗಿರುವ ಶಶಿ ತರೂರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ನನ್ನ ಪಕ್ಷಕ್ಕೆ ದ್ರೋಹ ಬಗೆಯುತ್ತಿಲ್ಲ, ಬದಲಿಗೆ ನನ್ನ ಸ್ವತಂತ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಕೆಲವೊಮ್ಮೆ ನನ್ನ ಅಭಿಪ್ರಾಯಗಳನ್ನು ವಿರೋಧಿಗಳು ಬಳಸಿಕೊಳ್ಳಬಹುದು. ಆದರೆ ಕಾಂಗ್ರೆಸ್ ದೇಶದಲ್ಲೇ ಅತ್ಯಂತ ಪ್ರಜಾರಾಜಕೀಯ ಹಾಗೂ ಮುಕ್ತ ಪಕ್ಷವಾಗಿದೆ. ಬಿಜೆಪಿಯಲ್ಲಿ ಯಾರಾದರೂ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಉಳಿಯಲು ಸಾಧ್ಯವೇ? ನನ್ನ ಸಿದ್ಧಾಂತಕ್ಕೆ ಅತ್ಯಂತ ಹತ್ತಿರವಾಗಿರುವ ಪಕ್ಷದಲ್ಲೇ ನಾನಿದ್ದೇನೆ ಎಂದಿದ್ದಾರೆ.

