– ʻನೋ ಕಾಮೆಂಟ್ಸ್ ಎಂದ ಡಿವಿಎಸ್
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ ವಿಜಯೇಂದ್ರ (BY Vijayendra) ಅವರನ್ನು ಕೆಳಗಿಳಿಸುವ ಬಗ್ಗೆ ದೆಹಲಿ ನಾಯಕರಿಗೆ ಒತ್ತಾಯ ಮಾಡಿರುವ ಆಡಿಯೋ (Audio) ಒಂದು ಕೇಸರಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.
ಇದು ಬಿಜೆಪಿ ನಾಯಕರೂ ಆಗಿರುವ ಮಾಜಿ ಸಿಎಂ ಡಿ.ವಿ ಸದಾನಂದ ಗೌಡರು (DV Sadananda Gowda) ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ. ಆಡಿಯೋದಲ್ಲಿ ಅಕ್ಟೋಬರ್ ತಿಂಗಳವರೆಗೂ ವಿಜಯೇಂದ್ರ ಅವರನ್ನ ಮುಂದುವರಿಯಲು ಬಿಡಿ, ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೆಂದು ಸಂಭಾಷಣೆ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ 6 ವರ್ಷ ಪಕ್ಷದಿಂದ ಉಚ್ಚಾಟನೆ

ಆಡಿಯೋದಲ್ಲಿ ಏನಿದೆ?
ಸದಾನಂದ ಗೌಡರ ಧ್ವನಿಯನ್ನೇ ಹೋಲುವ ಈ ಆಡಿಯೋ ಇದೀಗ ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬರ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ನಡೆಸಿದ ಸಂಭಾಷಣೆ ಇದಾಗಿದೆ. ಇದನ್ನೂ ಓದಿ: ನಮ್ಮ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರ ಕೊಟ್ಟು ಎಸ್‌ಐಆರ್ ಮಾಡಲಿ: ಪ್ರಿಯಾಂಕ್ ಖರ್ಗೆ ಆಗ್ರಹ
ʻನಾನು ಹೇಳೋದು ತಪ್ಪೋ ಸರಿನೋ ಗೊತ್ತಿಲ್ಲ, ನೀವೇ ಹೇಳಬೇಕು. ವಿಜಯೇಂದ್ರ ಅವರ ಅವಧಿ ನವೆಂಬರ್‌ಗೆ ಮುಗಿಯಲಿದೆ. ಈಗಲೇ ಅವರನ್ನು ತೆಗೆದು ಯಾಕೆ ಮತ್ತೊಂದು ಗೊಂದಲ ಸೃಷ್ಟಿ ಮಾಡೋದು? ಅವರ ಅವಧಿ ನವೆಂಬರ್‌ಗೆ ಮುಗಿಯುತ್ತೆ, ಆಗಲೇ ಹುದ್ದೆಯಿಂದ ತೆಗೆದರೆ ಸೂಕ್ತ. ಆಗ ಅವರ ಅವಧಿಯೂ ಮುಗಿದಿರುತ್ತೆ, ಅವನ್ನು ಪದವಿಯಿಂದ ತೆಗೆದರು ಅನ್ನೋ ಆರೋಪವೂ ಬರೋದಿಲ್ಲ. ಪಕ್ಷದ ಒಳಗೂ ಯಾವುದೇ ಗೊಂದಲ ಇರಲ್ಲ, ಅವರನ್ನು ವ್ಯವಸ್ಥಿತವಾಗಿ ಹುದ್ದೆಯಿಂದ ತೆಗೆಯಬೇಕು. ಇನ್ನುಳಿದಿರೋದು ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್. ಅಕ್ಟೋಬರ್ ಹೊತ್ತಿಗೆ ವಿಜಯೇಂದ್ರ ಅವರನ್ನು ಕಿಕ್ ಔಟ್ ಮಾಡಿ. ಈಗ ಏನಾದರೂ ಅವರನ್ನು ತೆಗೆದರೆ ಗೊಂದಲ ಆಗುತ್ತೆ, ಅವರ ತಂಡ ಎಚ್ಚೆತ್ತುಕೊಳ್ಳುತ್ತೆ. ಅವರ ಅವಧಿ ಮುಗಿದ ಮೇಲೆ ತೆಗೆದರೆ ಸಮಸ್ಯೆ ಆಗಲ್ಲ ಅನ್ನೋದು ನನ್ನ ಅಭಿಪ್ರಾಯ. ಇದಕ್ಕಿಂತ ಬೇರೆ ಅವಕಾಶ ಇದ್ರೆ ನೋಡಿ, ಹೈಕಮಾಂಡ್ ನಿರ್ಧಾರಕ್ಕೆ ಒಪ್ಕೋತೇವೆ. ವಿಜಯೇಂದ್ರ ತೆಗೆದ ಬಳಿಕ ಯಾರಾದ್ರೂ ಸೂಕ್ತ ವ್ಯಕ್ತಿಯನ್ನು ರಾಜ್ಯಾಧ್ಯಕ್ಷರಾಗಿ ಮಾಡಿʼ ಎಂದು ಆಡಿಯೋ ಸಂಭಾಷಣೆಯಲ್ಲಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವರು ಇನ್ನೂ 3 ತಿಂಗಳಲ್ಲಿ 3 ವರ್ಷ ಪೂರೈಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ 3 ವರ್ಷ ಇರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ನಿಯಮವಾಗಿದೆ. ಈ ಹೊತ್ತಿನಲ್ಲೇ ಸ್ಫೋಟಕ ಆಡಿಯೋ ಹೊರಬಂದಿದೆ.
ಡಿವಿಎಸ್ ಹೇಳಿದ್ದೇನು?
ಇನ್ನೂ ವೈರಲ್ ಆಡಿಯೋ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸದಾನಂದ ಗೌಡರು, ಇದರ ಬಗ್ಗೆ ʻನೋ ಕಾಮೆಂಟ್ಸ್ʼ. ನನ್ನದಲ್ಲದ ಆಡಿಯೋ, ನನ್ನದಲ್ಲದ ವಿಡಿಯೋ ಬಗ್ಗೆ ನಾನು ಮಾತಾಡಲ್ಲ. ನನಗೆ ಈ ಆಡಿಯೋ ಬಗ್ಗೆ ಗೊತ್ತಿಲ್ಲ. ಇದರ ಬಗ್ಗೆ ನೀವೇ ಕಂಡುಹಿಡಿಯಿರಿ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ | ಭೂಮಿ ಕೊಡಿ ಅಂತ ನಾವು ಯಾರಿಗೂ ಬಲವಂತ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
