– ಸರಿಗಮಪ ಫಿನಾಲೆಯಲ್ಲಿ ಮಂಗಳೂರಿಗೆ ʻಡಬಲ್ ಧಮಾಕʼ
`ಜೀ ಕನ್ನಡ’ದ ಜನಪ್ರಿಯ ರಿಯಾಲಿಟಿ ಶೋ ʻಸರಿಗಮಪ ಲಿಟಲ್ ಚಾಂಪ್ಸ್ʼ ಸೀಸನ್ ಅದ್ಧೂರಿಯಾಗಿ ತೆರೆ ಕಂಡಿದ್ದು, ಮಂಗಳೂರಿನ ಬಾಲಕ ಅಶ್ಮಿತ್ ಈ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸುದೀರ್ಘ ಸಂಗೀತ ಪ್ರಯಾಣದ ನಂತರ, ಅಂತಿಮ ಮಹಾಸಂಗ್ರಮದಲ್ಲಿ ತಮ್ಮ ನಾದಸುಧೆಯಿಂದ ಜಡ್ಜಸ್ ಮತ್ತು ವೀಕ್ಷಕರ ಮನಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಫಿನಾಲೆ ಕದನದಲ್ಲಿ ಜಯಭೇರಿ ಬಾರಿಸಿದ ಅಶ್ಮಿತ್‌ಗೆ ಆಕರ್ಷಕ ವಿನ್ನಿಂಗ್ ಟ್ರೋಫಿಯ ಜೊತೆಗೆ 20 ಲಕ್ಷ ರೂಪಾಯಿ ನಗದು ಬಹುಮಾನವನ್ನ ನೀಡಿಲಾಗಿದೆ.

ಅಶ್ಮಿತ್‌ಗೆ ತೀವ್ರ ಪೈಪೋಟಿ ನೀಡಿದ ಮಂಗಳೂರಿನ ಮತ್ತೊಬ್ಬ ಬಾಲಪ್ರತಿಭೆ, ಗಾಯಕ ಅಂಚಿತ್ಯ ರೈ ಮೊದಲ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ರೋಚಕವಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ ಅಚಿಂತ್ಯ ಅವರಿಗೆ ಟ್ರೋಫಿ ಹಾಗೂ 15 ಲಕ್ಷ ರೂ. ನಗದು ಬಹುಮಾನ ಲಭಿಸಿದೆ. ಈ ಮೂಲಕ ಈ ಬಾರಿಯ ಸರಿಗಮಪ ಫಿನಾಲೆಯಲ್ಲಿ ಮಂಗಳೂರಿಗೆ ʻಡಬಲ್ ಧಮಾಕʼ ಸಿಕ್ಕಂತಾಗಿದೆ.
2 ಹಂತಗಳಲ್ಲಿ ನಡೆದ ಈ ಮಹಾಸಂಗ್ರಮದ ಅಂತಿಮ ಸುತ್ತಿಗೆ ಒಟ್ಟು 6 ಬಾಲಪ್ರತಿಭೆಗಳು ಅರ್ಹತೆ ಪಡೆದಿದ್ದರು. ಪ್ರತಿಯೊಬ್ಬ ಸ್ಪರ್ಧಿಯೂ ಒಂದಕ್ಕಿಂತ ಒಂದು ವಿಭಿನ್ನ ಶೈಲಿಯ ಗಾಯನದಲ್ಲಿ ಪರಿಣತಿ ಹೊಂದಿದ್ದು, ತೀರ್ಪುಗಾಗರರಿಗೆ ವಿಜೇತರನ್ನ ಆಯ್ಕೆ ಮಾಡೋದು ದೊಡ್ಡ ಸವಾಲಾಗಿತ್ತು.
