ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಶುಕ್ರವಾರ ಸರ್ಕಾರದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದೊಂದಿಗೆ ತಟಸ್ಥ ಸ್ಥಳದಲ್ಲಿ ಸಭೆ ನಡೆಸಲು ಸರ್ಕಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಮಧ್ಯಾಹ್ನ ಸುಮಾರು 12:30ಕ್ಕೆ ನಡೆಯಲಿದೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಜೆಪಿ ವಕ್ತಾರ ಸೌರವ್ ದಾಸ್, ನಾಳೆ ಸರ್ಕಾರದ ಜೊತೆ ಚರ್ಚೆಗೆ ಕರೆಯಲಾಗಿದೆ. ನಮ್ಮ ವಿನಂತಿಯಂತೆ ತಟಸ್ಥ ಸ್ಥಳದಲ್ಲಿ ಸಭೆ ನಡೆಸಲು ಸರ್ಕಾರ ಒಪ್ಪಿಕೊಂಡಿರುವುದು ನಮಗೆ ತುಂಬಾ ಸಂತೋಷ ತಂದಿದೆ. ಸಭೆಗೆ ಕಾನ್ಸ್‌ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾವನ್ನು(Constitution Club of India) ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾವು ಪ್ರತಿಷ್ಠೆಗೆ ಬಿದ್ದಿಲ್ಲ, ಮಾತುಕತೆಗೆ ಬನ್ನಿ – ಸಿಜೆಪಿ ಜೊತೆ ಸಭೆಗೆ ಕೇಂದ್ರದಿಂದ 4ನೇ ಆಹ್ವಾನ
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಜುಲೈ 20 ರಂದು ಸಿಜೆಪಿ ನಾಯಕರ ಜೊತೆ ಸರ್ಕಾರದ ಪರವಾಗಿ ಮಾತುಕತೆ ನಡೆಸಿದ್ದರು. ಸಿಜೆಪಿ ಪ್ರತಿನಿಧಿಗಳಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ಜೆ.ಪಿ. ನಡ್ಡಾ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ತಮ್ಮ ಬೇಡಿಕೆಗಳ ಪತ್ರವನ್ನು ಹಸ್ತಾಂತರಿಸಿದ್ದರು.
