ಕನ್ನಡ ಕಿರುತೆರೆ ನಿರ್ಮಾಪಕರ ಸಂಘವು ನಟ ಅನಿರುದ್ಧ ಅವರ ವಿರುದ್ಧ ಹೊರಡಿಸಿರುವ ಅಲಿಖಿತ ಬ್ಯಾನ್ ವಿಚಾರ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚೆಯಾಗಲಿದೆ. ಮಧ್ಯಾಹ್ನ 3 ಗಂಟೆಗೆ ನಿರ್ಮಾಪಕರ ಸಂಘ ಮತ್ತು ವಾಣಿಜ್ಯ ಮಂಡಳಿಯು ಜಂಟಿಯಾಗಿ ಅನಿರುದ್ಧ ಜೊತೆ ಮಾತನಾಡಲಿದೆ. ಈ ಸಂದರ್ಭದಲ್ಲಿ ಅನಿರುದ್ಧ ಮೇಲಿನ ನಿಷೇಧವನ್ನು ಹಿಂದಕ್ಕೆ ಪಡೆಯುತ್ತಾರಾ? ಅಥವಾ ಮುಂದುವರೆಸುತ್ತಾರಾ ಎನ್ನುವುದನ್ನು ಕಾದು ನೋಡಬೇಕು. ಮಧ್ಯಾಹ್ನದ ನಂತರ ಅನಿರುದ್ಧ ಭವಿಷ್ಯ ನಿರ್ಧಾರವಾಗಲಿದೆ.
ಜೊತೆ ಜೊತೆಯಲಿ ಧಾರಾವಾಹಿ ವಿಚಾರವಾಗಿ ಅನಿರುದ್ಧ ಅವರ ಮೇಲೆ ಗುರುತರ ಆರೋಪಗಳನ್ನು ಮಾಡಲಾಗಿತ್ತು. ಆ ಆರೋಪಗಳನ್ನು ಅನಿರುದ್ಧ ನಿರಾಕರಿಸಿದರೂ, ನಿರ್ಮಾಪಕರ ಸಂಘವು ಅನಿರುದ್ಧ ಮೇಲೆ ನಿಷೇಧ ಹೇರಿತ್ತು. ಇದೀಗ ಅನಿರುದ್ಧ ಅವರು ಸೂರ್ಯವಂಶ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಅವರನ್ನು ಈ ಧಾರಾವಾಹಿಯಿಂದಲೂ ಕೈ ಬಿಡುವಂತೆ ಒತ್ತಡ ಹೇರಲಾಗುತ್ತಿದೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್
ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್, ‘ಗಲಾಟೆ ಆಗಿದ್ದು ಕಿರುತೆರೆ ನಿರ್ಮಾಪಕರ ಸಂಘಕ್ಕೂ ಮತ್ತು ಅನಿರುದ್ಧ ಅವರಿಗೂ ನಿಜ. ಆದರೆ, ಅನಿರುದ್ಧ ಅವರು ವಾಣಿಜ್ಯ ಮಂಡಳಿಯ ಸದಸ್ಯರು ಮತ್ತು ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿರುವ ಎಸ್.ನಾರಾಯಣ್ ಅವರು ಸಿನಿಮಾ ರಂಗದವರು. ಅದಕ್ಕೂ ಹೆಚ್ಚಾಗಿ ಈ ವಿಷಯವನ್ನು ಸೌಹಾರ್ದಯುತವಾಗಿ ಮುಗಿಸಿಕೊಡಿ ಎಂದು ಅನಿರುದ್ಧ ಮಂಡಳಿಗೆ ಪತ್ರ ಬರೆದಿದ್ದಾರೆ. ಹಾಗಾಗಿ ಕರೆಯಿಸಿಕೊಂಡು ಮಾತನಾಡಲಿದ್ದೇವೆ’ ಅಂದರು.
ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ನ ಒಂದು ಅಂಗ ಸಂಸ್ಥೆಯಾಗಿರುವ ಕಿರುತೆರೆ ನಿರ್ಮಾಪಕರ ಸಂಘವು ಯಾವುದೇ ಕಾರಣಕ್ಕೂ ಅನಿರುದ್ಧ ಅವರ ಮಾತನ್ನು ಒಪ್ಪುತ್ತಿಲ್ಲ. ಎರಡು ವರ್ಷಗಳ ಕಾಲ ಯಾವುದೇ ನಿರ್ಮಾಪಕರು ಅನಿರುದ್ಧ ಅವರಿಗೆ ಅವಕಾಶ ಕೊಡುವುದು ಬೇಡ ಎಂದು ಹೊರಡಿಸಿರುವ ಆದೇಶವನ್ನು ವಾಪಸ್ಸು ಪಡೆಯುತ್ತಿಲ್ಲ. ಸಂಧಾನಕ್ಕೂ ಸಿದ್ಧರಾಗಿಲ್ಲ. ಹಾಗಾಗಿ ಅನಿರುದ್ಧ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ.