– ಕುಟುಂಬ ಸಮೇತರಾಗಿ ರಾಮಮಂದಿರದಲ್ಲಿ ರಾಮಲಲ್ಲಾ ದರ್ಶನ
ಲಕ್ನೋ: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (Akhilesh Yadav) ಅವರು ಡಿಸೆಂಬರ್ 12ರಂದು ಕುಟುಂಬ ಸಮೇತರಾಗಿ ಅಯೋಧ್ಯೆಗೆ (Ayodhya) ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅಯೋಧ್ಯೆಯ ರಾಮಜನ್ಮಭೂಮಿ ಮಂದಿರಕ್ಕೆ ತೆರಳಿ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಪವನ್ ಪಾಂಡೆ ಅವರು ಅಖಿಲೇಶ್ ಯಾದವ್ ಅವರ ಅಯೋಧ್ಯೆ ಭೇಟಿಯ ದಿನಾಂಕವನ್ನು ಪ್ರಕಟಿಸಿದ್ದಾರೆ. ಅಖಿಲೇಶ್ ಯಾದವ್ ಅವರೊಂದಿಗೆ ಪತ್ನಿ ಹಾಗೂ ಸಂಸದೆ ಡಿಂಪಲ್ ಯಾದವ್, ಪುತ್ರ ಮತ್ತು ಪುತ್ರಿ ಕೂಡ ಅಯೋಧ್ಯೆಗೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: E20 ಈಗ 420 ಆಗಿದೆ, ಜನರ ವಾಹನಗಳ ಪೆಟ್ರೋಲ್ ಕದಿಯಲಾಗುತ್ತಿದೆ – ಮೋದಿ ಸರ್ಕಾರದ ವಿರುದ್ಧ ರಾಗಾ ಕಿಡಿ
ಅಯೋಧ್ಯೆಯಲ್ಲಿ ಅಖಿಲೇಶ್ ಯಾದವ್ ಅವರು ಇಡೀ ದಿನ ಕಳೆಯುವ ಸಾಧ್ಯತೆಯಿದೆ. ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನ ದರ್ಶನ ಪಡೆದ ಬಳಿಕ ಹನುಮಾನ್ಗಢಿ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ. ಅಲ್ಲದೇ, ಸಾಧು-ಸಂತರು ಹಾಗೂ ಮಹಂತರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ. ಅವರೊಂದಿಗೆ ಪ್ರಸಾದ ಸ್ವೀಕರಿಸಲಿದ್ದಾರೆ ಎಂದು ಪವನ್ ಪಾಂಡೆ ಮಾಹಿತಿ ನೀಡಿದ್ದಾರೆ.
2024ರ ಜನವರಿಯಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ಅಖಿಲೇಶ್ ಯಾದವ್ ಅವರು ಹಾಜರಾಗಿರಲಿಲ್ಲ. ಇದೀಗ ಪ್ರಾಣಪ್ರತಿಷ್ಠಾಪನೆಯ ಬಳಿಕ ಮೊದಲ ಬಾರಿಗೆ ರಾಮಮಂದಿರಕ್ಕೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಕರ್ನಾಟಕ ಸೇರಿ ಐದು ದಕ್ಷಿಣ ರಾಜ್ಯಗಳಿಗೆ ಹೆಚ್ಚು ಭಾರತ್ ರೈಸ್: ಜೋಶಿ ಮಾಹಿತಿ
ಇನ್ನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿರುವ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಅವರ ಅಯೋಧ್ಯೆ ಭೇಟಿ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ.
