ಚಾಮರಾಜನಗರ: ಇತ್ತೀಚಿನ ದಿನಗಳಲ್ಲಿ ಸರಣಿ ಹುಸಿ ಬಾಂಬ್ ಇ-ಮೇಲ್ ಸಂದೇಶಗಳಿಂದ ತಲ್ಲಣಗೊಂಡಿದ್ದ ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ(Chamarajanagar District Court) ಈಗ ಮತ್ತೊಂದು ಶಾಕಿಂಗ್ ಬೆದರಿಕೆ ಎದುರಾಗಿದೆ. ಈ ಬಾರಿ ಕಿಡಿಗೇಡಿಗಳು ನೇರವಾಗಿ ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರ (Judge) ಮೊಬೈಲ್‌ಗೇ ಇಂಟರ್‌ನೆಟ್ ಕರೆ ಮಾಡಿ, ಆರೋಪಿಗಳಿಗೆ ಜಾಮೀನು (Bail) ನೀಡದಿದ್ದರೆ ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ.
ಬುಧವಾರ ಅನಾಮಧೇಯ ವ್ಯಕ್ತಿಯೊಬ್ಬ ನ್ಯಾಯಾಧೀಶರ ಮೊಬೈಲ್‌ಗೆ ಕರೆ ಮಾಡಿದ್ದಾನೆ. ನ್ಯಾಯಾಲಯದಲ್ಲಿ ಸದ್ಯ ವಿಚಾರಣೆಯಲ್ಲಿರುವ ಅಪರಾಧ ಸಂಖ್ಯೆ 144/2026 ಪ್ರಕರಣದ ಆರೋಪಿಗಳಿಗೆ ತಕ್ಷಣವೇ ಜಾಮೀನು (Bail) ಮಂಜೂರು ಮಾಡಬೇಕೆಂದು ಆತ ಒತ್ತಾಯಿಸಿದ್ದಾನೆ. “ಒಂದು ವೇಳೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಲ್ಲಿ ಮುಂದಿನ ಟಾರ್ಗೆಟ್ ನೀನೇ, ನಿನ್ನನ್ನು ಬದುಕಲು ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದ ಬಳಸಿ ಏಕವಚನದಲ್ಲಿ ನಿಂದಿಸಿದ್ದಾನೆ. ನ್ಯಾಯಾಧೀಶರಿಗೆ ನೇರ ಜೀವ ಬೆದರಿಕೆ ಹಾಕಿ ಉದ್ಧಟತನ ಪ್ರದರ್ಶಿಸಿದ್ದಾನೆ. ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚನೆ; ಮಾಜಿ ಸಚಿವ ಜಾಲಪ್ಪ ಸೊಸೆಗೆ 5 ವರ್ಷ ಜೈಲು ಶಿಕ್ಷೆ
ಕಳೆದ ಕೆಲವು ದಿನಗಳಿಂದ ಚಾಮರಾಜನಗರ ಜಿಲ್ಲಾ ಕೋರ್ಟ್‌ಗೆ ನಾಲ್ಕಕ್ಕೂ ಹೆಚ್ಚು ಬಾರಿ ಹುಸಿ ಬಾಂಬ್ ಇ-ಮೇಲ್ ಬೆದರಿಕೆಗಳು ಬಂದಿದ್ದವು. ಆ ಆತಂಕ ದೂರಾಗುವ ಮುನ್ನವೇ ಈಗ ನೇರವಾಗಿ ನ್ಯಾಯಾಧೀಶರಿಗೇ ಬೆದರಿಕೆ ಕರೆ ಬಂದಿರುವುದು ನ್ಯಾಯಾಂಗ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚಾಮರಾಜನಗರ ಪಟ್ಟಣ ಪೊಲೀಸರು ಅನಾಮಧೇಯ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ. ಇದೇ ವೇಳೆ, ಜಿಲ್ಲಾ ಪ್ರಧಾನ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರ ಜೀವ ಹಾಗೂ ಕರ್ತವ್ಯ ನಿರ್ವಹಣೆಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚುವರಿ ಪೊಲೀಸ್ ರಕ್ಷಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
