ಬೆಂಗಳೂರು: ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿಮತ್ತು ನಟ ಧನ್ವೀರ್ (Dhanveer) ನಡುವಿನ ಜಟಾಪಟಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನಟನ ವಿರುದ್ಧ ದಾಖಲಾಗಿದ್ದ ಪ್ರತ್ಯೇಕ 3 ಪ್ರಕರಣಗಳ ತನಿಖೆಗೆ ನೀಡಿದ್ದ ತಡೆಯಾಜ್ಞೆ ಆದೇಶವನ್ನು ಹೈಕೋರ್ಟ್ ತೆರವುಗೊಳಿಸಿದೆ.
ಧನ್ವೀರ್ ವಿರುದ್ಧ ನಗರದಲ್ಲಿ ಮೂರು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿದ್ದವು. ಈ ಕೇಸ್ಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಧನ್ವೀರ್ ಕೇಸ್ಗಳ ತನಿಖೆಗೆ ತಡೆಯಾಜ್ಞೆ ತಂದಿದ್ದರು.
ಈ ಪ್ರಕರಣ ಕುರಿತು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರ ಪೀಠದಲ್ಲಿ ತಡೆಯಾಜ್ಞೆ ಪ್ರಶ್ನೆ ಮಾಡಿದ್ದ ಅರ್ಜಿ ವಿಚಾರಣೆ ನಡೆಸಲಾಯಿತು. ಈ ವೇಳೆ ಧನ್ವೀರ್ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡನೆ ಮಂಡಿಸಿದ್ದರು. ಧನ್ವೀರ್ ಮನೆಗೆ ಬಂದಿದ್ದವರು ಅವರ ತಂದೆಗೆ ನಿಂದಿಸಿದ್ದಾರೆ. ಆದರೆ, ಧನ್ವೀರ್ ವಿಜಯಲಕ್ಷ್ಮಿಗೆ ನಿಂದಿಸಿಲ್ಲ ಎಂದು ವಾದಿಸಿದ್ದರು.
ಅರ್ಜಿದಾರರ ವಾದಕ್ಕೆ ಹೆಚ್ಚುವರಿ ಎಸ್ಪಿಪಿ ಅನೂಪ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ವಾಟ್ಸಾಪ್ ಸಂದೇಶ ಹಾಗೂ ಮೊಬೈಲ್ ಸಂಭಾಷಣೆಗಳ ವಿವರ ಸಲ್ಲಿಕೆ ಮಾಡಿದ್ದರು. ದೂರುದಾರ ನಾಗರಾಜ್ಗೆ ಬೆದರಿಕೆ ಹಾಕಿರುವುದಕ್ಕೆ ಸಾಕ್ಷ್ಯಗಳಿವೆ. ದೂರಿನಲ್ಲಿನ ಆರೋಪಗಳಿಗೆ ಪೂರಕ ಸಾಕ್ಷ್ಯಾಧಾರಗಳಿವೆ ಎಂದು ವಾದ ಮಂಡಿಸಿದ್ದರು.ಇದನ್ನೂ ಓದಿ: ಶಿಕಾರಿ ನೆಪದಲ್ಲಿ ಬಂದು ಎಸ್ಟೇಟ್ ಮಾಲೀಕನ ಮನೆ ಮೇಲೆ ಗುಂಡಿನ ದಾಳಿ; ಕಿಟಕಿ, ಗೋಡೆ ಛಿದ್ರ-ಛಿದ್ರ
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಪ್ರಕರಣ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು ಮಾಡಿ ತನಿಖೆಗೆ ಅನುಮತಿ ನೀಡಿ ಧನ್ವೀರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಇದರಿಂದ ಧನ್ವೀರ್ ವಿರುದ್ಧದ ಮೂರು ಪ್ರಕರಣಗಳ ತನಿಖೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿರುವ ಬೆನ್ನಲ್ಲೇ ಧನ್ವೀರ್ ವಿರುದ್ಧದ ಮೂರು ಪ್ರಕರಣಗಳ ತನಿಖೆ ಮತ್ತೆ ಚುರುಕುಗೊಳ್ಳುವ ಸಾಧ್ಯತೆ ಇದೆ. ತನಿಖೆಯಲ್ಲಿ ಮುಂದೆ ಏನೆಲ್ಲ ಬೆಳವಣಿಗೆ ಆಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.ಇದನ್ನೂ ಓದಿ: ಬಸವಣ್ಣನವರಿಗೆ ಹೇಳೋರು-ಕೇಳೋರು ಇಲ್ಲ ಎಂಬ ಕೆಲವರ ಅಹಂಗೆ ಪಾಠ ಕಲಿಸಬೇಕು: ಪ್ರತಾಪ್ ಸಿಂಹ
