ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಹಗರಣವನ್ನ ಕೇಂದ್ರ ತನಿಖಾ ದಳ (CBI)ಗೆ ವಹಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಆಗಸ್ಟ್ 5 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸುವುದಾಗಿ ಘೋಷಿಸಿದೆ.
ABVP ನೀಡಿದ್ದ ಗಡುವಿನೊಳಗೆ ರಾಜ್ಯ ಸರ್ಕಾರದಿಂದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಅಥವಾ CBI ತನಿಖೆಗೆ ಸಂಬಂಧಿಸಿದ ನಿರ್ಧಾರ ಪ್ರಕಟವಾಗದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ನಗರ ವಿಭಾಗದ ಕಾರ್ಯದರ್ಶಿ ಅಭಿನಂದನ ಮಿರ್ಜಿ ತಿಳಿಸಿದ್ದಾರೆ.

KPSC ನಡೆಸಿದ 400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ. ಜುಲೈ 17ರಂದು ಪ್ರಕಟಗೊಂಡ ಫಲಿತಾಂಶಕ್ಕೆ ಸಂಬಂಧಿಸಿದಂತೆ OMR ಉತ್ತರ ಪತ್ರಿಕೆಗಳನ್ನು ತಿದ್ದುಪಡಿ ಮಾಡಲಾಗಿದೆ ಹಾಗೂ ಒಂದು ಹುದ್ದೆಗೆ ಸುಮಾರು 80 ಲಕ್ಷ ರೂ.ವರೆಗೆ ಹಣದ ಬೇಡಿಕೆ ಇಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ ಎಂದು ಸಂಘಟನೆ ಹೇಳಿದೆ.
ಈ ಹಗರಣವನ್ನು ಖಂಡಿಸಿ ABVP ಈ ಹಿಂದೆ KPSC ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿತ್ತು. ಆ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದರು. ಬಳಿಕ, ಪ್ರಕರಣವನ್ನು CBIಗೆ ವಹಿಸುವಂತೆ ಆಗ್ರಹಿಸಿ ABVP ಪತ್ರಿಕಾಗೋಷ್ಠಿ ನಡೆಸಿ ಸರ್ಕಾರಕ್ಕೆ ಆಗಸ್ಟ್ 4ರ ವರೆಗೆ ಗಡುವು ನೀಡಿತ್ತು. ಗಡುವು ಮುಗಿದರೂ ಸರ್ಕಾರದಿಂದ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಘೋಷಿಸಿದೆ.
ರಾಜ್ಯದ ಲಕ್ಷಾಂತರ ಯುವಕರು ಸರ್ಕಾರಿ ಉದ್ಯೋಗಕ್ಕಾಗಿ ವರ್ಷಗಳ ಕಾಲ ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆರೋಪಗಳು ಅಭ್ಯರ್ಥಿಗಳ ವಿಶ್ವಾಸಕ್ಕೆ ಧಕ್ಕೆ ತಂದಿವೆ. ಹೀಗಾಗಿ ಪ್ರಕರಣದ ಬಗ್ಗೆ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ CBIಗೆ ಪ್ರಕರಣವನ್ನು ವಹಿಸಬೇಕು ಎಂದು ABVP ಆಗ್ರಹಿಸಿದೆ.
ಈ ಕುರಿತು ಬೆಂಗಳೂರು ನಗರ ಕಾರ್ಯದರ್ಶಿ ಅಭಿನಂದನ ಮಿರ್ಜಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
