– ಅಕ್ರಮ ನಡೆದಿದ್ದರೆ 2018ರ ಹಿಂದೆ ಹಂಚಿಕೆಯಾದ ಸೈಟುಗಳೂ ರದ್ದು
ಮೈಸೂರು: 2019 ರಿಂದ 2023ರ ವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (MUDA) 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು ರದ್ದುಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಿಳಿಸಿದ್ದಾರೆ.
ಮುಡಾ ಸೈಟು ಹಂಚಿಕೆ ಹಗರಣ (MUDA Sice Scam) ಸಂಬಂಧ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ದಿಂದ 50:50 ಅನುಪಾತದಲ್ಲಿ ಸೈಟು ಪಡೆದ ಗ್ರಾಹಕರಿಗೆ ಶಾಕ್ ಕೊಟ್ಟಿದ್ದಾರೆ.
2019 ರಿಂದ 2023ರ ವರೆಗಿನ ಎಲ್ಲಾ 50:50 ಸೈಟುಗಳನ್ನ ರದ್ದುಪಡಿಸಲಾಗಿದೆ. 1,000 ಕ್ಕೂ ಹೆಚ್ಚು ಸೈಟುಗಳನ್ನ ರದ್ದುಮಾಡಲಾಗಿದೆ. 50:50 ಸೈಟುಗಳು ಮತ್ತು ಸೈಟುಗಳಲ್ಲಿ ಮನೆ ಕಟ್ಟಿದವರ ಲಿಸ್ಟ್ ತರಿಸುತ್ತಿದ್ದೇನೆ. ಸದ್ಯಕ್ಕೆ ಎಲ್ಲವನ್ನೂ ರದ್ದು ಮಾಡಲಾಗಿದೆ. ಕಾನೂನಾತ್ಮಕ ಹೋರಾಟ ಇರುವ ಸೈಟುಗಳ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

2018ರ ಹಿಂದೆ ಸೈಟು ಪಡೆದಿರುವ ಬಗ್ಗೆಯೂ ಪರಿಶೀಲನೆ
ಸಂಪೂರ್ಣ ಆದೇಶವನ್ನ ನಾವು ಪ್ರಾಧಿಕಾರಕ್ಕೆ ಕಳುಹಿಸಿದ್ದೇವೆ. ಆದೇಶ ಜಾರಿ ಮಾಡುವ ಕೆಲಸದಲ್ಲಿ ಅಧಿಕಾರಿಗಳು ಇದ್ದಾರೆ. 2018 ರ ಹಿಂದೆ ಸೈಟು ಪಡೆದಿರುವ ಬಗ್ಗೆಯೂ ಪರಿಶೀಲನೆ ನಡೆದಿದೆ. ಅಲ್ಲಿ ಅಕ್ರಮಗಳಾಗಿದ್ದರೇ ಅವನ್ನೂ ರದ್ದು ಮಾಡುತ್ತೇವೆ. ರಸ್ತೆಗೆ ತಮ್ಮ ಜಮೀನು ಕೊಟ್ಟು ಪರಿಹಾರ ಪಡೆದವರು ಕೂಡ ನಿವೇಶನ ಪಡೆದಿದ್ದಾರೆ. ಸಾಕಷ್ಟು ಅಕ್ರಮ ನಡೆದಿದೆ, ಹೀಗಾಗಿ ಎಲ್ಲವನ್ನೂ ರದ್ದು ಮಾಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

ಇನ್ನೂ ಸಚಿವ ನಾಗೇಂದ್ರ ವಿಚಾರವಾಗಿ ಪ್ರತಿಕ್ರಿಯಿಸಿ, ಸಚಿವ ನಾಗೇಂದ್ರ ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದರೆ ಬಿಜೆಪಿಯವರು ಚರ್ಚೆಗೆ ಬರಬೇಕಿತ್ತು. ಬಿಜೆಪಿಯವರು ಗದ್ದಲ ಮಾಡಿ ಅಧಿವೇಶನ ಕೆಡಿಸಿದರು. ನಾಗೇಂದ್ರ ಅವರ ವಿಚಾರದಲ್ಲಿ ಸಿಎಂ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿ ಪ್ರತಿಭಟನೆ ಮಾಡುವುದು ಬಿಟ್ಟು ಸದನದಲ್ಲಿ ಚರ್ಚೆ ಮಾಡಬಹುದಿತ್ತು ಎಂದು ಎಂದಿದ್ದಾರೆ.
