– 30-40 ವರ್ಷಗಳ ಬಿ-ಖಾತಾ ಸಂಕಷ್ಟಕ್ಕೆ ಮುಕ್ತಿ; ಎ-ಖಾತಾ ನೀಡುವ ವಿಧೇಯಕಕ್ಕೆ ಅಸ್ತು
ಬೆಂಗಳೂರು: ರಾಜ್ಯಾದ್ಯಂತ ಕಳೆದ 30-40 ವರ್ಷಗಳಿಂದ ಅನಧಿಕೃತ ಬಡಾವಣೆಗಳಲ್ಲಿ (Unauthorized layouts) ನಿವೇಶನ ಹಾಗೂ ಮನೆಗಳನ್ನ ಹೊಂದಿದವರಿಗೆ ಸರ್ಕಾರದಿಂದ ಬಿಗ್ ರಿಲೀಫ್ ಸಿಗ್ತಿದೆ.
‘ಬಿ-ಖಾತಾದಿಂದಾಗಿ (B – Khata) ಸಂಕಷ್ಟದಲ್ಲಿದ್ದ ಲಕ್ಷಾಂತರ ಕುಟುಂಬಗಳ ಅನುಕೂಲಕಕ್ಕಾಗಿ ರಾಜ್ಯ ಸರ್ಕಾರದ ಹೊಸ ಕಾಯ್ದೆಗೆ ಅಂಗೀಕಾರ ಸಿಕ್ಕಿದೆ. ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಸಂಪೂರ್ಣ ಮಾಲೀಕತ್ವದ ಹಕ್ಕು ಕಲ್ಪಿಸಿ, ಪಕ್ಕಾ ‘ಎ-ಖಾತಾ’ (A Khata) ನೀಡುವ ಅತ್ಯಂತ ಮಹತ್ವದ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ-2026′ ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಶುಕ್ರವಾರ ವಿಧಾನಸಭೆಯಲ್ಲಿ (Vidhan Sabha) ವಿಧೇಯಕದ ಬಗ್ಗೆ ವಿವರಣೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ʻರಾಜ್ಯದಲ್ಲಿ ಪ್ರತಿಯೊಬ್ಬ ಆಸ್ತಿ ಮಾಲೀಕನಿಗೂ ಸಂಪೂರ್ಣ ಆಸ್ತಿ ಭದ್ರತೆ ನೀಡುವುದು ನಮ್ಮ ಸರ್ಕಾರದ ಹಾಗೂ ಮುಖ್ಯಮಂತ್ರಿಗಳ ʻಭೂ ಗ್ಯಾರಂಟಿʼ ಸಂಕಲ್ಪವಾಗಿದೆ. ಅನಧಿಕೃತ ಬಡಾವಣೆಗಳ ಮೂಲಭೂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಗರ ಪಾಲಿಕೆಗಳ ಕಾಯ್ದೆಯ ಸೆಕ್ಷನ್ 284ಕ್ಕೆ ತಿದ್ದುಪಡಿ ತರಲಾಗುತ್ತಿದೆ ಅಂತೇಳಿದ್ರು.

ವಿಧೇಯಕದ ಪ್ರಮುಖ ಅಂಶಗಳು:
ಸಾರ್ವಜನಿಕ ರಸ್ತೆ ಎಂದು ಘೋಷಣೆ:
ಅನಧಿಕೃತ ಬಡಾವಣೆಗಳನ್ನು ನಿರ್ಮಿಸುವಾಗ ಬಿಡಲಾಗಿರುವ ರಸ್ತೆಗಳು ಈಗಲೂ ಮೂಲ ಜಮೀನು ಮಾಲೀಕರ ಹೆಸರಿನಲ್ಲೇ ಇವೆ. ಹೊಸ ತಿದ್ದುಪಡಿಯ ಪ್ರಕಾರ, ಈ ರಸ್ತೆಗಳನ್ನು ಸ್ಥಳೀಯ ನಗರಪಾಲಿಕೆ ಅಥವಾ ಮುನ್ಸಿಪಾಲಿಟಿ ದಾಖಲೆಗಳಲ್ಲಿ ‘ಸಾರ್ವಜನಿಕ ರಸ್ತೆ’ ಎಂದು ಅಧಿಕೃತವಾಗಿ ಘೋಷಿಸಲು ಕಾನೂನು ಅವಕಾಶ ಸಿಗಲಿದೆ.
ಬಿ-ಖಾತಾದಿಂದ ‘ಎ-ಖಾತಾ’ಗೆ ಬಡ್ತಿ:
ರಸ್ತೆಗಳು ಅಧಿಕೃತಗೊಳ್ಳುತ್ತಿದ್ದಂತೆ, ಆ ಬಡಾವಣೆಗಳಲ್ಲಿರುವ ನಿವೇಶನ ಮತ್ತು ಮನೆಗಳಿಗೆ ನಿಯಮಾನುಸಾರ ಪಕ್ಕಾ ‘ಎ-ಖಾತಾ’ ನೀಡಲಾಗುವುದು. ಇದರಿಂದ ಆಸ್ತಿಗೆ ಶೇ.100 ರಷ್ಟು ಪರಿಪಕ್ವ ಮಾಲೀಕತ್ವ ದೊರೆಯಲಿದೆ.
ಸಾರ್ವಜನಿಕರಿಗೆ ಸಿಗುವ ಪ್ರಯೋಜನಗಳು:
ಎ-ಖಾತಾ ದೊರೆಯುವುದರಿಂದ ಆಸ್ತಿ ಮಾಲೀಕರಿಗೆ ಬ್ಯಾಂಕುಗಳಿಂದ ಸುಲಭವಾಗಿ ಗೃಹ/ಆಸ್ತಿ ಸಾಲ ಸಿಗಲಿದೆ. ಜೊತೆಗೆ ಕಟ್ಟಡ ನಕ್ಷೆ ಮಂಜೂರಾತಿ (Plan Approval) ಮತ್ತು ವಾಸಯೋಗ್ಯ ಪ್ರಮಾಣಪತ್ರ (Occupancy Certificate – OC) ಪಡೆಯಲು ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.

ರಾಜ್ಯಾದ್ಯಂತ ವಿಸ್ತರಣೆ:
ಈ ವ್ಯವಸ್ಥೆಯನ್ನು ಈಗಾಗಲೇ ಬೆಂಗಳೂರು ನಗರದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯದ ಎಲ್ಲಾ ನಗರಪಾಲಿಕೆಗಳು, ಪುರಸಭೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ವಿಸ್ತರಿಸಲಾಗುತ್ತಿದೆ.
ಹೊಸ ಅಕ್ರಮಗಳಿಗೆ ತಡೆ:
ಹಳೆಯ ಅಕ್ರಮಗಳಿಗೆ ನಿಯಮಾನುಸಾರ ಪರಿಹಾರ ಕಲ್ಪಿಸುವ ಜೊತೆಗೆ, ಭವಿಷ್ಯದಲ್ಲಿ ಯಾವುದೇ ಹೊಸ ಅನಧಿಕೃತ ಬಡಾವಣೆಗಳು ತಲೆಎತ್ತದಂತೆ ಸರ್ಕಾರ ಸಂಪೂರ್ಣ ತಡೆ ಹಾಕಿದೆ.

