ಕೆಆರ್‌ಎಸ್‌ ಮಾದರಿ ಡಿಸ್ನಿಲ್ಯಾಂಡ್ ಅಭಿವೃದ್ಧಿ: ಸಿ.ಪಿ.ಯೋಗೇಶ್ವರ್

1 Min Read

ಮಂಡ್ಯ: ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಭಾರೀ ವಿವಾದಕ್ಕೀಡಾಗಿದ್ದ ಡಿಸ್ನಿಲ್ಯಾಂಡ್ ಯೋಜನೆ ಮತ್ತೆ ಸುದ್ದಿಯಾಗುತ್ತಿದೆ. ಕೆಆರ್‍ಎಸ್ ಮಾದರಿಯಲ್ಲಿ ಡಿಸ್ನಿಲ್ಯಾಂಡ್ ಅಭಿವೃದ್ಧಿಗೆ ಪ್ರವಾಸೋದ್ಯಮ ಸಚಿವರಾದ ಸಿ.ಪಿ.ಯೋಗೇಶ್ವರ್ ಆಸಕ್ತಿ ತೋರಿದ್ದಾರೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ ಯೋಜನೆಗೆ ಪ್ಲಾನ್ ಮಾಡಲಾಗಿತ್ತು. ಈ ಯೋಜನೆ ರಾಜ್ಯದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ವಿವಾದ ಹೆಚ್ಚಾಗುತ್ತಿದ್ದಂತೆ ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು. ಇದೀಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲೂ ಕೂಡ ಡಿಸ್ನಿಲ್ಯಾಂಡ್ ಮಾದರಿ ಯೋಜನೆಯನ್ನು ಜಾರಿಗೆ ತರಲು ತಯಾರಿ ಶುರುವಾಗಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಿ.ಪಿ.ಯೋಗೇಶ್ವರ್ ಪ್ರವಾಸೋದ್ಯಮ ಖಾತೆ ಸಚಿವರಾಗಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪಣತೊಟ್ಟಿರುವ ಸೈನಿಕ ಮತ್ತೆ ಡಿಸ್ನಿಲ್ಯಾಂಡ್ ಮಾದರಿ ಯೋಜನೆಗೆ ಆಸಕ್ತಿ ತೋರಿದ್ದಾರೆ.

ಮಂಡ್ಯದ ಕೆ.ಆರ್.ಎಸ್.ನ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಪಿ ಯೋಗೇಶ್ವರ್, ಕೆಆರ್‍ಎಸ್ ಮಾದರಿಯಲ್ಲಿ ಡಿಸ್ನಿಲ್ಯಾಂಡ್ ಅಭಿವೃದ್ಧಿಗೊಳಿಸುವ ಮೂಲಕ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಮುಂದಾಗಿದ್ದೇವೆ. ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಶೀಘ್ರವೇ ಅವರು ನಿರ್ಧಾರ ಪ್ರಕಟಿಸಲಿದ್ದಾರೆ. ಸಿಎಂ ನಿರ್ಧಾರದ ಬಳಿಕ ಗ್ಲೋಬಲ್ ಟೆಂಡರ್ ಕರೆದು ಅಭಿವೃದ್ಧಿ ಮಾಡ್ತೇವೆ ಎಂದರು.

ಈ ಮೊದಲು ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಭೆಯಲ್ಲಿ ಕಂದಾಯ, ಪ್ರವಾಸೋದ್ಯಮ, ನೀರಾವರಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಸಚಿವ ಯೋಗೇಶ್ವರ್ ನಿರ್ಧಾರಕ್ಕೆ ತಿಳಿಸುತ್ತಿದ್ದಂತೆ ಆರಂಭದಲ್ಲೇ ಅಪಸ್ವರ ಕೇಳಿ ಬಂದಿದೆ. ಒಂದೆಡೆ, ಪರಿಸರವಾದಿಗಳು ಮತ್ತು ರೈತರು ಕಳೆದ ಬಾರಿಯಂತೆ ಈ ಬಾರಿಯೂ ತೀವ್ರ ವಿರೋಧಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಕೂಡ ಸಚಿವರ ಕನಸಿಗೆ ತಣ್ಣೀರೆರಚುವ ರೀತಿ ಮಾತನಾಡಿದ್ದಾರೆ.

ಡಿಸ್ನಿಲ್ಯಾಂಡ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ನನ್ನ ಕ್ಷೇತ್ರದ ಜನರಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ. ಅನ್ಯಾಯ ಆಗುವಂತ ಕಾಮಗಾರಿ ಮಾಡೋದಕ್ಕೂ ನಾನು ಆಸ್ಪದ ಕೊಡುವುದಿಲ್ಲ, ಅಂತಹ ಕಾಮಗಾರಿ ನನ್ನ ಕ್ಷೇತ್ರದಲ್ಲಿ ನಡೆಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *