ಬೆಂಗಳೂರು: ಬಿಜೆಪಿಯವರು ಜೈ ಶ್ರೀರಾಮ ಎನ್ನುತ್ತಲೇ ಜನರನ್ನ ಕೊಲ್ಲುತ್ತಿದ್ದಾರೆ. ಅವರು ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲವನ್ನೂ ಮುಗಿಸಿ ಹಾಕುತ್ತಾರೆ ಎನ್ನುವ ಭಯದ ವಾತಾವರಣ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೆಪಿಸಿಸಿ ಕಾನೂನು ಘಟಕ ಆಯೋಜಿಸಿದ್ದ ಚಿಂತನಾ ಸಭೆಯಲ್ಲಿ ಮಾತನಾಡಿ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವೇ ಗೆಲ್ಲಬೇಕು, ಅಧಿಕಾರಕ್ಕೆ ಬರಬೇಕು, ನಮ್ಮವರೇ ಪ್ರಧಾನಿಯಾಗಬೇಕು ಎನ್ನುವ ವಿಚಾರದಿಂದ ಈ ಮಾತು ಹೇಳುತ್ತಿಲ್ಲ. ಬಿಜೆಪಿ ನೇತೃತ್ವದ ಕೆಟ್ಟ ಸರ್ಕಾರ ಮತ್ತು ಕೆಟ್ಟ ಚಿಂತನೆಯನ್ನು ತೊಲಗಿಸಬೇಕಿದೆ. ಹೀಗಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರದಂತೆ ಜನರು ಎಚ್ಚರಿಕೆವಹಿಸಬೇಕು ಎಂದು ಹೇಳಿದರು.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಳಿ ತಪ್ಪುತ್ತಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರೇ ಆತಂಕ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ದೇಶದ ಇತಿಹಾದಲ್ಲೇ ಮೊದಲ ಬಾರಿಗೆ ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿದರು. ಆದರೆ ಬಿಜೆಪಿಯು ಕಟ್ಟು ಕತೆ ಕಟ್ಟಿ ಜನರನ್ನ ನಂಬಿಸುವ ಹುನ್ನಾರ ನಡೆದಿದೆ ಎಂದು ಕಿಡಿಕಾರಿದರು.
ದೇಶವು ಸರ್ವಾಧಿಕಾರದ ಅಡಿ ಮುನ್ನಡೆಯುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಬಲಪಂಥೀಯ ಚಿಂತನೆ ದೇಶದಲ್ಲಿ ಬಲಗೊಳ್ಳುತ್ತಿದೆ. ಹೀಗೆ ಮುಂದುವರಿದಲ್ಲಿ ದೇಶ ಸ್ಥಿತಿ ಏನಾಗುತ್ತೆ? ಎಂದ ಅವರು, ಈ ಬಗ್ಗೆ ಲೋಕಸಭೆ ಚುನಾವಣೆನಲ್ಲಿ ಜನರು ತೀರ್ಮಾನ ಮಾಡಬೇಕಿದೆ ಎಂದರು.
ಪಾಕಿಸ್ತಾನ ಮಾದರಿಯಲ್ಲೇ ಭಾರತವನ್ನು ಮೂಲಭೂತವಾದಿ ರಾಷ್ಟ್ರವಾಗಿ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಗೌರಿ ಲಂಕೇಶ್, ಎಂ.ಎಂ.ಕಲ್ಬುರ್ಗಿ, ಪನ್ಸಾರೆ ಇವರನ್ನು ಕೊಲೆ ಮಾಡಿದ್ದು ಯಾರು? ಇಂತಹದ್ದನ್ನೇ ತಿನ್ನಬೇಕು. ಇದನ್ನೇ ಆಚರಿಸಬೇಕು ಎನ್ನುವ ಮನಸ್ಥಿತಿ ನಿರ್ಮಾಣವಾಗ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಂತನಾ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಐಸಿಸಿ ಕಾರ್ಯದರ್ಶಿ ಮಧು ಎಸ್ಕಿಗೌಡ, ಶಾಸಕಿ ಸೌಮ್ಯರೆಡ್ಡಿ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಭಾಗಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv