ಮಡಿಕೇರಿ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರ (Dubare Elephant camp) ಮತ್ತೆ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ. ಆದರೆ ಆನ್ಲೈನ್ನಲ್ಲಿ ಚೆಕ್ ಮಾಡಿದ್ರೆ ಮಾತ್ರ ಗೂಗಲ್ ಮುಖಪುಟದಲ್ಲಿ ಇನ್ನೂ ʻತಾತ್ಕಾಲಿಕ ಬಂದ್ʼ (Temporarily closed) ಎಂದೇ ತೋರಿಸಲಾಗುತ್ತಿದೆ. ಇದರಿಂದ ಆನ್ಲೈನ್ನಲ್ಲಿ ಚೆಕ್ ಮಾಡಿಕೊಂಡು ಬರುವ ಪ್ರವಾಸಿಗರು ಗೊಂದಲಕ್ಕೀಡಾಗುತ್ತಿದ್ದಾರೆ.
ಇನ್ನು ಶಿಬಿರದಲ್ಲಿ ಪ್ರವಾಸಿಗರ ಸುರಕ್ಷತೆಯ (Tourist safety) ದೃಷ್ಟಿಯಿಂದ ಸೀಮಿತ ಪ್ರಮಾಣದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ವೀಕ್ಷಣಾ ಸಮಯ ಹಾಗೂ ಪ್ರವೇಶದ ಅವಕಾಶವನ್ನು ಮತ್ತಷ್ಟು ವಿಸ್ತರಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಹಾಗಾದ್ರೆ ದುಬಾರೆಯಲ್ಲಿ ಎದುರಾಗಿರುವ ಸಮಸ್ಯೆಗಳೇನು? ಸ್ಥಳೀಯರ ಬೇಡಿಕೆಗಳೇನು? ಅಂತಾ ನೋಡೋದಾದ್ರೆ…
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರವನ್ನ ಕಳೆದ ಕೆಲವು ತಿಂಗಳ ಹಿಂದೆ ಆನೆಗಳ ಕಾಳಗದ ಹಿನ್ನೆಲೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.
ಮಾರ್ತಾಂಡ ಮತ್ತು ಕಂಜನ್ ಎಂಬ ಆನೆಗಳ ನಡುವಿನ ಕಾಳಗದಲ್ಲಿ ಒಂದು ಆನೆ ಹಾಗೂ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆ ಅರಣ್ಯ ಇಲಾಖೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿತ್ತು. ಬಳಿಕ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಹಲವು ಹಂತಗಳ ಚರ್ಚೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಸರ್ಕಾರದ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಜಾರಿಗೊಳಿಸಿದ ನಂತರ ಮತ್ತೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಯಿತು. ಆದರೆ ಶಿಬಿರ ಮತ್ತೆ ಆರಂಭವಾಗಿದ್ದರೂ ಗೂಗಲ್ನಲ್ಲಿ ಚೆಕ್ ಮಾಡಿದ್ರೆ ಇನ್ನೂ ‘Temporarily closed’ ಎಂದೇ ತೋರಿಸುತ್ತಿದೆ.
ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ಬರುವ ಪ್ರವಾಸಿಗರು ಆನ್ಲೈನ್ ಮಾಹಿತಿಯನ್ನೇ ನಂಬಿಕೊಂಡು ಪ್ರಯಾಣ ಬೆಳೆಸುತ್ತಾರೆ. ಹೀಗಾಗಿ ಕೆಲವರು ದುಬಾರೆಗೆ ಬರುವುದನ್ನೇ ಕೈಬಿಟ್ಟರೆ, ಇನ್ನೂ ಕೆಲವರು ಸ್ಥಳೀಯರಿಂದ ಮಾಹಿತಿ ಪಡೆದು ಸಾಕಷ್ಟು ದೂರ ಪ್ರಯಾಣಿಸಿ ಶಿಬಿರಕ್ಕೆ ಆಗಮಿಸುತ್ತಿದ್ದಾರೆ.
ಇನ್ನು ದುಬಾರೆ ಸಾಕಾನೆ ಶಿಬಿರದ ವೀಕ್ಷಣೆಗೆ ಬೆಳಿಗ್ಗೆ 9 ರಿಂದ 11.30ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಜೆ ವೇಳೆಯಲ್ಲೂ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಸಂಜೆ ಅವಧಿಯಲ್ಲಿ ಹೆಚ್ಚುವರಿಯಾಗಿ 400 ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅಂದರೆ ಬೆಳಿಗ್ಗೆ ಮತ್ತು ಸಂಜೆ ಪ್ರತ್ಯೇಕ ಅವಧಿಗಳಲ್ಲಿ ತಲಾ 400 ಪ್ರವಾಸಿಗರಿಗೆ ಅವಕಾಶ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಆದ್ರೆ ಆನ್ಲೈನ್ನಲ್ಲಿ ಇನ್ನೂ ಅಪ್ಡೇಟ್ ಆಗದೇ ಇರೋದು ಪ್ರವಾಸಿಗರ ಗೊಂದಲಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ದುಬಾರೆ ಪ್ರವಾಸೋದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರಿವರ್ ರ್ಯಾಫ್ಟಿಂಗ್ ಮಾಲೀಕರು ಹಾಗೂ ಗೈಡ್ಗಳಿಗೂ ಪ್ರವಾಸಿಗರ ಸಂಖ್ಯೆಯ ಮಿತಿ ಸಮಸ್ಯೆಯಾಗಿ ಪರಿಣಮಿಸಿದೆ. ದಿನವೊಂದಕ್ಕೆ ಒಟ್ಟು 800 ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡುತ್ತಿರುವುದರಿಂದ ಈ ಮಿತಿಯನ್ನು ಹೆಚ್ಚಿಸಬೇಕೆಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ.
ಪ್ರವಾಸಿಗರ ಸುರಕ್ಷತೆಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಆದರೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಿ, ಆನೆಗಳ ಆರೋಗ್ಯ ಮತ್ತು ಆರೈಕೆಗೆ ತೊಂದರೆಯಾಗದ ರೀತಿಯಲ್ಲಿ ವೀಕ್ಷಣೆಯ ಅವಕಾಶವನ್ನು ಹೆಚ್ಚಿಸಬೇಕು. ದಿನವೊಂದಕ್ಕೆ ಸುಮಾರು 1,500ರಿಂದ 1,600 ಪ್ರವಾಸಿಗರಿಗೆ ಅವಕಾಶ ಕಲ್ಪಿಸಿದರೆ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಜೊತೆಗೆ ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಸ್ಥಳೀಯ ಕುಟುಂಬಗಳ ಜೀವನೋಪಾಯಕ್ಕೂ ನೆರವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.


