– ಕ್ಷೇತ್ರ ಪುನರ್ವಿಂಗಡಣೆಯಿಂದ ಭಾರತದ ಚುನಾವಣಾ ನಕ್ಷೆಯೇ ಬದಲು?
ಭಾರತದಲ್ಲಿ ಸಂಸದೀಯ ಪ್ರಾತಿನಿಧ್ಯದ ಪ್ರಮಾಣ ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ. ಭಾರತದಲ್ಲಿ ಒಬ್ಬ ಲೋಕಸಭಾ (Lok Sabha) ಸದಸ್ಯ ಸರಾಸರಿ 26.3 ಲಕ್ಷ ಜನರನ್ನ ಪ್ರತಿನಿಧಿಸುತ್ತಾರೆ. ಆದ್ರೆ ಅಮೆರಿಕದ ಪ್ರಾತಿನಿಧ್ಯಕ್ಕೆ ಹೋಲಿಸಿದ್ರೆ ಸುಮಾರು 3.3 ಪಟ್ಟು ಹೆಚ್ಚಾಗಿದೆ.
ಅಮೆರಿಕದಲ್ಲಿ (America) ಒಬ್ಬ ಜನಪ್ರತಿನಿಧಿ ಸರಾಸರಿ 8.02 ಲಕ್ಷ ಜನರನ್ನ ಪ್ರತಿನಿಧಿಸುತ್ತಾರೆ. ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂಸದೀಯ ಪ್ರಾತಿನಿಧ್ಯವನ್ನ ಹೋಲಿಕೆ ಮಾಡಿದಾಗ ಭಾರತ ಮತ್ತು ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಡುವೆ ದೊಡ್ಡ ಅಂತರ ಇರುವುದು ಸ್ಪಷ್ಟವಾಗುತ್ತದೆ.
ಭಾರತದ (India) ಜನಸಂಖ್ಯೆ ಸುಮಾರು 142 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಲೋಕಸಭೆಯಲ್ಲಿ 543 ನೇರವಾಗಿ ಆಯ್ಕೆಯಾದ ಸದಸ್ಯರಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ, ಒಬ್ಬ ಸಂಸದ ಸರಾಸರಿ 26.3 ಲಕ್ಷ ಜನರನ್ನ ಪ್ರತಿನಿಧಿಸುತ್ತಾರೆ. ದೇಶದ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂಬ ವಾದಕ್ಕೆ ಈ ಅಂಕಿಅಂಶಗಳು ಆಧಾರವಾಗಿವೆ.
India has changed enormously over the last 50 years. Our population has grown, new cities have emerged, and the needs of citizens have evolved. Shouldn’t our political representation reflect these changes too? #DelimitationBill https://t.co/Auo1jYCqLY
— Arjun Ram Meghwal (@arjunrammeghwal) November 28, 2026
ಯುರೋಪ್ ರಾಷ್ಟ್ರಗಳೊಂದಿಗೆ ಹೋಲಿಸಿದ್ರೆ ವ್ಯತ್ಯಾಸ ಸ್ಪಷ್ಟ
ಬ್ರಿಟನ್ನಲ್ಲಿ ಒಬ್ಬ ಸಂಸದ ಸರಾಸರಿ 1.08 ಲಕ್ಷ ಜನರನ್ನ ಪ್ರತಿನಿಧಿಸಿದರೆ, ಕೆನಡಾದಲ್ಲಿ 1.18 ಲಕ್ಷ, ಫ್ರಾನ್ಸ್ನಲ್ಲಿ 1.20 ಲಕ್ಷ ಹಾಗೂ ಜರ್ಮನಿಯಲ್ಲಿ 1.33 ಲಕ್ಷ ಜನರನ್ನು ಪ್ರತಿನಿಧಿಸುತ್ತಾರೆ. ಇಟಲಿಯಲ್ಲಿ ಒಬ್ಬ ಜನಪ್ರತಿನಿಧಿಗೆ ಸರಾಸರಿ 1.47 ಲಕ್ಷ ಜನರಿದ್ದರೆ, ಆಸ್ಟ್ರೇಲಿಯಾದಲ್ಲಿ ಈ ಪ್ರಮಾಣ ಸುಮಾರು 1.82 ಲಕ್ಷ ಇದೆ.
ಅದೇ ರೀತಿ ಸುಮಾರು 34.90 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕದಲ್ಲಿ ಜನಪ್ರತಿನಿಧಿಗಳ ಸಭೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) 435 ಚುನಾಯಿತ ಸದಸ್ಯರನ್ನ ಹೊಂದಿದೆ. ಅಲ್ಲಿ ಒಬ್ಬ ಪ್ರತಿನಿಧಿಗೆ ಸರಾಸರಿ 8.02 ಲಕ್ಷ ಜನರಿದ್ದಾರೆ. ಆದರೂ ಭಾರತದ ಹೋಲಿಕೆಯಲ್ಲಿ ಅಮೆರಿಕದಲ್ಲಿ ಪ್ರಾತಿನಿಧ್ಯದ ಪ್ರಮಾಣ ಉತ್ತಮವಾಗಿದೆ.
ಈ ಪಟ್ಟಿಯಲ್ಲಿ ಐಲ್ಯಾಂಡ್ ಅತ್ಯಂತ ಕಡಿಮೆ ಜನಸಂಖ್ಯೆ – ಪ್ರತಿನಿಧಿ ಅನುಪಾತ ಹೊಂದಿದೆ. ಅಲ್ಲಿ ಒಬ್ಬ ಚುನಾಯಿತ ಸದಸ್ಯ ಸರಾಸರಿ 6,390 ಜನರನ್ನು ಪ್ರತಿನಿಧಿಸುತ್ತಾರೆ. ಲಕ್ಸೆಂಬರ್ಗ್ನಲ್ಲಿ ಈ ಸಂಖ್ಯೆ 11,460. ಫಿನ್ಲ್ಯಾಂಡ್ನಲ್ಲಿ ಒಬ್ಬ ಪ್ರತಿನಿಧಿಗೆ 28,110 ಜನರಿದ್ದರೆ, ಸ್ವೀಡನ್ನಲ್ಲಿ 30,660, ಐರ್ಲೆಂಡ್ನಲ್ಲಿ 30,790 ಹಾಗೂ ನಾರ್ವೆಯಲ್ಲಿ 33,450 ಜನರಿದ್ದಾರೆ.
ಭಾರತದ ಸಂಸದೀಯ ಪ್ರಾತಿನಿಧ್ಯವೇ ಸವಾಲು
ಇನ್ನು ಜಪಾನ್ನಲ್ಲಿ ಒಬ್ಬ ಚುನಾಯಿತ ಪ್ರತಿನಿಧಿಗೆ ಸರಾಸರಿ 2.63 ಲಕ್ಷ ಜನರಿದ್ದರೆ, ಬ್ರೆಜಿಲ್ನಲ್ಲಿ 4.16 ಲಕ್ಷ ಹಾಗೂ ದಕ್ಷಿಣ ಆಫ್ರಿಕಾದಲ್ಲಿ 1.64 ಲಕ್ಷ ಜನರಿದ್ದಾರೆ. ಈ ಅಂಕಿಅಂಶಗಳು ಭಾರತದ ಸಂಸದೀಯ ಪ್ರಾತಿನಿಧ್ಯದ ಸವಾಲನ್ನು ಎತ್ತಿತೋರಿಸುತ್ತವೆ. 140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಒಬ್ಬ ಸಂಸದ ನಿರ್ವಹಿಸಬೇಕಾದ ಕ್ಷೇತ್ರದ ವ್ಯಾಪ್ತಿ ಮತ್ತು ಜನಸಂಖ್ಯೆ ಇತರ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ದೊಡ್ಡದಾಗಿದೆ. ಹೀಗಾಗಿ ಲೋಕಸಭೆಯ ಸದಸ್ಯರ ಸಂಖ್ಯೆ ಹೆಚ್ಚಿಸುವುದು ಮತ್ತು ಕ್ಷೇತ್ರ ಪುನರ್ವಿಂಗಡಣೆ ಕುರಿತ ಚರ್ಚೆ ಮಹತ್ವ ಪಡೆದುಕೊಂಡಿದೆ.
ಭಾರತದ ಚುನಾವಣಾ ನಕ್ಷೆಯೇ ಬದಲು?
ದೇಶದಲ್ಲಿ ಕ್ಷೇತ್ರ ಪುನರ್ವಿಂಗಡಣೆ (Delimitation) ವಿಚಾರವಾಗಿ ರಾಜಕೀಯ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಹಂಚಿಕೊಂಡಿರುವ ಚುನಾವಣಾ ನಕ್ಷೆ ಕುತೂಹಲ ಮೂಡಿಸಿದೆ. ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಕಾನೂನಾಗಿ ಜಾರಿಯಾದರೆ ದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹಾಗೂ ರಾಜ್ಯವಾರು ಸ್ಥಾನಗಳ ಹಂಚಿಕೆಯಲ್ಲಿ ಮಹತ್ವದ ಬದಲಾವಣೆಗಳಾಗಲಿವೆ ಎಂಬ ಚರ್ಚೆ ಆರಂಭವಾಗಿದೆ.
ಪ್ರಸ್ತುತ ಲೋಕಸಭೆಯಲ್ಲಿ 543 ಸ್ಥಾನಗಳಿದ್ದು, ಪ್ರಸ್ತಾವಿತ ಚೌಕಟ್ಟಿನ ಪ್ರಕಾರ ಈ ಸಂಖ್ಯೆಯನ್ನ ಶೇ.50ರಷ್ಟು ಹೆಚ್ಚಿಸಿ 816ಕ್ಕೆ ಏರಿಸುವ ಉದ್ದೇಶವಿದೆ. ಈ ಬದಲಾವಣೆಯಿಂದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಹೆಚ್ಚಿನ ಸಂಸದೀಯ ಪ್ರಾತಿನಿಧ್ಯ ದೊರೆಯಲಿದೆ ಎಂಬುದು ಕೇಂದ್ರ ಸರ್ಕಾರದ ವಾದವಾಗಿದೆ.
ರಾಜಸ್ಥಾನದ ಬಿಕಾನೇರ್ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಮೇಘವಾಲ್, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ನಕ್ಷೆಯನ್ನು ಹಂಚಿಕೊಂಡು, ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ಹೇಳಿದ್ದಾರೆ. ಜೊತೆಗೆ ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಯನ್ನು 543ರಿಂದ 816ಕ್ಕೆ ಹೆಚ್ಚಿಸುವ ಮೂಲಕ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾತಿನಿಧ್ಯವನ್ನ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ಅಗತ್ಯವನ್ನೂ ಮೇಘವಾಲ್ ಪ್ರತಿಪಾದಿಸಿದ್ದಾರೆ. ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ನೀತಿ ನಿರೂಪಣೆಯಲ್ಲಿ ವಿಭಿನ್ನ ದೃಷ್ಟಿಕೋನಗಳು ಮತ್ತು ನೈಜ ಜೀವನದ ಅನುಭವಗಳಿಗೆ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.
ಕಳೆದ 50 ವರ್ಷಗಳಲ್ಲಿ ಭಾರತದಲ್ಲಿ ಬದಲಾವಣೆ ಸಾಕಷ್ಟು
ಕಳೆದ 5 ದಶಕಗಳಲ್ಲಿ ಭಾರತ ಸಾಕಷ್ಟು ಬದಲಾಗಿದೆ. ದೇಶದ ಜನಸಂಖ್ಯೆ ಹೆಚ್ಚಾಗಿದೆ, ಹೊಸ ನಗರಗಳು ಬೆಳೆದಿವೆ ಹಾಗೂ ಜನರ ಅಗತ್ಯಗಳು ಬದಲಾಗಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪ್ರಾತಿನಿಧ್ಯದಲ್ಲಿಯೂ ಈ ಬದಲಾವಣೆಗಳು ಪ್ರತಿಫಲಿಸಬೇಕಲ್ಲವೇ? ಬೆಳೆಯುತ್ತಿರುವ ಭಾರತದ ಅಗತ್ಯಗಳಿಗೆ ಅನುಗುಣವಾಗಿ ಪ್ರಾತಿನಿಧ್ಯವನ್ನು ವಿಸ್ತರಿಸುವ ಉದ್ದೇಶದಿಂದ ಪ್ರಸ್ತಾವಿತ 132ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತರಲಾಗುತ್ತಿದೆ ಎನ್ನುತ್ತಾರೆ ಮೇಘವಾಲ್.
ಶಿಕ್ಷಣ, ಆರೋಗ್ಯ, ಕಲ್ಯಾಣ ಯೋಜನೆಗಳು ಮತ್ತು ಕುಟುಂಬಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಲ್ಲಿ ಹೆಚ್ಚಿನ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಅನುಕೂಲವಾಗಲಿದೆ ಎಂಬುದು ಸರ್ಕಾರದ ಅಭಿಪ್ರಾಯ.
ನ. 30ರಿಂದ ಸಂಸತ್ತಿನ ವಿಶೇಷ ಅಧಿವೇಶನ
ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಸಂವಿಧಾನದ 132ನೇ ತಿದ್ದುಪಡಿ ಮಸೂದೆಯನ್ನು ಮತ್ತೆ ಮಂಡಿಸಲು ಉದ್ದೇಶಿಸಲಾಗಿದೆ. ಈ ಬಾರಿ ಮಸೂದೆ ಅಂಗೀಕಾರವಾಗುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರವಿದೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ವೈಎಸ್ಆರ್ ಕಾಂಗ್ರೆಸ್ ಪಕ್ಷ, ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಮತ್ತು ಎನ್ಸಿಪಿ (ಶರದ್ ಪವಾರ್ ಬಣ) ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಮಸೂದೆಗೆ ಬೆಂಬಲ ಘೋಷಿಸಿವೆ. ಈ ಪಕ್ಷಗಳ ಬೆಂಬಲದಿಂದ ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ 3ನೇ ಎರಡರಷ್ಟು ಬಹುಮತ ಪಡೆಯಲು ಸರ್ಕಾರಕ್ಕೆ ನೆರವಾಗಬಹುದು ಎಂಬ ನಿರೀಕ್ಷೆಯಿದೆ.
ಆದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮಸೂದೆಯನ್ನ ವಿರೋಧಿಸುತ್ತಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಆಡಳಿತಾರೂಢ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮುಂದಾಗಿರುವ ಮತ್ತೊಂದು ತಂತ್ರ ಇದಾಗಿದೆ ಎಂದು ಟೀಕಿಸಿದ್ದಾರೆ.
ಒಟ್ಟಿನಲ್ಲಿ, ಲೋಕಸಭೆಯ ಸ್ಥಾನಗಳ ಹೆಚ್ಚಳ, ರಾಜ್ಯವಾರು ಪ್ರಾತಿನಿಧ್ಯ, ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ ವಿಚಾರಗಳು ಮುಂಬರುವ ದಿನಗಳಲ್ಲಿ ದೇಶದ ರಾಜಕೀಯ ಚರ್ಚೆಯ ಪ್ರಮುಖ ವಿಷಯಗಳಾಗುವ ಸಾಧ್ಯತೆಯಿದೆ.



