– ಕರ್ನಾಟಕದ ಲಾರಿ ಮಾಲೀಕರು, ಕ್ರಷರ್ ಉದ್ಯಮಿಗಳಿಗೆ ಆರ್ಥಿಕ ಸಂಕಷ್ಟ
– ನ.30ರೊಳಗೆ ನಿರ್ಬಂಧ ತೆರವಿಗೆ ಗಡುವು
ಆನೇಕಲ್: ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಂ-ಸ್ಯಾಂಡ್ ಹಾಗೂ ಜಲ್ಲಿ ಸಾಗಾಟಕ್ಕೆ ತಮಿಳುನಾಡು ಸರ್ಕಾರ (Tamil Nadu Government) ನಿರ್ಬಂಧ ವಿಧಿಸಿರುವುದನ್ನ ಖಂಡಿಸಿ ಲಾರಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 6 ತಿಂಗಳಿಂದ ತಮಿಳುನಾಡಿನಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಾಟಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿರುವ ಲಾರಿ ಮಾಲೀಕರು, ಸಮಸ್ಯೆಯನ್ನ ಕೂಡಲೇ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.
ಈ ಸಂಬಂಧ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಲಾರಿ ಮತ್ತು ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿದ್ದಾರೆ. ತಮಿಳುನಾಡು ಸರ್ಕಾರ ನಿರ್ಬಂಧ ವಿಧಿಸಿರೋದ್ರಿಂದ ಕರ್ನಾಟಕದ ಲಾರಿ ಮಾಲೀಕರು (Lorry Owners), ಕ್ರಷರ್ ಉದ್ಯಮಿಗಳು ಹಾಗೂ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಳೆದ 6 ತಿಂಗಳಿಂದ ತಮಿಳುನಾಡು ಸರ್ಕಾರ ಕರ್ನಾಟಕಕ್ಕೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಾಟಕ್ಕೆ ಅಡ್ಡಿಪಡಿಸುತ್ತಿದೆ. ಇದರಿಂದ ಅಂತರರಾಜ್ಯ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದ್ದು, ಸಾರಿಗೆ ಉದ್ಯಮದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಜೊತೆಗೆ ಚೆನ್ನೈ ಹೈಕೋರ್ಟ್ ನವೆಂಬರ್ 14 ರಂದು ಸಾಮಗ್ರಿಗಳ ಸಾಗಾಟಕ್ಕೆ ಅನುಮತಿ ನೀಡಿದ್ದರೂ, ತಮಿಳುನಾಡು ಸರ್ಕಾರ ನಿರ್ಬಂಧ ಮುಂದುವರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಿಂದ ಪ್ರತಿದಿನ ಸುಮಾರು 4.56 ಲಕ್ಷ ಟನ್ ಕಟ್ಟಡ ಸಾಮಗ್ರಿಗಳು ವಿವಿಧ ರಾಜ್ಯಗಳಿಗೆ ಸಾಗಣೆಯಾಗುತ್ತಿವೆ. ಬಳ್ಳಾರಿಯಿಂದಲೂ ಸುಮಾರು 30 ಸಾವಿರ ಟನ್ ಸಾಮಗ್ರಿಗಳು ಹೊರರಾಜ್ಯಗಳಿಗೆ ರಫ್ತಾಗುತ್ತಿವೆ. ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಗೆ ಪ್ರತಿದಿನ ಸುಮಾರು 4,500 ಲಾರಿಗಳು ಸಂಚರಿಸುತ್ತಿವೆ. ಈ ಉದ್ಯಮ ಅವಲಂಬಿಸಿ ಸಾವಿರಾರು ಕುಟುಂಬಗಳು ಹಾಗೂ ಲಕ್ಷಾಂತರ ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ. ಸಾಗಾಟಕ್ಕೆ ಅಡ್ಡಿಯಾಗಿರುವುದರಿಂದ ಲಾರಿ ಮಾಲೀಕರಿಗೆ ಸಾಲದ ಕಂತು ಪಾವತಿಸುವುದೂ ಕಷ್ಟವಾಗಿದೆ. ಕ್ರಷರ್ ಉದ್ಯಮವೂ ನಷ್ಟ ಅನುಭವಿಸುತ್ತಿದೆ ಎಂದು ಹೇಳಿದ್ದಾರೆ
ಕರ್ನಾಟಕ ಸರ್ಕಾರ ಮಧ್ಯಸ್ಥಿಕೆ ವಹಿಸಿ ತಮಿಳುನಾಡು ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಮೈಸೂರು ರಸ್ತೆಯಲ್ಲಿ ಆರ್ಟಿಒ ಅಧಿಕಾರಿಗಳು ಮತ್ತು ಪೊಲೀಸರಿಂದ ಲಾರಿ ಮಾಲೀಕರಿಗೆ ಕಿರುಕುಳ ಹಾಗೂ ಹಣ ವಸೂಲಿ ನಡೆಯುತ್ತಿದೆ. ಅಧಿಕಾರಿಗಳ ಕಿರುಕುಳದಿಂದ ಇಬ್ಬರು ಲಾರಿ ಮಾಲೀಕರು ಮೃತಪಟ್ಟಿದ್ದಾರೆ. ಇದೇ ತಿಂಗಳು 30ರೊಳಗೆ ತಮಿಳುನಾಡು ಸರ್ಕಾರ ನಿರ್ಬಂಧ ತೆರವುಗೊಳಿಸದಿದ್ದರೆ ಆ ರಾಜ್ಯಕ್ಕೆ ಕಟ್ಟಡ ಸಾಮಗ್ರಿಗಳ ಸಾಗಾಟವನ್ನ ಸಂಪೂರ್ಣ ಸ್ಥಗಿತಗೊಳಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಷಣ್ಮುಗಪ್ಪ ಎಚ್ಚರಿಕೆ ನೀಡಿದ್ದಾರೆ.
